ಕೊಪ್ಪಳ-ಅಯೋಧ್ಯೆ ನಡುವೆ ರೈಲು; ದಿನಾಂಕಗಳು
ಕೊಪ್ಪಳ, ಜನವರಿ 25: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಬಳಿಕ ಶ್ರೀ ರಾಮನ ದರ್ಶನಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಕ್ತರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕರ್ನಾಟಕದಿಂದಲೂ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮನವಿಯಂತೆ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲುಗಳನ್ನು ಓಡಿಸಲು ಇಲಾಖೆ ಒಪ್ಪಿಗೆ ನೀಡಿದೆ. ಯಾವ ದಿನ ರೈಲುಗಳು ಸಂಚಾರ ನಡೆಸಲಿವೆ ಎಂದು ಮಾಹಿತಿ ನೀಡಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಅಯೋಧ್ಯೆಗೂ ನಂಟಿದೆ. ರಾಮ ಭಕ್ತ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟ ಕೊಪ್ಪಳ ಜಿಲ್ಲೆಯಲ್ಲಿದೆ. ಆದ್ದರಿಂದ ನೂರಾರು ಭಕ್ತರು ಇಲ್ಲಿಂದ ಶ್ರೀ ರಾಮನ ದರ್ಶನಕ್ಕಾಗಿ ತೆರಳುತ್ತಾರೆ. ಈ ರೈಲು ಸೇವೆಯಿಂದ ಅವರಿಗೆ ಅನುಕೂಲವಾಗಲಿದೆ.
ಭಾರತೀಯ ರೈಲ್ವೆ ಕೊಪ್ಪಳ-ಅಯೋಧ್ಯೆ, ಅಯೋಧ್ಯೆ-ಕೊಪ್ಪಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಶ್ರೀ ರಾಮಮ ದರ್ಶನ ಪಡೆಯಲು ಕೊಪ್ಪಳ ಮಾರ್ಗವಾಗಿ ರೈಲುಗಳು ಸಂಚಾರ ನಡೆಸಲಿದ್ದು, ಭಕ್ತಾಧಿಗಳು ಈ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.
ರೈಲುಗಳ ವಿವರ: ಜನವರಿ 31, ಫೆಬ್ರವರಿ 14 ಮತ್ತು 28ರ ಬುಧವಾರ ಬೆಂಗಳೂರು-ಅಯೋಧ್ಯೆ ರೈಲು. ಫೆಬ್ರವರಿ 3, 17 ಮತ್ತು ಮಾರ್ಚ್ 2ರ ಶನಿವಾರ ಅಯೋಧ್ಯಾ ಧಾಮ-ಬೆಂಗಳೂರು ರೈಲು. ಫೆಬ್ರವರಿ 4 ಮತ್ತು 18ರ ಭಾನುವಾರ ಮೈಸೂರು- ಅಯೋಧ್ಯಾ ಧಾಮ ರೈಲು. ಫೆಬ್ರವರಿ 7 ಮತ್ತು 21ರ ಬುಧವಾರ ಅಯೋಧ್ಯಾ ಧಾಮ-ಮೈಸೂರು ರೈಲು ಕೊಪ್ಪಳ ಮಾರ್ಗವಾಗಿ ಸಂಚಾರ ನಡೆಸಲಿದೆ.
ಫೆಬ್ರವರಿ 7 ಮತ್ತು 21ರ ಬುಧವಾರ ತುಮಕೂರು-ಅಯೋಧ್ಯಾ ಧಾಮ ರೈಲು. ಫೆಬ್ರವರಿ 10 ಮತ್ತು 24ರ ಶನಿವಾರ ಅಯೋಧ್ಯಾ ಧಾಮ-ತುಮಕೂರು ರೈಲು. ಫೆಬ್ರವರಿ 11 ಮತ್ತು 25ರ ಭಾನುವಾರ ಚಿತ್ರದುರ್ಗ-ಅಯೋಧ್ಯಾ ಧಾಮ ರೈಲು ಕೊಪ್ಪಳ ಮಾರ್ಗವಾಗಿ ಸಂಚಾರ ನಡೆಸಲಿವೆ.
ಫೆಬ್ರವರಿ 14 ಮತ್ತು 28ರ ಬುಧವಾರ ಅಯೋಧ್ಯಾ ಧಾಮ-ಚಿತ್ರದುರ್ಗ ರೈಲು. ಫೆಬ್ರವರಿ 17ರ ಶನಿವಾರ ಮೈಸೂರು-ಅಯೋಧ್ಯಾ ಧಾಮ ರೈಲು. ಫೆಬ್ರವರಿ 20ರ ಮಂಗಳವಾರ ಅಯೋಧ್ಯಾ ಧಾಮ-ಮೈಸೂರು ರೈಲು. ಫೆಬ್ರವರಿ 17ರ ಶನಿವಾರ ಬೆಳಗಾವಿ-ಅಯೋಧ್ಯಾ ಧಾಮ ರೈಲು ಮತ್ತು ಫೆಬ್ರವರಿ 20ರ ಮಂಗಳವಾರ ಅಯೋಧ್ಯಾ ಧಾಮ-ಬೆಳಗಾವಿ ರೈಲುಗಳು ಕೊಪ್ಪಳ ಮಾರ್ಗವಾಗಿ ಸಂಚರಿಸಲಿವೆ.
ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ಸಂಚಾರ ನಡೆಸುವ ಭಕ್ತರು ಈ ರೈಲುಗಳಲ್ಲಿ ಸಂಚಾರ ನಡೆಸಲು ಭಾರತೀಯ ರೈಲ್ವೆಯ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.












Click it and Unblock the Notifications