South Western Railway: ಈ 3 ರೈಲುಗಳ ಸಂಚಾರ ವಿಳಂಬ- ಎಷ್ಟು ದಿನ, ಏಕೆ ಹಾಗೂ ಯಾವ ಮಾರ್ಗಗಳಲ್ಲಿ?-ಮಾಹಿತಿ
ಬೆಂಗಳೂರು, ಡಿಸೆಂಬರ್, 15: ಕಾಮಗಾರಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಸಂಚಾರವನ್ನು ರದ್ದು ಮಾಡಲಾಗುತ್ತದೆ ಅಥವಾ ಸಮಯ ಬದಲಾವಣೆ ಮಾಡಲಾಗುತ್ತದೆ. ಹಾಗೆಯೆ ಇದೀಗ ರೈಲ್ವೆ ಕಾಮಗಾರಿ ಹಿನ್ನೆಲೆ ಬೆಳಗಾವಿ ಸೂಪರ್‌ಫಾಸ್ಟ್, ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಸೇರಿ 3 ರೈಲುಗಳು ವಿಳಂಬವಾಗಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ಈ ರೈಲುಗಳ ಸಂಚಾರ ಯಾವಾಗಿನಿಂದ ಹಾಗೂ ಎಲ್ಲಿಯವರೆಗೂ ವಿಳಂಬವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ ರೈಲ್ವೆ ಯಾರ್ಡ್‌ದಲ್ಲಿನ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ರಾಜ್ಯದ ಪ್ರಮುಖ ಮೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಣ ಮಾಡಲಾಗುತ್ತದೆ. ಈ ರೈಲು ಹೊರಡುವ ನಿಲ್ದಾಣದಿಂದ ಕೊನೆಯ ನಿಲ್ದಾಣದ ಮಧ್ಯೆ 60 ನಿಮಿಷ ತಡವಾಗಿ ಸಂಚರಿಸಲಿದೆ.
ಬೆಂಗಳೂರು-ಬೆಳಗಾವಿ ಸೂಪರ್‌ಫಾಸ್ಟ್
ಡಿಸೆಂಬರ್ 17 ಮತ್ತು 20, 2023ರಂದು ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 20653 ಕೆ.ಎಸ್.ಆರ್ ಬೆಂಗಳೂರು-ಬೆಳಗಾವಿ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್
ಜನವರಿ 4, 7 ಮತ್ತು 10, 2024ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲ್ ಗುಂಬಜ್ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್
ಜನವರಿ 4, 7 ಮತ್ತು 10, 2024 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಬೆಳಗಾವಿ- ಕಿತ್ತೂರು- ಧಾರವಾಡ ನೂತನ ರೈಲು ಮಾರ್ಗ
ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಬೆಳಗಾವಿ ವ್ಯಾಪ್ತಿಯಲ್ಲಿ ರೈಲ್ವೇ ಇಲಾಖೆ ಕೈಗೊಳ್ಳಬೇಕಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಬೆಳಗಾವಿ- ಕಿತ್ತೂರು- ಧಾರವಾಡ ನೂತನ ರೈಲು ಮಾರ್ಗ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಬೆಳಗಾವಿ ನಗರದ ಟಿಳಕವಾಡಿ ಲೆವಲ್ ಕ್ರಾಸಿಂಗ್ 381ರ ಮೇಲ್ಸೇತುವೆ ಎರಡನೇ ಹಂತದ ಕಾಮಗಾರಿ ಸ್ಥಗಿತಗೊಂಡು ಹಲವಾರು ತಿಂಗಳು ಗತಿಸಿದ್ದು, ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಲೆವಲ್ ಕ್ರಾಸಿಂಗ್ 382 ಮತ್ತು 383ರ ಮೇಲ್ಸೆತುವೆ ನಿರ್ಮಾಣಕ್ಕೆ ರೈಲ್ವೇ ಸಚಿವಾಲಯದಿಂದ ಅನುಮೋದನೆ ದೊರೆತಿದ್ದು, ಈ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು. ಬೆಳಗಾವಿಯಿಂದ ಮುಂಬರುವ ದಿನಗಳಲ್ಲಿಅಯೋಧ್ಯಾ ಶ್ರೀ ರಾಮ ಮಂದಿರ, ಪಂಢರಪುರ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ, ಶಬರಿಮಲೆ ಮೊದಲಾದ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ನೂತನ ರೈಲು ಸಂಚಾರ ಪ್ರಾರಂಭಿಸಬೇಕು ಎಂದು ಮನವಿ ನೀಡಿದರು.












Click it and Unblock the Notifications