ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ಹೊಸ ರೈಲು, ಕರ್ನಾಟಕಕ್ಕೂ ಅನುಕೂಲ
ಬೆಂಗಳೂರು, ಜುಲೈ 07: ಭಾರತೀಯ ರೈಲ್ವೆ ಪ್ರಯಾಣಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿದೆ. ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ನಡುವೆ ಹೊಸ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ. ಈ ರೈಲಿನಿಂದ ಕರ್ನಾಟಕಕ್ಕೆ ಸಹ ಅನುಕೂಲವಾಗಲಿದೆ.
ಹೊಸ ರೈಲು ಸೇವೆ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ನೂತನ ರೈಲಿಗೆ ಅನುಮೋದನೆ ನೀಡಲಾಗಿದೆ. ಈ ರೈಲು ವಾರಕ್ಕೆ 2 ದಿನ ಸಂಚರಿಸಲಿದೆ ಎಂದು ಹೇಳಿದ್ದಾರೆ.

ವಿ. ಸೋಮಣ್ಣ ಸಿಕಂದರಾಬಾದ್ ಜನತೆಯ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದು, ಸಿಕಂದರಾಬಾದ್-ವಾಸ್ಕೋ-ಡ-ಗಾಮಾ (ಗೋವಾ) ಎಕ್ಸ್‌ಪ್ರೆಸ್ ನೂತನ ರೈಲಿಗೆ ಅನುಮೋದನೆ ನೀಡಲಾಗಿದೆ. ಶೀಘ್ರವೇ ಈ ನೂತನ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕರ್ನಾಟಕಕ್ಕೆ ಅನುಕೂಲ: ರೈಲು ಸಂಖ್ಯೆ 17039/ 17040 ಸಿಕಂದರಾಬಾದ್-ವಾಸ್ಕೋ-ಡ-ಗಾಮಾ (ಗೋವಾ) ನಡುವೆ ವಾರಕ್ಕೆ ಎರಡು ದಿನ ಸಂಚಾರ ನಡೆಸಲಿದೆ. ರೈಲು ಸಿಕಂದರಾಬಾದ್‌ನಿಂದ ಬುಧವಾರ ಮತ್ತು ಶುಕ್ರವಾರ ಸಂಚಾರ ನಡೆಸಲಿದೆ. ವಾಸ್ಕೋ-ಡ-ಗಾಮಾ (ಗೋವಾ) ದಿಂದ ರೈಲು ಗುರುವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ.
ಸಿಕಂದರಾಬಾದ್-ವಾಸ್ಕೋ-ಡ-ಗಾಮಾ (ಗೋವಾ) ಎಕ್ಸ್‌ಪ್ರೆಸ್ ನೂತನ ರೈಲು ಸಂಚಾರ ಆರಂಭಕ್ಕೆ ಅನುಮೋದನೆ ನೀಡಿರುವುದಕ್ಕೆ ಕರ್ನಾಟಕದ ವಿವಿಧ ರೈಲ್ವೆ ಪ್ರಯಾಣಿಕರ ಸಂಘಗಳು ಸಚಿವ ವಿ. ಸೋಮಣ್ಣಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ರೈಲು ಕರ್ನಾಟಕ ಮೂಲಕ ಸಂಚಾರ ನಡೆಸುವುದರಿಂದ ರಾಜ್ಯಕ್ಕೆ ಸಹ ಉಪಯೋಗವಾಗಲಿದೆ.
ಸದ್ಯದ ವೇಳಾಪಟ್ಟಿ ಪ್ರಕಾರ ಸಿಕಂದರಾಬಾದ್-ವಾಸ್ಕೋ-ಡ-ಗಾಮಾ (ಗೋವಾ) ಎಕ್ಸ್‌ಪ್ರೆಸ್ ನೂತನ ರೈಲು ಕಾಚಿಗುಡ, ಮೆಹಬೂಬ್ ನಗರ, ಕರ್ನೂಲ್ ಸಿಟಿ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೇಂ, ಮಡಗಾಂವ್ ಜಂಕ್ಷನ್ ಮೂಲಕ ಸಂಚಾರ ನಡೆಸಲಿದೆ. 20 ಬೋಗಿಗಳನ್ನು ರೈಲು ಹೊಂದಿರಲಿದೆ.
ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ರೈಲು ಕರ್ನಾಟಕದಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡದ ಮೂಲಕ ಸಂಚಾರ ನಡೆಸಲಿದೆ. ಆದ್ದರಿಂದ ಕರ್ನಾಟಕದ ಜನರಿಗೆ ಸಹ ಈ ರೈಲು ಸೇವೆಯಿಂದ ಅನುಕೂಲವಾಗಲಿದೆ. ಆದ್ದರಿಂದ ಹೊಸ ರೈಲಿಗೆ ಅನುಮೋದನೆ ನೀಡಿದ್ದಕ್ಕೆ ವಿ. ಸೋಮಣ್ಣಗೆ ಧನ್ಯವಾದ ಸಲ್ಲಿಸಲಾಗಿದೆ.
ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಗೋವಾಕ್ಕೆ ಹಲವಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಈ ರೈಲು ಸೇವೆಯಿಂದ ಅವರಿಗೆ ಅನುಕೂಲವಾಗಲಿದೆ. ಅಲ್ಲದೇ ರೈಲು ಬಳ್ಳಾರಿಯಿಂದ ಧಾರವಾಡ ತನಕ ಸಂಚಾರ ನಡೆಸುವುದಿರಿಂದ ರಾಜ್ಯದೊಳಗೆ ಪ್ರಯಾಣಿಸುವ ಜನರಿಗೂ ಅನುಕೂಲವಾಗಿದೆ.
ಕರ್ನಾಟಕಕ್ಕೆ ಹೊಸ ಹೊಸ ರೈಲುಗಳು ಬೇಕು ಎನ್ನುವ ಬೇಡಿಕೆ ಇದೆ. ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಹೊಸ ರೈಲು ಘೋಷಣೆಯ ಬಗ್ಗೆ ನಿರೀಕ್ಷೆ ಇದೆ.
ಕೇಂದ್ರ ಹಣಕಾಸು ಸಚಿವರೂ ಆಗಿರುವ ನಿರ್ಮಲಾ ಸೀತಾರಾಮನ್ ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ. ಆಗ ವಂದೇ ಭಾರತ್ ಸೇರಿದಂತೆ ವಿವಿಧ ರೈಲು ಘೋಷಣೆಯಾಗಬಹುದು.












Click it and Unblock the Notifications