ಶಿವಮೊಗ್ಗ-ತಿರುಪತಿ ರೈಲು ಪುನರಾರಂಭ; ವೇಳಾಪಟ್ಟಿ
ಶಿವಮೊಗ್ಗ, ಮಾರ್ಚ್ 27; ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ಮಲೆನಾಡು ಮತ್ತು ತಿರುಪತಿ ಸಂಪರ್ಕಿಸುವ ಶಿವಮೊಗ್ಗ-ರೇಣಿಗುಂಟ ನಡುವಿನ ರೈಲು ಸೇವೆಯನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ರೈಲಿನ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. 2019-20ರಲ್ಲಿ ಪ್ರಾರಂಭಗೊಂಡಿದ್ದ ಶಿವಮೊಗ್ಗ-ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಸಹಾಯಕವಾಗಲಿದೆ.

ಶಿವಮೊಗ್ಗ-ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್‌ಪ್ರೆಸ್ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದು ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭದಲ್ಲಿ ಈ ಎರಡು ರೈಲು ಸೇವೆಗಳನ್ನು ಇಲಾಖೆ ಸ್ಥಗಿತಗೊಳಿಸಿತ್ತು. ಈಗ ಪುನಃ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸೇವೆಗಳನ್ನು ಆರಂಭಿಸಲಾಗಿದೆ.
ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ರೈಲು ಸಂಖ್ಯೆ 06223 ಶಿವಮೊಗ್ಗ-ಮದ್ರಾಸ್ ರೈಲು ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಸಂಜೆ 7ಕ್ಕೆ ಹಾಗೂ ರೈಲು ಸಂಖ್ಯೆ 06224 ಮದ್ರಾಸ್-ಶಿವಮೊಗ್ಗ ರೈಲು ಪ್ರತಿ ಸೋಮವಾರ ಮತ್ತು ಬುಧವಾರ ಮದ್ರಾಸ್‌ನಿಂದ ಮಧ್ಯಾಹ್ನ 3.30ಕ್ಕೆ ಸಂಚಾರ ಆರಂಭಿಸಲಿದೆ. ಮಲೆನಾಡು ಭಾಗದ ಜನರು ತಿರುಪತಿಯಲ್ಲಿ ದರ್ಶನ ಮುಗಿಸಿಕೊಂಡು ಮಧ್ಯಾಹ್ನ ರೈಲು ಏರಿ ವಾಪಸ್ ಆಗಮಿಸಲು ಈ ರೈಲು ಸಹಾಯಕವಾಗಿದೆ.

ತಿರುಪತಿ ಭಕ್ತರಿಗೆ ಅನುಕೂಲ; ಶಿವಮೊಗ್ಗ-ರೇಣಿಗುಂಟ (ತಿರುಪತಿ) ರೈಲು ಮಲೆನಾಡು ಭಾಗದ ಜನರು ತಿರುಪತಿಗೆ ಹೋಗಲು ಸಹಾಯಕವಾಗಿದೆ. ತಿರುಪತಿ ಸಮೀಪದ ರೇಣುಗುಂಟ ಜಂಕ್ಷನ್ ತನಕ ರೈಲು ಸಂಚಾರ ನಡೆಸುವುದರಿಂದ ಕಡಿಮೆ ಖರ್ಚಿನಲ್ಲಿ, ಹೆಚ್ಚು ಆಯಾಸವಿಲ್ಲದಂತೆ ರೈಲಿನಲ್ಲಿ ವೃದ್ಧರು, ಮಹಿಳೆಯರು ಪ್ರಯಾಣ ಮಾಡಿ ತಿರುಪತಿ ದೇವರ ದರ್ಶನ ಪಡೆಯಲು ಅನುಕೂವಿದೆ. ಮೊದಲು ಈ ರೈಲು ಮುಂಜಾನೆ ಶಿವಮೊಗ್ಗದಿಂದ ಹೊರಡುತ್ತಿತ್ತು. ಆಗ ದಿನವಿಡೀ ಜನರು ರೈಲಿನಲ್ಲಿ ಕಳೆಯಬೇಕಾಗಿತ್ತು. ಬಳಿಕ ರೈಲಿನ ವೇಳಾಪಟ್ಟಿ ಮತ್ತು ಮಾರ್ಗ ಬದಲಾವಣೆ ಮಾಡಲಾಗಿತ್ತು.
ಸಂಸದ ಬಿ. ವೈ. ರಾಘವೇಂದ್ರ ರೈಲ್ವೆ ಇಲಾಖೆಗೆ ಮನವಿ ಮಾಡಿ ಶಿವಮೊಗ್ಗ-ರೇಣಿಗುಂಟ (ತಿರುಪತಿ) ರೈಲು ವೇಳಾಪಟ್ಟಿ ಪರಿಷ್ಕರಣೆ ಮಾಡುವಂತೆ ಕೋರಿದ್ದರು. ಆಗ ಶಿವಮೊಗ್ಗದಿಂದ ಸಂಜೆ 7ಕ್ಕೆ ರೈಲು ಹೊರಡುವಂತೆ ವ್ಯವಸ್ಥೆ ಮಾಡಲಾಗಿತ್ತು. ರೇಣಿಗುಂಟದಲ್ಲಿಯೂ ಮಧ್ಯಾಹ್ನದ ಬಳಿಕ ರೈಲು ಹೊರಡುವುದರಿಂದ ಜನರು ದೇವರ ದರ್ಶನ ಮುಗಿಸಿ ರಾತ್ರಿ ಪ್ರಯಾಣ ಮಾಡಿ ಬೆಳಗ್ಗೆ ಶಿವಮೊಗ್ಗ ಸೇರಲು ಅನುಕೂಲವಾಗಿತ್ತು.
ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ ಮೂಲಕ ರೇಣಿಗುಂಟ ತಲುಪುತ್ತಿತ್ತು. ರೈಲು ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮೂಲಕ ಸಾಗುವುದರಿಂದ ವಿವಿಧ ಜಿಲ್ಲೆಯ ಜನರಿಗೆ ಸಹಾಯಕವಾಗಲಿದೆ.
ಬೆಂಗಳೂರಿಗೆ ಮತ್ತೊಂದು ರೈಲು; ರೈಲ್ವೆ ಇಲಾಖೆ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಹೇಳಿದೆ. ಇದರಿಂದಾಗಿ ಶಿವಮೊಗ್ಗ-ಬೆಂಗಳೂರು ನಡುವೆ ಮತ್ತೊಂದು ರೈಲು ಸಂಚಾರ ಆರಂಭವಾಗಲಿದೆ. ಮಲೆನಾಡಿನಿಂದ ರಾಜಧಾನಿ ಶಿವಮೊಗ್ಗಕ್ಕೆ ಸಂಚಾರ ನಡೆಸಲು ಜನರಿಗೆ ಅನುಕೂಲವಾಗಲಿದೆ. ಈ ವಿಶೇಷ ರೈಲನ್ನು ಸಹ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಬಳಿಕ ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು.
ಸಂಸದ ಬಿ. ವೈ. ರಾಘವೇಂದ್ರ ಭಾರತೀಯ ರೈಲ್ವೆಗೆ ಶಿವಮೊಗ್ಗ-ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಸಂಸದರ ಬೇಡಿಕೆಗೆ ಸ್ಪಂದಿಸಿದ ಇಲಾಖೆ ರೈಲು ಸೇವೆಯನ್ನು ಆರಂಭಿಸಲು ಒಪ್ಪಿಗೆ ನೀಡಿತ್ತು.











Click it and Unblock the Notifications