Shakti scheme: ಮೈಸೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಲಾಭ?, ಇಲ್ಲಿದೆ ವಿವರ
ಮೈಸೂರು, ಜೂನ್, 22: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಹಾಗೆಯೆ ಜಿಲ್ಲಾವಾರು ಈ ಯೋಜನೆಗಾಗಿಯೇ ಸಾರಿಗೆ ಬಸ್‌ಗಳನ್ನು ನಿಗಧಿಪಡಿಸಲಾಗಿದೆ. ಹಾಗಾದರೆ ಮೈಸೂರು ವಿಭಾಗದಲ್ಲಿ ಎಷ್ಟು ಬಸ್‌ಗಳನ್ನು ಕಲ್ಪಿಸಲಾಗಿದೆ ಹಾಗೂ ಇದರಿಂದ ಯಾವ ಕ್ಷೇತ್ರಕ್ಕೆ ಲಾಭ ಆಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಹೆಚ್ಚಿನ ಮಹಿಳೆಯರು ತೀರ್ಥಕ್ಷೇತ್ರಗಳತ್ತ ತೆರಳಲು ಆಸಕ್ತಿ ತೋರಿತ್ತಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಉದ್ಯೋಗ, ದೇವಾಲಯ ಹಾಗೂ ಸಂಬಂಧಿಕರ ಮನೆಗೆ ಹೋಗಲು ಹೆಚ್ಚಾಗಿ ಸಾರಿಗೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

ಇನ್ನು ಇಲ್ಲಿನ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಬೇರೆ ಜಿಲ್ಲೆಗಳಿಂದ ಮಹಿಳೆಯರ ದಂಡೇ ಹರಿದುಬಂದಿದೆ. ಅದರಲ್ಲೂ ಜಿಲ್ಲೆಯಲ್ಲಿ ಎತ್ತ ನೋಡಿದರೂ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ.
ಅದೇ ರೀತಿ ಹೊರನಾಡು, ಹಂಪಿ, ಮೈಸೂರು, ಬೇಲೂರು, ಹಾಸನ, ಉಡುಪಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಮಹಿಳೆಯರ ಆಗಮನ ಹೆಚ್ಚಾಗಿದೆ. ರಾಜ್ಯದ ಬಹುತೇಕ ಕಡೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವ ದೃಶ್ಯವನ್ನು ಪ್ರತಿನಿತ್ಯ ಕಾಣಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಚೇತರಿಕೆ ಕಾಣುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೈಸೂರು ವಿಭಾಗದಲ್ಲಿರುವ KSRTC ಬಸ್‌ಗಳ ವಿವರ
ಮೈಸೂರಿನ ವಿಭಾಗದಲ್ಲಿ 1071 ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಇವುಗಳಲ್ಲಿ 871 ಬಸ್‌ಗಳು ಉಚಿತ ಸೇವೆ ನೀಡುತ್ತಿವೆ. ನಗರ ವ್ಯಾಪ್ತಿಯಲ್ಲಿ 248, ಗ್ರಾಮಾಂತರ ವ್ಯಾಪ್ತಿಯಲ್ಲಿ 246 ಬಸ್‌ಗಳು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿವೆ. ಇನ್ನು 370 ಬಸ್‌ಗಳು ಅಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರತಿನಿತ್ಯ ಆಗುವ ನಷ್ಟ ಎಷ್ಟು?
ಸದ್ಯ ಮೈಸೂರು ವಿಭಾಗದಲ್ಲಿ ನಿತ್ಯ ಸರಾಸರಿ 4.09 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ದೈನಂದಿನ ವೆಚ್ಚ ₹1.67 ಕೋಟಿಗೆ ಪ್ರತಿಯಾಗಿ ₹1.26 ಕೋಟಿ ಆದಾಯ ಮಾತ್ರ ಸಂಗ್ರಹವಾಗುತ್ತಿದೆ. ಆದರೆ ಮೈಸೂರು ಕೆಎಸ್‌ಆರ್‌ಟಿಸಿ ವಿಭಾಗವು ನಿತ್ಯ ₹40.43 ಲಕ್ಷ ನಷ್ಟ ಅನುಭವಿಸುತ್ತಿದೆ ಎಂದು ತಿಳಿದುಬಂದಿದೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ನಿತ್ಯ ಶಕ್ತಿ ಯೋಜನೆಗೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಬಸ್‌ಗಳ ಪ್ರಮಾಣ ಮಾತ್ರ ಏರಿಕೆ ಆಗಿಲ್ಲ. ಇದರಿಂದ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಅಲಂಬಿಸಿದ ಮಹಿಳೆಯರು
ಬೆಂಗಳೂರು, ಮತ್ತಿತರ ಊರುಗಳಿಗೆ ರೈಲಿನ ಮೂಲಕ ಸಂಚರಿಸುವ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಹೆಜ್ಜೆ ಇರಿಸಿದ್ದು, ಇದರಿಂದ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆಗುತ್ತಿದೆ. ಮಹಿಳೆಯರು, ಅನಿವಾರ್ಯತೆ ಇದ್ದರೆ ಮಾತ್ರ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಿ, ಇಲ್ಲದಿದ್ದರೆ ಬೇಡ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications