ಈ ಬಿಸಿಲಿನ ಝಳ, ನೀರಿನ 'ಸಂಗಮ' ಅದೆಷ್ಟು ಹಿತ!: ಇಲ್ಲಿದೆ ನೋಡಿ ಬೆಂಗಳೂರಿನ ಸಮೀಪದ ಈ ಸ್ಥಳ
ಬೆಂಗಳೂರು, ಏಪ್ರಿಲ್. 21: ಅಬ್ಬಾ...ಮನೆಯಿಂದ ಹೊರ ಬಂದರೇ ಸಾಕು ಒಳಗೆ ಓಡಿ ಹೋಗಬೇಕು ಎನ್ನಿಸುತ್ತದೆ ಅಂತಹ ಬಿಸಿಲು. ಅದರಲ್ಲೂ ಮಕ್ಕಳನ್ನು ತಡೆಯುವುದು ಇದೆಯಲ್ಲ ಅದೊಂದು ಸಾಧನೆಯೇ ಸರಿ. ಬೇಸಿಗೆಯ ರಜೆಯಲ್ಲಿರುವ ಮಕ್ಕಳು ಟ್ರಿಪ್ ಕರೆದುಕೊಂಡು ಹೋಗಿ ಎಂದು ಪೀಡಿಸುತ್ತಲೆ ಇರುತ್ತಾರೆ. ಮನೆಯವರಿಗೆ ಎಲ್ಲಿಗೆ ಕರೆದುಕೊಂಡು ಹೋಗುವುದು ದೊಡ್ಡ ಕಷ್ಟ.
ಆದರೆ, ಮಕ್ಕಳ ಹಠಕ್ಕೆ ಎಲ್ಲಿಯಾದರೂ ಕಡೆದುಕೊಂಡು ಹೋಗಬೇಕು ಎನಿಸದೆ ಇರದು. ಅದಕ್ಕೆ ಸೂಕ್ತ ಸ್ಥಳ ಇಲ್ಲಿದೆ. ಈ ಬಿಸಿಲನ್ನು ಕೂಡ ಹೇಗೆ ಎಂಜಾಯ್ ಮಾಡಬಹುದು ಎನ್ನುವುದಕ್ಕೆ ಈ ಸ್ಥಳ ಉತ್ತಮ ಉದಾಹರಣೆ. ಅದೇ "ಸಂಗಮ".

ಸಂಗಮ. ಇದು ರಾಮನಗರ ಜಿಲ್ಲೆಯ ಕನಕಪುರದ ಬಳಿಯಿದೆ. ಸಂಗಮ ಎಂದರೆ ಸಂಧಿಸುವುದು ಮತ್ತು ವಿಲೀನಗೊಳ್ಳುವುದು ಎಂಬ ಅರ್ಥವಿದೆ. ಎರಡು ನದಿಗಳು ಒಂದು ಕಡೆ ಸೇರುವುದೇ ಸಂಗಮ. ಕಾವೇರಿ ಮುಖ್ಯ ನದಿ ಮತ್ತು ಅರ್ಕಾವತಿ ನದಿಗಳು ಒಂದಾಗುವ ಈ ಸ್ಥಳವನ್ನು ಸಂಗಮ ಎಂದು ಕರೆಯಲಾಗುತ್ತದೆ.
ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರ ಮತ್ತು ಆರೋಗ್ಯಕರ ಎಂದು ಹೇಳಲಾಗುತ್ತದೆ. ಇಲ್ಲಿ ನಂದಿ ಬೆಟ್ಟದಿಂದ ರಾಮನಗರ, ಕನಕಪುರಗಳ ಮೂಲಕ ಹರಿಯುವ ಅರ್ಕಾವತಿ ನದಿಯು ಕಾವೇರಿಯೊಂದಿಗೆ ವಿಲೀನಗೊಳ್ಳುತ್ತದೆ. ಇಲ್ಲಿಂದ ಅರ್ಕಾವತಿ ತನ್ನ ಗುರುತನ್ನು ಕಳೆದುಕೊಳ್ಳುತ್ತದೆ. ಇದನ್ನು ಮುಂದೆ ಕಾವೇರಿ ಎಂದು ಪರಿಗಣಿಸಲಾಗುತ್ತದೆ . ಇದೇ ಸಂಗಮ.

ಸಂಗಮವು ರಾಜಧಾನಿ ಬೆಂಗಳೂರಿನಿಂದ ಸುಮಾರು 94 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ NH209 ನಲ್ಲಿ ಹೊರಟರೇ ಕನಕಪುರದ ನಂತರ ಸುಮಾರು 20 ಕಿಮೀ ದೂರದಲ್ಲಿ ಒಂದು ಜಂಕ್ಷನ್ ಸಿಗುತ್ತದೆ ಅದರ ಮೂಲಕ ಹಳ್ಳಿಗಳ ನಡುವೆ ಹೋದರೆ ನೇರವಾಗಿ ಸಂಗಮಕ್ಕೆ ತಲುಪಬಹುದು.
ಸಂಗಮ ಒಂದು ಸುಂದರ ಪ್ರವಾಸಿ ತಾಣ. ಬೆಟ್ಟಗಳ ಸಾಲುಗಳ ಮಧ್ಯೆ ಹರಿಯುವ ಕಾವೇರಿಯನ್ನು ಕಣ್ತುಂಬಿಕೊಳ್ಳಬಹುದು. ನಿಸರ್ಗದಲ್ಲಿ ಬೆರೆತು ಹೋಗಬಹುದು. ಬೆಂಗಳೂರಿನಿಂದ ಒಂದು ದಿನದ ಟ್ರಿಪ್ ಹೊರಡುವವರಿಗೆ ಇದು ಹೇಳಿ ಮಾಡಿಸಿದ ಜಾಗ. ಸಂಗಮಕ್ಕೆ ಹೋಗುವ ದಾರಿಯಲ್ಲಿ ಹಳ್ಳಿಗಳ ಸೌಂದರ್ಯವನ್ನು ನೋಡಬಹುದು. ಐದು ಕಿಮೀಗಳ ಘಾಟ್ ದಾರಿಯಲ್ಲಿ ಸಾಗುವಾಗ ಪ್ರಕೃತಿಯನ್ನು ಕಣ್ಣು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿಯಬಹದು.

ಸದ್ಯ ಬೇಸಿಗೆಯಾಗಿರುವ ಕಾರಣ ಸಂಗಮದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆಳವಿಲ್ಲದ ಕಾರಣ ಆರಾಮಾವಾಗಿ ಮಕ್ಕಳ ಜೊತೆಗೆ ಆಟವಾಡಬಹುದು. ಬಿಸಿಲಿನ ಬೇಗೆಗೆ ದಣಿದಿರುವ ದೇಹವನ್ನು ಕಾವೇರಿಯಲ್ಲಿ ತಂಪುಗೊಳಿಸಬಹುದು. ಶುದ್ಧವಾದ ನೀರು ಮತ್ತು ಎತ್ತರವಾದ ಮರಗಳ ನಡುವೆ ಪ್ರವಾಸಿಗರು ತಮ್ಮನ್ನು ತಾವು ಮರೆಯುತ್ತಾರೆ.
ಇನ್ನು, ಇಲ್ಲಿನ ವಿಸ್ಮಯವೆಂದರೆ ನದಿಗಳ ಬಣ್ಣಗಳಲ್ಲಿನ ವ್ಯತ್ಯಾಸ. ಹೌದು ಅರ್ಕಾವತಿಯ ನೀರಿನ ಬಣ್ಣ ಸ್ವಲ್ಪ ಹಳದಿಯಾಗಿ ಕಾಣುತ್ತದೆ. ಆದರೆ ಕಾವೇರಿಯದು ತಿಳಿಯಾದ ಸ್ವಚ್ಛ ನೀರು. ಸಂಗಮದಲ್ಲಿ ಸಂಗಮೇಶ್ವರ ಎಂದು ಕರೆಯಲ್ಪಡುವ ಶಿವನ ಸಣ್ಣ ದೇವಾಲಯವಿದೆ.
ಇಲ್ಲಿಂದ ಮೇಕೆದಾಟುವಿಗೆ ಹೋಗಲು ಬಸ್‌ಗಳ ಸೌಲಭ್ಯವಿದೆ. ಬಂಡೆಗಳ ನಡುವೆ ಭೋರ್ಗರೆದು ಹರಿಯುವ ಕಾವೇರಿಯನ್ನು ಎತ್ತರದಿಂದ ನಿಂತು ನೋಡುವುದೇ ಆನಂದ. ಇನ್ನು ಸಂಗಮದ ಬಳಿ ಉತ್ತಮ ಮೀನೀನ ಊಟ, ಮೀನಿನ ಫ್ರೈಗಳು ಸಿಗುತ್ತವೆ. ಸ್ಥಳೀಯರು ಆಹಾರ ಪದಾರ್ಥಗಳನ್ನು ಮಾರುತ್ತಿರುತ್ತಾರೆ. ಆಹಾಗಿ ಊಟಕ್ಕೆ ತೊಂದರೆಯಿಲ್ಲ. ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಿಸಲು ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications