KSRTC; ಸಾಗರ-ಸೊರಬ-ಬೆಂಗಳೂರು ನಾನ್ ಎಸಿ ಸ್ಲೀಪರ್ ಬಸ್, ವೇಳಾಪಟ್ಟಿ
ಶಿವಮೊಗ್ಗ, ನವೆಂಬರ್ 08; ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿಸುದ್ದಿ. ಕೆಎಸ್ಆರ್‌ಟಿಸಿ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಸಾಗರ, ಸೊರಬ, ಶಿಕಾರಿಪುರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಆರಂಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಈ ಬಸ್‌ಗಳು ಸಂಚಾರ ನಡೆಸಲಿವೆ. ಸಾಗರದಿಂದ ಹೊರಡುವ ಬಸ್, ಸೊರಬ, ಶಿಕಾರಿಪುರ ಮಾರ್ಗವಾಗಿ ಶಿವಮೊಗ್ಗ ತಲುಪಿ ಅಲ್ಲಿಂದ ಬೆಂಗಳೂರಿಗೆ ಸಂಚಾರ ನಡೆಸಲಿದೆ.

ನವೆಂಬರ್ 5ರ ಭಾನುವಾರ ಸೊರಬದಲ್ಲಿ ನೂತನ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್‌ಗಳ ಸಂಚಾರಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ, ಸೊರಬದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗದಲ್ಲಿ 2 ಬಸ್‌ಗಳನ್ನು ಓಡಿಸಲಾಗುತ್ತಿದೆ.
ಬಸ್‌ನ ವೇಳಾಪಟ್ಟಿ ಮಾಹಿತಿ; ಕೆಎಸ್‍ಆರ್‌ಟಿಸಿ ಶಿವಮೊಗ್ಗ ವಿಭಾಗದ ಸಾಗರ ಘಟಕ ಸಾಗರ-ಸೊರಬ-ಬೆಂಗಳೂರು (ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ಮಾರ್ಗದಲ್ಲಿ ನೂತನವಾದ ಎರಡು ನಾನ್ ಎಸಿ ಸ್ಲೀಪರ್ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.
ಸಾಗರ-ಸೊರಬ-ಬೆಂಗಳೂರು ಮಾರ್ಗದ ಬಸ್ ಸಾಗರದಿಂದ ರಾತ್ರಿ 9ಕ್ಕೆ ಹೊರಡಲಿದೆ. ಸೊರಬಕ್ಕೆ 10 ಗಂಟೆ, ಶಿಕಾರಿಪುರಕ್ಕೆ 11ಗಂಟೆ, 12 ಗಂಟೆಗೆ ಶಿವಮೊಗ್ಗ ತಲುಪಲಿದೆ. ಭದ್ರಾವತಿಯಿಂದ ರಾತ್ರಿ 12.30ಕ್ಕೆ ಹೊರಟು, ಬೆಂಗಳೂರು ನಗರಕ್ಕೆ ಬೆಳಗ್ಗೆ 6.30ಕ್ಕೆ ತಲುಪಲಿದೆ.
ಬೆಂಗಳೂರು-ಸೊರಬ-ಸಾಗರ ಮಾರ್ಗದ ಬಸ್ ಬೆಂಗಳೂರು ನಗರದಿಂದ ರಾತ್ರಿ 9.25ಕ್ಕೆ ಹೊರಡಲಿದೆ. ಭದ್ರಾವತಿಗೆ ರಾತ್ರಿ 1.50, ಶಿವಮೊಗ್ಗಕ್ಕೆ ರಾತ್ರಿ 2.20, ಶಿಕಾರಿಪುರಕ್ಕೆ ಮುಂಜಾನೆ 3.20, ಸೊರಬಕ್ಕೆ 5.40, ಸಾಗರವನ್ನು 6.40ಕ್ಕೆ ತಲುಪಲಿದೆ ಎಂದು ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿದ್ದಾರೆ.
ಈ ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಸಂಚಾರ ನಡೆಸಲು ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಯಾಣಿಕರು www.ksrtc.in ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಬಹುದಾಗಿದೆ.
ಶಿವಮೊಗ್ಗ-ಬೆಂಗಳೂರು ನಡುವೆ ಸಾಕಷ್ಟು ಬಸ್‌ಗಳಿವೆ. ಸಾಗರ-ಸೊರಬ-ಶಿಕಾರಿಪುರ ಮಾರ್ಗದ ಮೂಲಕ ಬೆಂಗಳೂರಿಗೆ ಬಸ್ ಸೇವೆ ಒದಗಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಕೆಎಸ್ಆರ್‌ಟಿಸಿ ಹೊಸದಾಗಿ ಆರಂಭಿಸಿರುವ 'ಪಲ್ಲಕ್ಕಿ' ಮಾದರಿ ಬಸ್‌ಗಳನ್ನು ಈ ಮಾರ್ಗಕ್ಕೆ ನಿಯೋಜನೆ ಮಾಡಿದೆ.
ಭಾನುವಾರ ಸೊರಬ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎಸ್ಆರ್‌ಟಿಸಿಯ ನೂತನ ಹವಾನಿಯಂತ್ರಣ ರಹಿತ 'ಪಲ್ಲಕ್ಕಿ' ಮಾದರಿ ಸ್ಲೀಪರ್ ಬಸ್ ಸೇವೆಗೆ ಸಚಿವ ಮಧು ಬಂಗಾರಪ್ಪ ಹಸಿರು ನಿಶಾನೆ ತೋರಿಸಿದರು. ಜನರು ಬಸ್ ಸೇವೆ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಎಸ್ಆರ್‌ಟಿಸಿ ಕಳೆದ ತಿಂಗಳು 'ಪಲ್ಲಕ್ಕಿ' ಹೆಸರಿನ ನೂತನ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ಗಳು ಸ್ಲೀಪರ್ ಮಾದರಿಯದ್ದು, ಆದರೆ ಎಸಿ ಸೌಲಭ್ಯವನ್ನು ಹೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬಸ್ ಸೇವೆಗಳಿಗೆ ಚಾಲನೆ ನೀಡಿದ್ದರು.
'ಪಲ್ಲಕ್ಕಿ' ಹೆಸರಿನ ಬಸ್ 11.3 ಮೀಟರ್ ಉದ್ದವಿದೆ. ಬಿಎಸ್-6 ತಂತ್ರಜ್ಞಾನ ಮಾದರಿ ಹೆಚ್‌ಪಿ ಇಂಜಿನ್ ಹೊಂದಿದೆ. 30 ಸೀಟುಗಳನ್ನು ಹೊಂದಿದ್ದು, ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ಇದೆ. ಬಸ್‌ನಲ್ಲಿ ಆಡಿಯೋ ಸ್ಪೀಕರ್ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಚಾಲಕರಿಗೆ ಸಹಾಯಕವಾಗಲು ಬಸ್ ಹಿಂಭಾಗದಲ್ಲಿ ಸಹ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಮಾದರಿ ಬಸ್‌ಗಳಿಗೆ 'ಪಲ್ಲಕ್ಕಿ' ಎಂಬ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದರು. ಅದೇ ಹೆಸರಿನಲ್ಲಿ ಬಸ್ ಕಾರ್ಯಾಚರಣೆ ಮಾಡುತ್ತಿದೆ.
'ಪಲ್ಲಕ್ಕಿ' ಮಾದರಿ ಬಸ್‌ಗಳು ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಸಹ ಸಂಚಾರ ನಡೆಸುತ್ತಿವೆ. ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು ಮತ್ತು ಕೊಪ್ಪಳ ಹಾಗೂ ಹೊರ ರಾಜ್ಯದಲ್ಲಿ ಪಾಂಡಿಚೇರಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ ಮತ್ತು ಕುಂಭಕೋಣಂಗೆ ಸಂಚಾರ ನಡೆಸುತ್ತದೆ.












Click it and Unblock the Notifications