ಶೀಘ್ರದಲ್ಲೇ ನಂದಿಗಿರಿಧಾಮದಲ್ಲಿ ನಟ ಶಂಕರ್‌ನಾಗ್ ಕನಸಿನ ರೋಪ್ ವೇ ಕಾಮಗಾರಿ ಆರಂಭ, ಉನ್ನತ ಶಿಕ್ಷಣ ಸಚಿವ
ಚಿಕ್ಕಬಳ್ಳಾಪುರ, ಅಕ್ಟೋಬರ್, 28: ವಿಶ್ವ ವಿಖ್ಯಾತ ಪ್ರವಾಸಿತಾಣ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಮೂರು ಕಿ.ಮೀ ಉದ್ದದ ರೋಪ್ ವೇ ಅಳವಡಿಸಲು ಅಗತ್ಯವಿರುವ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದ್ದಾರೆ.
ನಂದಿಗಿರಿಧಾಮದಲ್ಲಿ ರೋಪ್ ವೇ ಅಳವಡಿಸಲು ಸರ್ಕಾರ ತೀರ್ಮಾನಿಸಿ ಈಗಾಗಲೇ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಕೆಲಸ ಆರಂಭ ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರು ಇದೀಗ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ನಂದಿಗಿರಿಧಾಮದಲ್ಲಿ ಮೂರು ಕಿ.ಮೀ ಉದ್ದದ ರೋಪ್ ವೇಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ನಂದಿಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಯಿಂದಲೇ ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗಮನಸೆಳೆಯಲು ತೀರ್ಮಾನಿಸಲಾಗಿದೆ.
ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ತೋಟಗಾರಿಕೆ ಇಲಾಖೆ ಮಾಲೀಕತ್ವದಲ್ಲಿ ನಂದಿ ಗಿರಿಧಾಮದಲ್ಲಿರುವ ಎಲ್ಲಾ ಆಸ್ತಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.
ರೋಪ್ ವೇ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ 9 ಎಕರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಸೇರಿದ 7 ಎಕರೆ ಜಮೀನನ್ನು ಹಸ್ತಾಂತರ ಮಾಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ರೈತರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 18 ತಿಂಗಳ ಅವಧಿಯಲ್ಲಿ ರೋಪ್ ವೇ ನಿರ್ಮಾಣವಾಗಲಿದ್ದು, ಬಂಡವಾಳ ಹೂಡುವ ರೋಪ್ ವೇ ನಿರ್ಮಾಣ ಸಂಸ್ಥೆಗೆ 30 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು.
ಮೂರು ಕಿ.ಮೀ ಉದ್ದದ ರೋಪ್ ವೇನಲ್ಲಿ 50 ಕೇಬಲ್ ಕಾರ್‌ಗಳು ಹೋಗುವ ಮತ್ತು 50 ಕೇಬಲ್ ಕಾರ್‌ಗಳು ಬರುವ ವ್ಯವಸ್ಥೆಯಿದ್ದು, ಪ್ರತಿ ಕಾರ್‌ನಲ್ಲಿ ಆರು ಜನರು ಕುಳಿತುಕೊಳ್ಳಲು ಅವಕಾಶ ಇರುತ್ತದೆ ಎಂದರು.
ವಾರಾಂತ್ಯದ ದಿನಗಳು ಹಾಗೂ ರಜಾ ದಿನಗಳಲ್ಲಿ ನಂದಿಗಿರಿಧಾಮಕ್ಕೆ ನಾಲ್ಕು ಸಾವಿರ ವಾಹನಗಳು ಬರುತ್ತಿರುವ ಅಂಕಿಅಂಶಗಳಿದ್ದು, ವಾಹನದಟ್ಟಣೆ ತಡೆಯಲು ವಾಹನ ಪಾರ್ಕಿಂಗ್ ಸ್ಥಳದಿಂದಲೇ ಪ್ರವಾಸಿಗರನ್ನು ಕರೆದೊಯ್ಯಲು ವಾಹನವ್ಯವಸ್ಥೆ ಮಾಡಲಾಗುವುದು. ನಂದಿಗಿರಿಧಾಮದಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಂದಿಗಿರಿಧಾಮದ ಸಮಗ್ರ ಅಭಿವೃದ್ಧಿಯನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೂಡಿ ಬಂದ ಬಹು ದಶಕಗಳ ಪ್ರವಾಸಿಗರ ಕನಸು
ಅಸಂಖ್ಯಾತ ಪ್ರವಾಸಿಗರ ಬಹು ದಶಕಗಳ ಕನಸನ್ನು ನನಸಾಗಿಸುವ ಕಾರ್ಯಕ್ಕೆ ವೇಗ ದೊರೆತಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಶಂಕರ್‌ನಾಗ್ ಅವರು ಪಂಚಗಿರಿ ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಿಸಬೇಕು ಎಂದು ಆಗ್ರಹಿಸಿದ್ದರು. ಅವರ ಆಶಯ ಮುಂದಿನ 18 ತಿಂಗಳಲ್ಲಿ ಈಡೇರಲಿದೆ ಎಂದರು.
ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಪ್ರಸ್ತುತ ಈ ವೆಚ್ಚ 115 ಕೋಟಿಗೆ ಹೆಚ್ಚಾಗಲಿದೆ. ಮೊದಲು ಅಂದಾಜಿಸಲಾಗಿದ್ದ ಕಾಮಗಾರಿಗಳ ಜೊತೆಗೆ ಕೆಲವು ಕಾಮಗಾರಿಗಳು ಸೇರ್ಪಡೆ ಆಗಿವೆ ಎಂದರು.
ಡೈನಾಮಿಕ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ನಿರ್ಮಾಣ, ವಿನ್ಯಾಸ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT)ಚೌಕಟ್ಟಿನ ಮೇಲೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಐತಿಹಾಸಿಕ ತಾಣ ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿರುವ ನಂದಿ ಬೆಟ್ಟ ಟ್ರಕ್ಕಿಂಗ್, ಸೈಕ್ಲಿಂಗ್ ಮತ್ತು ಪ್ಯಾರಾಗ್ರೆಡಿಂಗ್ ನಂತಹ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದಿದೆ.
ಇಂತಹ ತಾಣ ತಲುಪಲು ರೋಪ್‌ವೇನ ವೇಗ ಮತ್ತು ಪರಿಸರ ಸ್ನೇಹಿ ಸಾರಿಗೆ ಸೌಲಭ್ಯ, ಅನುಕೂಲ ಕಲ್ಪಿಸುವುದರೊಂದಿಗೆ ತಲುಪುವ ಸಮಯ ಉಳಿಸಲಾಗುತ್ತದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರದೇಶದ ವೈಮಾನಿಕ ಚಿತ್ರಣ ನೀಡುವುದರ ಜೊತೆಗೆ ಈ ಭಾಗದಲ್ಲಿ ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಲಿದೆ.
ರೋಪ್‌ವೇ ನಿರ್ಮಾಣ ಸುಗಮ ಸಂಪರ್ಕದ ಜೊತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್‌ನಲ್ಲಿ ಸೂಕ್ತ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್‌ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೋರೆಂಟ್, ಮಳಿಗೆಗಳು ಇರುತ್ತವೆ.
ಬೆಟ್ಟದ ಮೇಲಿನ ಟರ್ಮಿನಲ್‌ನಲ್ಲಿ ಫುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್‌ಗಳು, ವಿಶ್ರಾಂತಿ ಕೊಠಡಿಗಳು ನಿರ್ಮಾಣ ಆಗಲಿವೆ. ನಿರ್ಮಿತ ರೋಪ್ ವೇಗೆ ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣ ತಲುಪಲು ಅಂದಾಜು 13-15 ನಿಮಿಷಗಳು ಆಗಲಿದೆ. ಪ್ರತಿ ಗಂಟೆಗೆ ಅಂದಾಜು 1,000 ಜನರನ್ನು ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣಕ್ಕೆ ಕರೆದೊಯ್ಯಬಹುದು. 50 ಕ್ಯಾಚಿನ್‌ಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಕ್ಯಾಚಿನ್‌ನಲ್ಲಿ 6 ಪ್ರಯಾಣಿಕರನ್ನು ಕರೆದೊಯ್ಯಬಹುದು. ಈ ಯೋಜನೆಯಿಂದಾಗಿ ಹೆಚ್ಚಿನ ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂದು ತಿಳಿಸಿದರು.
ಈ ಯೋಜನೆಯಿಂದಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ದೇವನಹಳ್ಳಿ ಕೋಟೆ, ನಂದಿ, ಭೋಗನಂದೀಶ್ವರ, ಘಾಟಿ ಸುಬ್ರಹ್ಮಣ್ಯ, ವಿದುರಾಶ್ವತ್ಥ, ಮುದ್ದೇನಹಳ್ಳಿ ಮುಂತಾದ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿವೆ. ಈ ನಿಟ್ಟಿನಲ್ಲಿ ಟ್ಯೂರಿಸ್ಟ್ ಸರ್ಕಿಟ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹಳ ಹತ್ತಿರವಿರುವ ಕಾರಣ ದೇಶಿಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮ್ ಪ್ರಶಾಂತ್ ಮನೋಹರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಡಾ.ಅನುರಾಧ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥ ಅಶೋಕ್, ತಹಶೀಲ್ದಾರ್ ಅನಿಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯಶ್ವಂತ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications