ಪಂಚಗಂಗಾ ಎಕ್ಸ್‌ಪ್ರೆಸ್; ಕರಾವಳಿ ಪ್ರಯಾಣಿಕರ ಬೇಡಿಕೆ ಏನು?
ಮಂಗಳೂರು, ಜನವರಿ 30: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ಪ್ರಮುಖ ರೈಲು ಪಂಚಗಂಗಾ ಎಕ್ಸ್‌ಪ್ರೆಸ್. ಪ್ರತಿನಿತ್ಯ ಈ ರೈಲಿನಲ್ಲಿ ನೂರಾರು ಜನರು ಸಂಚಾರ ನಡೆಸುತ್ತಾರೆ. ಪ್ರಯಾಣಿಕರು ಈ ರೈಲಿನ ಕುರಿತು ಹಲವು ಬೇಡಿಕೆಗಳನ್ನು ರೈಲ್ವೆ ಇಲಾಖೆ ಮುಂದೆ ಇಡುತ್ತಲೇ ಇದ್ದಾರೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಹ ಈಗ ಕರಾವಳಿ ಭಾಗದ ರೈಲು ಪ್ರಯಾಣಿಕರ ಬೇಡಿಕೆಗೆ ಧ್ವನಿ ಗೂಡಿಸಿದ್ದಾರೆ. ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.

ಈ ಕುರಿತು ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಬೈಂದೂರು ಮಾರ್ಗವಾಗಿ ಬೆಂಗಳೂರು-ಕಾರವಾರ ನಡುವೆ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತದೆ. ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.
ಸಂಸದರ ಪೋಸ್ಟ್; ಸಂಸದ ಬಿ. ವೈ. ರಾಘವೇಂದ್ರ ತಮ್ಮ ಪೋಸ್ಟ್‌ನಲ್ಲಿ, 'ಬೈಂದೂರು ಸುತ್ತಮುತ್ತಲಿನ ಜನರು ಹಲವು ಧಾರ್ಮಿಕ ಸ್ಥಳಗಳು, ಶಿಕ್ಷಣ ಕೇಂದ್ರಗಳು ಹಾಗೂ ರಾಜಧಾನಿ ಬೆಂಗಳೂರಿಗೆ ಸಂಚರಿಸಲು ರೈಲ್ವೆ ಸೇವೆಯ ವಿಸ್ತರಣೆಯ ಅಗತ್ಯವಿರುವುದು ಗಮನಕ್ಕೆ ಬಂದಿತ್ತು' ಎಂದು ಹೇಳಿದ್ದಾರೆ.
'ಆದ್ದರಿಂದ ಸನ್ಮಾನ್ಯ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ, ಬೈಂದೂರು ಮಾರ್ಗವಾಗಿ ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಬೋಗಿಗಳ ಸಂಖ್ಯೆಯನ್ನು 14ರಿಂದ 22ಕ್ಕೆ ಹೆಚ್ಚಿಸಬೇಕೆಂದು ಕೋರಿದ್ದೇನೆ' ಎಂದು ತಿಳಿಸಿದ್ದಾರೆ.
ಬೈಂದೂರು ಸುತ್ತಮುತ್ತಲಿನ ಜನರು ಹಲವು ಧಾರ್ಮಿಕ ಸ್ಥಳಗಳು, ಶಿಕ್ಷಣ ಕೇಂದ್ರಗಳು ಹಾಗೂ ರಾಜಧಾನಿ ಬೆಂಗಳೂರಿಗೆ ಸಂಚರಿಸಲು ರೈಲ್ವೆ ಸೇವೆಯ ವಿಸ್ತರಣೆಯ ಅಗತ್ಯವಿರುವುದು ಗಮನಕ್ಕೆ ಬಂದಿತ್ತು. ಆದ್ದರಿಂದ ಸನ್ಮಾನ್ಯ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ, ಬೈಂದೂರು ಮಾರ್ಗವಾಗಿ ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ… pic.twitter.com/OhBrxKFJZ7
— B Y Raghavendra (@BYRBJP) January 29, 2024
'ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರವು ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ರೈಲ್ವೆ ಸೇವೆಯನ್ನು ಗಣನೀಯ ಪ್ರಮಾಣದಲ್ಲಿ ವಿಸ್ತರಿಸಿದ್ದು, ಈ ನೂತನ ಮನವಿಯನ್ನೂ ಶೀಘ್ರದಲ್ಲೇ ಈಡೇರಿಸುವ ನಿರೀಕ್ಷೆಯಿದೆ' ಎಂದು ಪೋಸ್ಟ್ ಹಾಕಿದ್ದಾರೆ.
ಬೆಂಗಳೂರು-ಕಾರವಾರ ನಡುವೆ ಪ್ರತಿನಿತ್ಯ ಸಂಚಾರ ನಡೆಸುವ ಪಂಚಗಂಗಾ ಎಕ್ಸ್‌ಪ್ರೆಸ್ ಕರಾವಳಿ ಭಾಗದ ಜನರ ಜೀವನಡಿಯಾಗಿದೆ. ಈ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಿದರೆ ವೇಗ ಕಡಿಮೆಯಾಗಲಿದೆ. ಅದಕ್ಕಿಂತ ಹೊಸ ರೈಲನ್ನೇ ಓಡಿಸಬಹುದು ಎಂದು ರೈಲ್ವೆ ಪ್ರಯಾಣಿಕರು ಹೇಳಿದ್ದಾರೆ.
ಈ ಕುರಿತು ಕುಂದಾಪುರ ಮತ್ತು ಉತ್ತರ ಕನ್ನಡ ಭಾಗದ ರೈಲು ಪ್ರಯಾಣಿಕರ ಸಮಿತಿ ಹಿಂದಿನಿಂದಲೂ ಬೇಡಿಕೆ ಇಡುತ್ತಿದೆ. ಬೆಂಗಳೂರು ನಗರದಿಂದ ತಡವಾಗಿ ಹೊರಟು, ಕರಾವಳಿ ಭಾಗಕ್ಕೆ ಬೇಗ ತಲುಪುವಂತೆ ಹೊಸ ರೈಲನ್ನು ಓಡಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಬೆಂಗಳೂರು-ಕಾರವಾರ ರೈಲು ಘಾಟ್ ಪ್ರದೇಶದಲ್ಲಿ ಸಂಚಾರ ನಡೆಸುತ್ತದೆ. ಸದ್ಯ 14 ಬೋಗಿ ಇರುವ ಪಂಚಗಂಗಾ ಎಕ್ಸ್‌ಪ್ರೆಸ್ ಬೋಗಿಯನ್ನು 22ಕ್ಕೆ ಹೆಚ್ಚಿಸಿದರೆ ಘಾಟ್ ಪ್ರದೇಶದಲ್ಲಿ ರೈಲು ಸಂಚಾರ ನಿಧಾನವಾಗಲಿದೆ ಎಂಬುದು ಪ್ರಯಾಣಿಕರ ಹೇಳಿಕೆ.
ಹೆಚ್ಚುವರಿ ಬೋಗಿ ಅಳವಡಿಕೆ ಮಾಡಿದರೆ ಬೆಂಗಳೂರಿನಿಂದ ಕರಾವಳಿ, ಕರಾವಳಿಯಿಂದ ಬೆಂಗಳೂರು ನಡುವಿನ ಸಂಚಾರ ಅವಧಿ ಹೆಚ್ಚಾಗಲಿದೆ. ಇದರಿಂದಾಗಿ ತೊಂದರೆ ಉಂಟಾಗಲಿದೆ. ಅದರ ಬದಲು ಹೊಸ ರೈಲನ್ನು ಓಡಿಸಿ ಎಂದು ಬೇಡಿಕೆ ಇಡಲಾಗಿದೆ.
ಬೆಂಗಳೂರಿನಿಂದ ರಾತ್ರಿ 10, 11ಕ್ಕೆ ಹೊರಡುವ ರೈಲುಗಳು ಬೇರೆ ಜಿಲ್ಲೆಗಳಿಗೆ ಬೆಳಗ್ಗೆ 5.30ರ ವೇಳೆಗೆ ತಲುಪುತ್ತವೆ. ಆದರೆ ಕರಾವಳಿ ಭಾಗದ ರೈಲು ಸಂಜೆ 6ಕ್ಕೆ ಹೊರಟು, ಮರುದಿನ ಬೆಳಗ್ಗೆ 7ಕ್ಕೆ ತಲುಪುತ್ತದೆ. ಆದ್ದರಿಂದ ರಾತ್ರಿ ತಡವಾಗಿ ಹೊರಟು, ಬೆಳಗ್ಗೆ ಬೇಗ ತಲುಪುವ ಹೊಸ ರೈಲು ಪರಿಚಯಿಸಿ ಎಂದು ಇಲಾಖೆಯನ್ನು ಒತ್ತಾಯಿಸಲಾಗಿದೆ.












Click it and Unblock the Notifications