Ratha saptami in Tirumala: ತಿರುಮಲದಲ್ಲಿ ರಥ ಸಪ್ತಮಿ ಆಚರಣೆ: ಈ ದಿನ ವಿಶೇಷ ದರ್ಶನ ರದ್ದು
ತಿರುಮಲದಲ್ಲಿ ರಥ ಸಪ್ತಮಿ ಆಚರಣೆಗೆ ತಯಾರಿಗಳು ಪೂರ್ಣಗೊಂಡಿವೆ. ಫೆಬ್ರವರಿ 16 ಸೂರ್ಯ ಜಯಂತಿಯಂದು ತಿರುಮಲದಲ್ಲಿ ರಥ ಸಪ್ತಮಿ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ರಥಸಪ್ತಮಿ ನಿಮಿತ್ತ ಅರ್ಧ ಬ್ರಹ್ಮೋತ್ಸವ ಆಚರಣೆ ನಡೆಯಲಿದೆ. ಹೀಗಾಗಿ ಈ ವೇಳೆ ವಿಶೇಷ ದರ್ಶನ ರದ್ದುಗೊಳಿಸಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವ್ಯವಸ್ಥೆ ಮಾಡುತ್ತಿದೆ.
ವಿದ್ವಾಂಸರು ಹೇಳುವ ಪ್ರಕಾರ ಈ ಒಂದು ದಿನ ಸ್ವಾಮಿಯು ಏಳು ವಾಹನಗಳ ಮೇಲೆ ಭಕ್ತರಿಗೆ ದರ್ಶನ ನೀಡುತ್ತಾನೆ. ಹಾಗಾಗಿ ಇದನ್ನು ಅರ್ಧ ಬ್ರಹ್ಮೋತ್ಸವ ಎಂದು ಕರೆಯಲಾಗುತ್ತದೆ. ಆದರೀಗ ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ಕಾಯುವ ಭಕ್ತರು ಬಿಸಿಲಿನ ಝಳಕ್ಕೆ ಹೈರಾಣಾಗುತ್ತಿದ್ದಾರೆ. ಹೀಗಾಗಿ ಭಕ್ತರ ನಿಲುಗಡೆಗೆ ಶೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ನಿಲುಗಡೆ ಬೀದಿಗಳಲ್ಲಿ ಕೂಲ್ ಪೇಂಟ್ ಕೂಡ ಹಾಕಲಾಗಿದೆ. ನಿಲುಗಡೆ ಸ್ಥಳಗಳಲ್ಲಿ ಭಕ್ತರಿಗೆ ಸಂಬಾರನ್ನಂ, ಪೆರುಗನ್ನಂ, ಪುಳಿಹೊರ, ಪೊಂಗಲ್ ಜೊತೆಗೆ ಕುಡಿಯುವ ನೀರು, ಮಜ್ಜಿಗೆ, ಚಹಾ, ಕಾಫಿ, ಹಾಲು ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

ವಿಶೇಷ ದರ್ಶನ ರದ್ದು
ಇನ್ನೂ ಫೆ.16ರಂದು ರಥಸಪ್ತಮಿ ಸಂದರ್ಭದಲ್ಲಿ ಮಾತ್ರ ಕೆಲ ಗಣ್ಯರಿಗೆ ವಿರಾಮ ದರ್ಶನವಿರುತ್ತದೆ. ವೃದ್ಧರು, ಅಂಗವಿಕಲರು ಹಾಗೂ ಪುಟ್ಟ ಮಕ್ಕಳ ಪಾಲಕರ ವಿಶೇಷ ದರ್ಶನ ರದ್ದುಗೊಳಿಸಲಾಗಿದೆ. ಸಾಮಾನ್ಯ ಭಕ್ತರ ಅನುಕೂಲಕ್ಕಾಗಿ ಫೆಬ್ರವರಿ 15 ರಿಂದ 17 ರವರೆಗೆ ತಿರುಪತಿಯ ಕೌಂಟರ್‌ಗಳಲ್ಲಿ ಸರ್ವದರ್ಶನಂ ಟೋಕನ್‌ಗಳನ್ನು ನೀಡಲಾಗುವುದಿಲ್ಲ.
ಈ ಸಮಯದಲ್ಲಿ ವೈಕುಂಟಂ ಕ್ಯೂ ಕಾಂಪ್ಲೆಕ್ಸ್-2 ಮೂಲಕ ಭಕ್ತರು ನೇರವಾಗಿ ಶ್ರೀಗಳ ದರ್ಶನ ಪಡೆಯಬಹುದು ಎಂದು ಟಿಟಿಡಿ ತಿಳಿಸಿದೆ. ಜೊತೆಗೆ ನಿಗದಿತ ಸಮಯಾವಧಿಯನ್ನು ಅನುಸರಿಸದ 300 ರೂ. ವಿಶೇಷ ಪ್ರವೇಶ ದರ್ಶನದ ಟೋಕನ್ ಹೊಂದಿರದ ಭಕ್ತರು ವೈಕುಠಂ ಕ್ಯೂ ಕಾಂಪ್ಲೆಕ್ಸ್-2 ಮೂಲಕ ದರ್ಶನ ಪಡೆಯಬಹುದು ಎಂದು ಅದು ಹೇಳಿದೆ.
ಕೊಠಡಿಗಳನ್ನು ಹೇಗೆ ಹಂಚಲಾಗಿದೆ?
ಫೆಬ್ರವರಿ 16 ರವರೆಗೆ ಸಿಆರ್‌ಒ ಸಾಮಾನ್ಯ ಕೌಂಟರ್‌ಗಳು ಮಾತ್ರ ಕೊಠಡಿಗಳ ಹಂಚಿಕೆಗಾಗಿ ಕಾರ್ಯನಿರ್ವಹಿಸಲಿವೆ. ಈ ದಿನಗಳಲ್ಲಿ MBC ಮತ್ತು TB ಕೌಂಟರ್‌ಗಳನ್ನು ಮುಚ್ಚಲಾಗುತ್ತದೆ. ಕೌಂಟರ್‌ಗಳಲ್ಲಿ 4 ಲಕ್ಷ ಹೆಚ್ಚುವರಿ ಬಫರ್ ಸ್ಟಾಕ್ ಆಗಿ ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನೂ ರಥಸಪ್ತಮಿ ಪ್ರಯುಕ್ತ ಶ್ರೀವಾರಿ ದೇವಸ್ಥಾನದಲ್ಲಿ ಕಲ್ಯಾಣೋತ್ಸವ, ಊಂಜಲ್ ಸೇವೆ, ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ. ಸುಪ್ರಭಾತಂ, ತೋಮಾಲ ಮತ್ತು ಅರ್ಚನಾ ಸೇವೆಗಳನ್ನು ಖಾಸಗಿಯಾಗಿ ನಡೆಸಲಾಗುತ್ತದೆ.
ಮತ್ತೊಂದೆಡೆ ಮಂಗಳವಾರ ಸಂಜೆ ರಥಸಪ್ತಮಿ ನಿಮಿತ್ತ ತಿರುಮಲಕ್ಕೆ ಬರುವ ಭಕ್ತರಿಗೆ ಮಾಡಲಾಗುತ್ತಿರುವ ಭದ್ರತಾ ವ್ಯವಸ್ಥೆಯನ್ನು ಟಿಟಿಡಿ ಸಿವಿಎಸ್‌ಒ ನರಸಿಂಹ ಕಿಶೋರ್ ಮತ್ತು ತಿರುಪತಿ ಜಿಲ್ಲಾ ಎಸ್ಪಿ ಮಲಿಕಾ ಗರ್ಗ್ ಪರಿಶೀಲಿಸಿದರು. ಭಕ್ತರು ನಿಲುಗಡೆ ಸ್ಥಳಗಳನ್ನು ಪ್ರವೇಶಿಸಲು ಮತ್ತು ಹೊರಹೋಗಲು ವ್ಯವಸ್ಥೆ ಮಾಡಲಾದ ಮಾರ್ಗಗಳನ್ನು ಪರಿಶೀಲಿಸಲಾಯಿತು.
ಇನ್ನೂ ಬೀದಿಗಳು ಮತ್ತು ಭಕ್ತರು ತುಂಬಿರುವ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ವಿಜಿಲೆನ್ಸ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಲಾಯಿತು. ತಿರುಮಲದಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications