Bengaluru-Kalaburagi weekly Train: ಕಲಬುರಗಿ- ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ
ಕಲಬುರಗಿ / ಬೆಂಗಳೂರು, ಏಪ್ರಿಲ್. 15: ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರ ಕಲಬುರಗಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ರಾತ್ರಿ ರೈಲು ಬೇಕು ಎಂಬ ಪ್ರಯಾಣಿಕರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಬೆಂಗಳೂರು- ಕಲಬುರಗಿ ಮಾರ್ಗದಲ್ಲಿ ರೈಲ್ವೆ ಇಲಾಖೆ ಹೊಸ ಸಾಪ್ತಾಹಿಕ ರೈಲು ಬಿಟ್ಟಿದೆ.
ರೈಲ್ವೇ ಇಲಾಖೆಯು ಎಸ್‌ಎಂವಿಟಿ ಬೆಂಗಳೂರು - ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಓಡಾಡುವ ಸಾಪ್ತಾಹಿಕ ರೈಲಿಗೆ ಚಾಲನೆ ನೀಡಿದೆ. ಶನಿವಾರ ಬೆಳಗ್ಗೆ ಕಲಬುರಗಿಗೆ ಬರುವ ಈ ಕಲಬುರಗಿ- ಬೆಂಗಳೂರು ಸಾಪ್ತಾಹಿಕ ರೈಲು ಅದೇ ಸಂಜೆ ಬೆಂಗಳೂರಿಗೆ ವಾಪಸ್ ಹೊರಡಲಿದೆ.

ಮಾರ್ಚ್ 9 ರಂದು ರೈಲ್ವೆ ಇಲಾಖೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ಈ ಸಾಪ್ತಾಹಿಕ ರೈಲು ಏಪ್ರಿಲ್ 5 ರಿಂದ ಸೇವೆ ನೀಡಬೇಕಿತ್ತು. ಆದರೆ, ಇದರ ಬಗ್ಗೆ ಯಾವುದೇ ಸುದ್ದಿಯಿರಲಿಲ್ಲ. ಬಳಿಕ ಏಪ್ರಿಲ್ 6 ರಂದು, ರೈಲು ಚಾಲನೆಯ ಬಗ್ಗೆ ಪರಿಷ್ಕೃತ ಬಿಡುಗಡೆ ದಿನಾಂಕವನ್ನು ನೈರುತ್ಯ ರೈಲ್ವೇ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿತು.
'ಕಲಬುರಗಿ - ಬೆಂಗಳೂರು ನಡುವೆ ನಿತ್ಯ 10 ಸಾವಿರ ಜನರ ಪ್ರಯಾಣ'
ರೈಲು ಉದ್ಘಾಟನೆ ಬಳಿಕ ಎಸ್‌ಎಂವಿಟಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣಿಸಿದ ಮಾಣಿಕ್ ಜೇವರ್ಗಿ ಟೈಮ್ಸ್ ಅಫ್ ಇಂಡಿಯಾ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ಈ ಹಿಂದೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರು ರೈಲುಗಳ ಕೊರತೆ ಮತ್ತು ಕಲಬುರಗಿಗೆ ಸೀಮಿತ ಸೀಟ್ ಕೋಟಾದ ಕಾರಣದಿಂದ ಇತರ ರೈಲುಗಳಲ್ಲಿ ಕಾಯ್ದಿರಿಸಿದ ಕೋಚ್‌ಗಳಲ್ಲಿ ಸೀಟುಗಳನ್ನು ಆಕ್ರಮಿಸಿಕೊಳ್ಳುತ್ತಿದ್ದರು" ಎಂದಿದ್ದಾರೆ.

"ಈ ರೈಲು ಈಗ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಆರಾಮದಾಯಕ ಪ್ರಯಾಣವನ್ನು ಮಾಡಲು ಸಹಾಯ ಮಾಡುತ್ತದೆ. ಬೆಂಗಳೂರು ಮತ್ತು ಕಲಬುರಗಿ ನಡುವೆ ಪ್ರತಿದಿನ ನಾಲ್ಕು ರೈಲುಗಳಿದ್ದರೂ, ಮುಂಬೈ, ಸೋಲಾಪುರ ಮತ್ತು ವಿಜಯಪುರದ ಪ್ರಯಾಣಿಕರು ಅವುಗಳನ್ನು ಆಕ್ರಮಿಸಿಕೊಳ್ಳುತ್ತಿದ್ದರು" ಎಂದು ಮಾಣಿಕ್ ಜೇವರ್ಗಿ ಹೇಳಿದ್ದಾರೆ.
ಹೈದರಾಬಾದ್ - ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್ ಮಾತನಾಡಿ, " ಕಲಬುರಗಿ ಮತ್ತು ಬೆಂಗಳೂರು ನಡುವೆ ಪ್ರತಿದಿನ ಸುಮಾರು 10,000 ಪ್ರಯಾಣಿಕರು ಪ್ರಯಾಣಿಸುತ್ತಾರೆ. ನಮ್ಮಲ್ಲಿ ಸುಮಾರು 60 ಕೆಕೆಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳು ಸುಮಾರು 100% ಆಕ್ಯುಪೆನ್ಸಿಯೊಂದಿಗೆ ಓಡುತ್ತವೆ. ರೈಲು ಅತ್ಯಂತ ಕಡಿಮೆ ಖರ್ಚು ಮತ್ತು ಆರಾಮದಾಯಕವಾದ ಆಯ್ಕೆಯಾಗಿರುವುದರಿಂದ, ಜನರು ಅದನ್ನು ಬಳಸಲು ಇಷ್ಟಪಡುತ್ತಾರೆ" ಎಂದು ತಿಳಿಸಿದ್ದಾರೆ.
ಇದಕ್ಕೆ ಉದಾಹರಣೆಯಾಗಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಸ್ತುತ 100% ಆಕ್ಯುಪೆನ್ಸಿಯಲ್ಲಿ ಓಡುತ್ತಿದೆ ಎಂಬ ಅಂಶವನ್ನು ಅಮರನಾಥ ಪಾಟೀಲ್ ಉಲ್ಲೇಖಿಸಿದ್ದಾರೆ. ಅಂತಿಮವಾಗಿ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದ ರೈಲ್ವೇಯನ್ನು ಶ್ಲಾಘಿಸಿದ ಅವರು, ಹೊಸ ರೈಲು ವಾರದ ಸೇವೆಯ ಬದಲು ಪ್ರತಿದಿನ ಲಭ್ಯವಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications