Vande Bharat Train: ರಾಜ್ಯದ ಎಂಟನೇ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಬೆಂಗಳೂರು, ಜೂನ್ 19: ಭಾರತೀಯ ರೈಲ್ವೆಯು ಎರಡು ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲಿದೆ. ಬೆಂಗಳೂರಿನಿಂದ ಮಧುರೈಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ರಂದು ಚಾಲನೆ ನೀಡಲಿದ್ದಾರೆ.
ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧುರೈ - ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಚೆನ್ನೈ -ನಾಗರ್‌ಕೋಯಿಲ್ ನಡುವೆ ಸಂಚಾರ ನಡೆಸಲಿದೆ. ರೈಲು ವೇಳಾಪಟ್ಟಿಯ ಪ್ರಕಾರ ಮಧುರೈ ರೈಲು ನಿಲ್ದಾಣದಿಂದ ಬೆಳಗ್ಗೆ 5:15 ಕ್ಕೆ ಹೊರಟು ಮಧ್ಯಾಹ್ನ 1:15 ಕ್ಕೆ ಬೆಂಗಳೂರಿಗೆ ತಲುಪಲಿದೆ. ಅಧಿಕೃತ ವೇಳಾಪಟ್ಟಿಯನ್ನು ಇನ್ನು ರೈಲ್ವೆ ಪ್ರಕಟಿಸಿಲ್ಲ.

ರೈಲು ಬೆಂಗಳೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 1:45 ಕ್ಕೆ ಹೊರಟು ಸೇಲಂಗೆ ಸಂಜೆ 5:00 ಕ್ಕೆ, ತಿರುಚ್ಚಿಗೆ ರಾತ್ರಿ 8:20 ಕ್ಕೆ ಮತ್ತು ಮಧುರೈ ಜಂಕ್ಷನ್‌ಗೆ ರಾತ್ರಿ 10:25 ಕ್ಕೆ ತಲುಪುತ್ತದೆ. ಇದರೊಂದಿಗೆ, ಮಧುರೈ/ತಿರುಚಿ ಮತ್ತು ಬೆಂಗಳೂರು ನಡುವೆ ಮೊದಲ ನೇರ ರೈಲು ಸೇವೆಯು ಆರು ಗಂಟೆಗಳಲ್ಲಿ ಎರಡು ನಗರಗಳ ನಡುವಿನ ದೂರವನ್ನು ಕ್ರಮಿಸುತ್ತದೆ ಎನ್ನಲಾಗಿದೆ.
ಬೆಂಗಳೂರು - ಮಧುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗ ನಿಲುಗಡೆಗಳು ಮಧುರೈ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ದಿಂಡುಗಲ್, ಕರೂರ್, ಸೇಲಂ, ಧರ್ಮಪುರಿ ಮತ್ತು ಹೊಸೂರಿನಲ್ಲಿ ನಿಲುಗಡೆ ನೀಡಲಿದೆ. ನಾಲ್ಕು ದಿನಗಳ ಪ್ರಾಯೋಗಕ ಸಂಚಾರಕ್ಕೆ ಬೇರೆ-ಬೇರೆ ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ.

ರಾಜ್ಯದ ಎಂಟನೇ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ
ಇನ್ನು, ರಾಜ್ಯದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಧುರೈ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ನಾಳೆ (ಜೂನ್ 20, 2024) ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿರುವ ಎಂಟನೇ ವಂದೇ ಭಾರತ್ ರೈಲು ಇದಾಗಿದೆ" ಎಂದಿದ್ದಾರೆ.
ಉಭಯ ನಗರಗಳ ನಡುವೆ 6 ತಾಸಿನಲ್ಲಿ ಪ್ರಯಾಣ
ವಂದೇ ಭಾರತ್ ರೈಲು ಉಭಯ ನಗರಗಳ ನಡುವೆ 6 ಗಂಟೆಗಳಲ್ಲಿ ಕ್ರಮಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರೈಲಿನ ವೇಗ, ನಿಲುಗಡೆ ನಿಲ್ದಾಣ ನಿಗದಿ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರಾಥಮಿಕ ಮಾಹಿತಿಯಂತೆ ರೈಲು ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ ಹೊಸೂರು ನಿಲ್ದಾಣದಲ್ಲಿ ನಿಲುಗಡೆ.
ಇನ್ನು, ಮಧುರೈ-ವಿಶ್ವೇಶ್ವರಯ್ಯ ಟರ್ಮಿನಲ್ ವಂದೇ ಭಾರತ್ ರೈಲಿನಿಂದ ಧಾರ್ಮಿಕ ಯಾತ್ರಾ ಕ್ಷೇತ್ರ ಮಧುರೈ, ತಮಿಳುನಾಡಿಗೆ ಹೋಗುವವರಿಗೆ ಮತ್ತು ಕೋಲಾರದವರಿಗೆ ಅನುಕೂಲವಾಗಲಿದೆ. ವಿಶ್ವೇಶ್ವರಯ್ಯ ಟರ್ಮಿನಲ್ ಬದಲು ವಮದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಯಶವಂತಪುರ ಅಥವಾ ಕಂಟೋನ್ಸೆಂಟ್ ರೈಲ್ವೆ ನಿಲ್ದಾಣದವರೆಗೆ ತಂದಲ್ಲಿ ಮತ್ತಷ್ಟು ಅನುಕೂಲವಾಗಲಿದೆ ಎಂಬ ಬೇಡಿಕೆ ಪ್ರಯಾಣಿಕರದ್ದು.












Click it and Unblock the Notifications