ಚಿಕ್ಕಮಗಳೂರು: ಕಲ್ಲತ್ತಿಗರಿ ಜಲಪಾತಕ್ಕೆ ಬಂತು ಜೀವಕಳೆ
ಚಿಕ್ಕಮಗಳೂರು, ಮೇ 25: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಅರ್ಭಟಿಸಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗರಿ ಜಲಪಾತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರನ್ನಯ ಕೈ ಬೀಸಿ ಕರೆಯುತ್ತಿದೆ.
ಬೇಸಿಗೆಯ ಕಾರಣಕ್ಕೆ ಕಲ್ಲತ್ತಿಗರಿ ಜಲಪಾತದಲ್ಲಿ ನೀರಿನ ಹರಿವು ಕಡಿಮೆ ಇತ್ತು. ಆದರೆ ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆ ಆರ್ಭಟಕ್ಕೆ ಕಲ್ಲತ್ತಿಗರಿ ಜಲಪಾತ ಧುಮ್ಮಿಕ್ಕುತ್ತಿದೆ. ಜಲಪಾತ ನೋಡಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗರಿ ಜಲಪಾತ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದು. ಈಗ ಜಲಪಾತ ಜೀವಕಳೆ ಪಡೆದಿದ್ದು, ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಶುಕ್ರವಾರ ಸಂಜೆಯಿಂದ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಅಪಾರ ನೀರು ಹರಿದುಬಂದು, ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ.
ಹಳ್ಳದಲ್ಲಿ ಮುಳುಗಿದ ಹಿಟಾಚಿ: ತರೀಕೆರೆಯಲ್ಲಿ ಸುರಿಯುತ್ತಿರುವ ಮಳೆಗೆ ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಹಿಟಾಕಿ ಸಂಪೂರ್ಣ ಮುಳುಗಿ ಹೋಗಿದೆ.
ತಾಲೂಕಿನ ತ್ಯಾಗದಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಸೇತುವೆ ಇಕ್ಕೆಲಗಳನ್ನು ಹಿಟಾಕಿ ಮೂಲಕ ಸ್ವಚ್ಛಗೊಳಿಸಲಾಗುತ್ತಿತ್ತು. ಕೆಮ್ಮಣ್ಣುಗುಂಡಿ-ಕಲ್ಲತ್ತಿಗರಿ ಭಾಗದಲ್ಲಿ ಭಾರೀ ಮಳೆಯಾದ ಕಾರಣ ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಹಿಟಾಚಿ ಮುಳುಗಿದೆ.
ಕಾರ್ಮಿಕರು ಅಲ್ಲೇ ಇದ್ದರೂ ಸಹ ಹಿಟಾಚಿ ಮೇಲೆ ತರಲು ಸಾಧ್ಯವಾಗಲಿಲ್ಲ. ನೀರಿನ ಹರಿವು ಹೆಚ್ಚಾಗುತ್ತಿದ್ದಂತೆಯೇ ಕಾರ್ಮಿಕರು ಹಿಟಾಚಿಯನ್ನು ಹಳ್ಳದಲ್ಲಿಯೇ ಬಿಟ್ಡು ಮೇಲೆ ಬಂದು ಜೀವ ಉಳಿಸಿಕೊಂಡರು.
ಈಗ ಹುಟಾಚಿ ಮೇಲೆ ತರುವುದು ಅಸಾಧ್ಯದ ಮಾತು. ಮತ್ತೆ ಮಳೆ ಹೆಚ್ಚಾದರೆ ಹಿಟಾಚಿ ಮೇಲೆ ತರಲು ಸಾಧ್ಯವೇ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮಳೆ ಕಡಿಮೆ ಆಗುವವರೆಗೂ ಹಳ್ಳದಲ್ಲಿ ಮುಳುಗಿರುವ ಹಿಟಾಚಿಯನ್ನು ಕಾರ್ಮಿಕರು ಕಾಯಬೇಕಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಉಂಟು ಮಾಡಿದೆ. ಬಿರುಗಾಳಿ, ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮನೆಯಲ್ಲಿದ್ದ 5 ಜನರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಕಳಸ ತಾಲೂಕಿನ ಬಾಳೆಹೊಳೆ ಕಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೃಹತ್ ಗಾತ್ರದ ಕೊಂಬೆ ಅಡಿ ಸಿಲುಕಿ ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಯಲ್ಲಿ ಸಿಲುಕಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಪಿಠೋಪಕರಣಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಸಂಗ್ರಹಿಸಿದ್ದ ಆಹಾರ ಪದಾರ್ಥಗಳು ಮಣ್ಣು ಪಾಲಾಗಿದೆ. ಮುಂಜಾನೆ 4 ಗಂಟೆಗೆ ನಡೆದಿರುವ ಅವಘಡವಿದು.












Click it and Unblock the Notifications