One Day Trips In-around Bangalore: ಬೆಂಗಳೂರಿನಿಂದ ಬೆಳಗ್ಗೆ 6ಗಂಟೆಗೆ ಹೊರಟು ರಾತ್ರಿ 10ಕ್ಕೆ ವಾಪಸ್
ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಡೇ ಔಟ್ ಪ್ರವಾಸ ಮಾಡುವಂತಹ ಹಲವಾರು ಸ್ಥಳಗಳಿವೆ. ಇದರಲ್ಲಿ ಕೆಲವೊಂದು ಬೆಂಗಳೂರಿಗೆ ಚಿರಪರಿಚಿತ, ಇನ್ನಷ್ಟು ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯ ಕೊರತೆಯಿಂದ ನೋಡಲು ಮಿಸ್ ಆಗಿರಬಹುದು.
ಬೆಂಗಳೂರಿನಿಂದ ಹೈದರಾಬಾದ್ ಮಾರ್ಗದಲ್ಲಿ ಹಲವು ಪ್ರವಾಸಿ/ಧಾರ್ಮಿಕ ಸ್ಥಳಗಳಿವೆ. ಬೆಳಗ್ಗೆ ಬೇಗನೇ ಸ್ವಂತ ಕಾರು/ಟ್ಯಾಕ್ಸಿ ಮೂಲಕ ಹೋದರೆ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕೆಲವು ಸ್ಥಳಗಳ ದರ್ಶನ ಮಾಡಿ ರಾತ್ರಿಯ ಹೊತ್ತಿಗೆ ಬೆಂಗಳೂರಿಗೆ ವಾಪಸ್ ಬರಬಹುದಾಗಿದೆ.
ಹೈದರಾಬಾದ್ ಹೈವೇ (ರಾ.ಹೆ 44, ಬಳ್ಳಾರಿ ರಸ್ತೆ ಎಂದೂ ಕರೆಯುತ್ತಾರೆ) ಮೂಲಕ ಸಾಗಬೇಕಾದ ಈ ಪ್ರವಾಸದ ಮಧ್ಯೆ ಸಾಕಷ್ಟು ರೆಸ್ಟೋರೆಂಟುಗಳು ಸಿಗುತ್ತವೆ. ಆದರೆ, ಚಿಂತಾಮಣಿ ಟೋಲ್ ಮುಗಿದ ನಂತರ ಗುಣಮಟ್ಟದ ಹೊಟೇಲುಗಳು ಸಿಗುವುದಿಲ್ಲ ಎನ್ನುವುದು ಪ್ರವಾಸಿಗರ ಗಮನದಲ್ಲಿ ಇದ್ದರೆ ಒಳ್ಳೆಯದು.

1. ಭೋಗ ನಂದೀಶ್ವರ, ಅರುಣಾಚಲೇಶ್ವರ ದೇವಾಲಯ
ದ್ರಾವಿಡ ವಾಸ್ತುಶಿಲ್ಪದ ಅದ್ಭುತ ಎಂದೇ ಕರೆಯಬಹುದಾದ ಈ ದೇವಾಲಯ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತದೆ. ನಂದಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಎಡಕ್ಕೆ ಸಾಗಿದರೆ ಈ ದೇವಾಲಯದ ದರ್ಶನವನ್ನು ಮಾಡಬಹುದು. ಕರ್ನಾಟಕ ಸರ್ಕಾರದ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯ ಇದಾಗಿದ್ದು, ಬೆಂಗಳೂರಿನಿಂದ ಸುಮಾರು ಅರವತ್ತು ಕಿಲೋಮೀಟರ್ ದೂರದಲ್ಲಿದೆ.
ಭಾರತದ ಪುರಾತತ್ವ ಇಲಾಖೆಯ ಸಮೀಕ್ಷೆಯ ಪ್ರಕಾರ, ಈ ದೇವಾಲಯದ ಶಾಸನಗಳು ನೊಳಂಬ ರಾಜವಂಶದ ದೊರೆ ನೊಳಂಬಾಡಿರಾಜ ಮತ್ತು ಮೂರನೆ ರಾಷ್ಟ್ರಕೂಟ ಚಕ್ರವರ್ತಿ ಗೋವಿಂದ ಅವರ ಕಾಲದ್ದು. ದೇವಾಲಯದ ಹೊರಗಿರುವ ಕಲ್ಯಾಣಿ, ಮಂಟಪ, ಕಲ್ಲಿನ ರಥ ಆಕರ್ಷಣೀಯವಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದ ನಂತರ ನಂಧಿ ಗಿರಿಧಾಮಕ್ಕೂ ಹೋಗಿ ಬರಬಹುದು.
2. ರಂಗಸ್ಥಳ ದೇವಾಲ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರುವ ಮತ್ತೊಂದು ಪುರಾಣ ಪ್ರಸಿದ್ದ ದೇವಾಲಯ ರಂಗಸ್ಥಳ ಭೂದೇವಿ, ನೀಲಾದೇವಿ ಸಮೇತ ಮೋಕ್ಷ ರಂಗನಾಥ ದೇವಾಲಯ. ಇತಿಹಾಸದ ಪ್ರಕಾರ ಹೊಯ್ಸಳ ರಾಜರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಏಕಶಿಲಾ ಶಾಲಿಗ್ರಾಮ ಮೂರ್ತಿ ಇದಾಗಿದ್ದು, ಬೃಹತ್ ರಾಜಗೋಪುರವನ್ನು ಹೊಂದಿದೆ.
ಈ ದೇವಾಲಯಕ್ಕೆ ಭೇಟಿ ನೀಡಿದ ನಂತರ ಶ್ರೀರಂಗಪಟ್ಟಣದ ಆದಿರಂಗ, ಶಿಂಷಾದಲ್ಲಿರುವ ಮಧ್ಯರಂಗ ಮತ್ತು ತಮಿಳುನಾಡಿನ ಶ್ರೀರಂಗಂನಲ್ಲಿರುವ ಅಂತರಂಗ ದರ್ಶನ ಪಡೆದರೆ ಮೋಕ್ಷ ಸಿಗುತ್ತದೆ ಎನ್ನುವುದು ಪ್ರತೀತಿ.

3. ಕದಿರಿ ನರಸಿಂಹ ಸ್ವಾಮಿ ದೇವಾಲಯ
ವಿಷ್ಣುವಿನ ಅವತಾರವಾದ ನರಸಿಂಹ ದೇವರಿಗೆ ಸೇರಿದ ಈ ದೇವಾಲಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತದೆ. ಬೆಂಗಳೂರಿನಿಂದ ಸುಮಾರು 175 ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯವು ಚೋಳರ ಮತ್ತು ವಿಜಯನಗರ ಸಾಮ್ರಾಜ್ಯದ ಸೊಗಸಾದ ವಾಸ್ತುಶಿಲ್ಪವನ್ನು ಹೊಂದಿದೆ.
ಅಪಾರವಾದ ದೈವಿಕ ಶಕ್ತಿಯನ್ನು ಹೊಂದಿದ ದೇವಾಲಯ ಎಂದು ನಂಬಲಾಗುವ ಕದಿರಿ ದೇವಾಲಯದ ನರಸಿಂಹಸ್ವಾಮಿ ವಿಗ್ರಹ ಕುಳಿತ ಭಂಗಿಯಲ್ಲಿದೆ. ದೇವಾಲಯಕ್ಕೆ ಉತ್ತಮವಾದ ರಸ್ತೆ ಸಂಪರ್ಕವಿದ್ದು, ಸುಪ್ರಭಾತ ಸೇವೆ, ನಿತ್ಯ ಕಲ್ಯಾಣ ಸೇವೆ ಪ್ರಮುಖವಾಗಿದೆ.

4. ಲೇಪಾಕ್ಷಿ ದೇವಾಲಯ
ಆಂಧ್ರ ಪ್ರದೇಶದ ಅನಂತಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಇನ್ನೊಂದು ದೇವಾಲಯವಿದು. ಮೌರ್ಯರ ಆಳ್ವಿಕೆಯಿಂದ ಶಾತವಾಹನರಿಗೆ, ಅಲ್ಲಿಂದ ಗಂಗ ಸಾಮ್ರಾಜ್ಯಕ್ಕೆ ಹಸ್ತಾಂತರವಾಯಿತು ಎನ್ನುವುದು ಇತಿಹಾಸದ ಪುಟದಲ್ಲಿ ಉಲ್ಲೇಖವಾಗಿದೆ. ವೀರಭದ್ರ ಮೂರ್ತಿಯ ಜೊತೆಗೆ ಇತರ ದೇವರ ವಿಗ್ರಹಗಳೂ ದೇವಾಲಯದ ಆವರಣದಲ್ಲಿವೆ.
ದೇವಾಲಯದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಚಾರ ಎಂದರೆ ಅತ್ಯದ್ಭುತವಾದ ವಾಸ್ತುಶಿಲ್ಪ, ಶಿಲ್ಪಕಲೆ, ಲಲಿತಕಲೆಗಳು. ಇದರ ಜೊತೆಗೆ ದೇವಾಲಯದ ಆವರಣದಲ್ಲಿರುವ ಬೃಹತ್ ಶಿವನ ಲಿಂಗ ಆಕರ್ಷಣೀಯವಾಗಿದೆ. ಇದರ ಪಕ್ಕದಲ್ಲೇ ಇರುವ ಜಟಾಯು ಪಾರ್ಕ್ ಕೂಡಾ ಆಕರ್ಷಣೀಯವಾಗಿದೆ.

5. ಸದ್ಗುರು ಸನ್ನಿಧಿ, ಈಶ ಫೌಂಡೇಶನ್ ಚಿಕ್ಕಬಳ್ಳಾಪುರ
ನಂದಿ ಬೆಟ್ಟಗಳ ನಡುವಿನ ನೈಸರ್ಗಿಕ ನೆಲೆಯಲ್ಲಿರುವ ಈ ಪ್ರವಾಸೀ ಸ್ಥಳ ಬೆಂಗಳೂರಿನಿಂದ ಉತ್ತರಕ್ಕೆ 65ಕಿಲೋಮೀಟರ್ ದಲ್ಲಿದೆ. ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರದಿಂದ ನಿಯಮಿತ ಬಸ್ ವ್ಯವಸ್ಥೆ ಇಲ್ಲಿಗಿದೆ. ಇನ್ನೂ ಈ ಸ್ಥಳದಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸುಮಾರು ಆರೇಳು ಕಿಲೋಮೀಟರ್ ಮಣ್ಣಿನ ರಸ್ತೆಯಿದೆ.
ಪ್ರತೀದಿನ ರಾತ್ರಿ ಏಳು ಗಂಟೆ ಸುಮಾರಿಗೆ ಆದಿಯೋಗಿಯ ಮೇಲೆ ಹದಿನಾಲ್ಕು ನಿಮಿಷಗಳ ಇಮೇಜಿಂಗ್ ಶೋ (ಲೇಸರ್ ಶೋ) ನಡೆಯುತ್ತದೆ. ಆದಿಯೋಗಿಯ ಕುರಿತಾದ ಕೆಲವೊಂದು ನಿರೂಪಣೆಯನ್ನು ಜಗ್ಗಿ ವಾಸುದೇವ ಅವರು ಮಾಡಿದ್ದಾರೆ.











Click it and Unblock the Notifications