Kumara Parvatha Trek: ಕುಮಾರ ಪರ್ವತ ಚಾರಣ, ಆನ್‌ಲೈನ್ ಟಿಕೆಟ್ ಬುಕ್ ವಿವರ
ಬೆಂಗಳೂರು, ಅಕ್ಟೋಬರ್ 05: ಮಳೆಗಾಲ ಮುಕ್ತಾಯವಾಗಿದೆ. ಚಾರಣಿಗರು ಪ್ರವಾಸ ಹೋಗಲು ಯೋಜನೆ ರೂಪಿಸುತ್ತಿದ್ದಾರೆ. ಕರ್ನಾಟಕದ ಅರಣ್ಯ ಇಲಾಖೆ ರಾಜ್ಯದ ಎಲ್ಲ ಚಾರಣ ಪಥಗಳಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಕಡ್ಡಾಯಗೊಳಿಸಿದೆ. ಈ ಮೂಲಕ ಬುಕ್ ಮಾಡಿದರೆ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಅತಿ ಹೆಚ್ಚಿನ ಪ್ರವಾಸಿಗರು ಆಗಮಿಸುವ ಕಾರಣ ಸಮಸ್ಯೆಗಳು ಉಂಟಾಗುತ್ತಿದ್ದವು. ಆದ್ದರಿಂದ ಅರಣ್ಯ ಇಲಾಖೆ ಚಾರಣಿಗರಿಗೆ ಆನ್‌ಲೈನ್‌ನಲ್ಲೇ ಟಿಕೆಟ್ ಖರೀದಿಗೆ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿಯೇ ಅರಣ್ಯ ಇಲಾಖೆ ವಿಶೇಷ ವೆಬ್‌ಸೈಟ್ ನಿರ್ಮಾಣ ಮಾಡಿದ್ದು, ಗುರುವಾರ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಆರಂಭವಾಗಿದೆ.

ಕುಮಾರ ಪರ್ವತ ಚಾರಣ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದ ಸಮೀಪ ಇರುವ ಕುಮಾರ ಪರ್ವತಕ್ಕೆ ಸಾವಿರಾರು ಪ್ರವಾಸಿಗರು ಚಾರಣ ಹೋಗುತ್ತಾರೆ. ಅಕ್ಟೋಬರ್‌ನಿಂದ ಮೇ ತಿಂಗಳ ತನಕ ಇಲ್ಲಿ ಚಾರಣ ಹೋಗುವವರು ಹೆಚ್ಚು. ಪಶ್ಚಿಮ ಘಟ್ಟಗಳಲ್ಲಿಯೇ ಕುಮಾರ ಪರ್ವತ ಚಾರಣ ಬಹಳ ಪ್ರಸಿದ್ಧಿ. ಇದನ್ನು ಪುಷ್ಪಗಿರಿ ಚಾರಣ ಎಂದು ಸಹ ಕರೆಯಲಾಗುತ್ತದೆ.
ಕುಮಾರ ಪರ್ವತ ಚಾರಣಕ್ಕೆ ಹೋಗುವವರ ಗಮನಕ್ಕೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಈ ವರ್ಷದಿಂದ ಕುಮಾರ ಪರ್ವತ ಚಾರಣಕ್ಕೂ ಸಹ ಅರಣ್ಯ ಇಲಾಖೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಮಾಡಿದೆ. ಒಬ್ಬ ವ್ಯಕ್ತಿ ತಂಡದ ನಾಯಕನಾಗಿ ಹೆಸರು ನೀಡಿ ಒಟ್ಟು 10 ಜನರ ತಂಡ ಮಾಡಿ ಪ್ರತಿಯೊಬ್ಬರಿಗೆ 350 ರೂ. ದರವನ್ನು ಪಾವತಿಸಿ ಟಿಕೆಟ್ ಬುಕ್ ಮಾಡಬಹುದು.
ಟೆಂಟ್ ಬೇಕಾದರೆ ಪ್ರತ್ಯೇಕವಾಗಿ ಗಿರಿಗದ್ದೆಯಲ್ಲಿ (ಭಟ್ಟರ ಮನೆ ಅಥವ ಅರಣ್ಯ ಇಲಾಖೆ ಚೆಕ್ ಪೋಸ್ಟ್) ಹಣ ಪಾವತಿ ಮಾಡಿ ಪಡೆದುಕೊಳ್ಳಬಹುದು. ಅಕ್ಟೋಬರ್ 6ರಿಂದ ಕುಮಾರ ಪವರ್ತ ಚಾರಣಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳಲಿದೆ. ಪ್ರತಿದಿನ 335 ಜನರಿಗೆ ಚಾರಣಕ್ಕೆ ಹೋಗಲು ಅವಕಾಶವನ್ನು ಕಲ್ಪಿಸಲಾಗಿದೆ.
ಕುಮಾರ ಪರ್ವತ ಚಾರಣಕ್ಕೆ ಸುಬ್ರಹ್ಮಣ್ಯ-ಕುಮಾರ ಪರ್ವತ-ಸುಬ್ರಹ್ಮಣ್ಯ ಮತ್ತು ಬೀದಳ್ಳಿ (ಸೋಮವಾರಪೇಟೆ)-ಕುಮಾರ ಪರ್ವತ-ಬೀದಳ್ಳಿ ಹಾಗೂ ಬೀದಳ್ಳಿ-ಕುಮಾರ ಪರ್ವತ-ಸುಬ್ರಹ್ಮಣ್ಯ ಮಾರ್ಗದ ಮೂಲಕ ಸಾಗಬಹುದು.
ಆಸಕ್ತರು ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ವೆಬ್‌ಸೈಟ್ ವಿಳಾಸ ಇಲ್ಲಿದೆ. ವಿವರಗಳನ್ನು ನೋಡಿ ಟಿಕೆಟ್ ಬುಕ್ ಮಾಡಿ. https://aranyavihaara.karnataka.gov.in. ಚಾರಣಕ್ಕೆ ಬನ್ನಿ, ಆದರೆ ಅಲ್ಲಿನ ಸ್ವಚ್ಛತೆ, ಪರಿಸರವನ್ನು ಕಾಪಾಡಿ. ದಯವಿಟ್ಟು ಪ್ಲಾಸ್ಟಿಕ್ ಬಳಸಬೇಡಿ ಎಂದು ಮನವಿ ಮಾಡಲಾಗಿದೆ.
ಕುಮಾರ ಪರ್ವತ ಟ್ರಕ್ ಆಕರ್ಷಣೆಗಳು: ಕುಮಾರ ಪರ್ವತ ಚಾರಣ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಜನಪ್ರಿಯ. ಈ ಚಾರಣವು ಮಧ್ಯಮ ಹಂತದ ಅಂದರೆ ತೀರಾ ಸುಲಭವಲ್ಲದ ಆದರೆ ಅಷ್ಟೊಂದು ಕಷ್ಟವೂ ಇಲ್ಲದ ಚಾರಣವಾಗಿದೆ. ಸಾಕಷ್ಟು ದೈಹಿಕ ಕ್ಷಮತೆ ಇರುವ ಯಾರಾದರೂ ಇದನ್ನು ಕೈಗೊಳ್ಳಬಹುದು. ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಮಾರ ಪರ್ವತ ಚಾರಣದಲ್ಲಿ ತಳಹಂತದಿಂದ ಶಿಖರದ ವರೆಗೆ ಒಟ್ಟು 25-28 ಕಿ. ಮೀ. ನಡೆಯಬೇಕಾಗುತ್ತದೆ. ಸಾಮಾನ್ಯವಾಗಿ ಎರಡು ದಿನಗಳ ಅವಧಿಯಲ್ಲಿ ಚಾರಣ ಪೂರ್ಣಗೊಳ್ಳುತ್ತದೆ.
ಚಾರಣದ ಸಮಯದಲ್ಲಿ ತಲುಪಿದ ಗರಿಷ್ಠ ಎತ್ತರವು ಸಮುದ್ರ ಮಟ್ಟದಿಂದ ಸುಮಾರು 1700 ಮೀಟರ್ ಇರುತ್ತದೆ. ಮೇಲೆ ತಲುಪಿದ ನಂತರ ಕಾಣಸಿಗುವ ವಿಹಂಗಮ ನೋಟ, ದೈತ್ಯ ಬಂಡೆಗಳು ಮತ್ತು ತಂಪಾದ ಗಾಳಿ/ ಮಂಜು ಕಣ್ತುಂಬಿಕೊಂಡು ಚಾರಣದ ನೋವನ್ನು ಮರೆಯಬಹುದಾಗಿದೆ. ಕುಮಾರ ಪರ್ವತ ಚಾರಣದ ಸಮಯದಲ್ಲಿ ಭಟ್ಟರ ಮನೆ, ಗಿರಿಗಡ್ಡೆ ವ್ಯೂ ಪಾಯಿಂಟ್, ಕುಮಾರ ಪರ್ವತ ವ್ಯೂ ಪಾಯಿಂಟ್‌ಗಳು, ನಿತ್ಯಾನಂದ ಶ್ರೀ ಕೈಲಾಸ ದೇವಸ್ಥಾನ, ಪುಷ್ಪಗಿರಿ ಶಿಖರ ಪ್ರಮುಖ ಆಕರ್ಷಣೆಯಾಗಿದೆ.
ಅರಣ್ಯ ಇಲಾಖೆ ಅನುಮತಿ ಇಲ್ಲದೇ ಇಲ್ಲಿ ಚಾರಣ ಮಾಡುವಂತಿಲ್ಲ. ಕರ್ನಾಟಕದ ವಿವಿಧ ಸಾಹಸ ಕ್ರೀಡಾ ಕಂಪನಿಗಳು ಈ ಚಾರಣವನ್ನು ಆಯೋಜಿಸುತ್ತವೆ. ಇದು ಬೆಂಗಳೂರು ನಗರದಿಂದ ಸುಮಾರು 280 ಕಿ. ಮೀ. ಮತ್ತು ಮಂಗಳೂರಿನಿಂದ 105 ಕಿ. ಮೀ. ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ. ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಮಂಗಳೂರು ಅಥವಾ ಬೆಂಗಳೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಇದೆ.












Click it and Unblock the Notifications