ಬೆಳಗಾವಿ-ಅಂಬೋಲಿ ಫಾಲ್ಸ್ ವಿಶೇಷ ಬಸ್; ಸಮಯ, ದರ
ಬೆಳಗಾವಿ, ಜುಲೈ 21; ಬೆಳಗಾವಿ-ಅಂಬೋಲಿ ರಸ್ತೆಯು ಜಲಾವೃತವಾಗಿದ್ದು, ಬಸ್ ಕಾರ್ಯಾಚರಣೆ ಸಾಧ್ಯವಾಗದಿರುವ ಕಾರಣ ಬೆಳಗಾವಿ-ಅಂಬೋಲಿ ಫಾಲ್ಸ್ ವಿಶೇಷ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶುಕ್ರವಾರ ಸಂಜೆಯ ಪ್ರಕಟಣೆ ತಿಳಿಸಿದೆ.
ಕರ್ನಾಟಕದಲ್ಲಿ ಜುಲೈ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸಿ, ಬೊಬ್ಬಿರಿಯುತ್ತಿದೆ. ಒಂದು ಕಡೆ ರೈತರು ಸಂತಸಗೊಂಡಿದ್ದಾರೆ. ಮತ್ತೊಂದು ಕಡೆ ಪ್ರವಾಸಿ ತಾಣಗಳಿಗೆ ಜೀವಕಳೆ ಬಂದಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರ ಸಂಖ್ಯೆಯೂ ಹೆಚ್ಚಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂಬೋಲಿ ಫಾಲ್ಸ್ ನೋಡಲು ಹೋಗುವ ಪ್ರವಾಸಿಗರ ಅನುಕೂಲಕ್ಕೆ ಬೆಳಗಾವಿ ನಗರ ಮತ್ತು ಅಂಬೋಲಿ ಫಾಲ್ಸ್ ನಡುವೆ ವಿಶೇಷ ಬಸ್ ಓಡಿಸುತ್ತಿದೆ.

ಪ್ರತಿ 2ನೇ ಮತ್ತು 4 ಶನಿವಾರ ಹಾಗೂ ಪ್ರತಿ ಭಾನುವಾರ ಈ ವಿಶೇಷ ಬಸ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ ಬಸ್ ಅಂಬೋಲಿ ಫಾಲ್ಸ್‌ಗೆ ತೆರಳಿ ಮತ್ತೆ ಬೆಳಗಾವಿಗೆ ವಾಪಸ್ ಆಗಲಿದೆ.
ವೇಳಾಪಟ್ಟಿ, ದರದ ಮಾಹಿತಿ; NWKRTCಯ ವಿಶೇಷ ಬಸ್‌ನಲ್ಲಿ 290 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಇದು ವಿಶೇಷ ಸಾರಿಗೆ ಆಗಿರುವುದರಿಂದ ಈ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ 'ಶಕ್ತಿ' ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 9 ಗಂಟೆಗೆ ಬಸ್ ನಿರ್ಗಮಿಸಲಿದೆ. ನಾಗರ ತಾಸ ಫಾಲ್ಸ್‌ಗೆ 11 ಗಂಟೆಗೆ ತಲುಪಲಿದೆ. ನಾಗರ ತಾಸ ಫಾಲ್ಸ್‌ನಿಂದ 12 ಗಂಟೆಗೆ ಹೊರಡುವ ಬಸ್ ಅಂಬೋಲಿ ಫಾಲ್ಸ್‌ಗೆ 12.30ಕ್ಕೆ ತಲುಪಲಿದೆ. ಅಂಬೋಲಿ ಫಾಲ್ಸ್‌ನಿಂದ 16 ಗಂಟೆಗೆ ಹೊರಡುವ ಬಸ್ ಬೆಳಗಾವಿಗೆ 18 ಗಂಟೆಗೆ ತಲುಪಲಿದೆ.
ಈ ವಿಶೇಷ ಬಸ್‌ನಲ್ಲಿ ಸಂಚಾರ ನಡೆಸುವ ಜನರು ಆಸಕ್ತರು ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 7760991612, 7760991613 ಮತ್ತು 7760991625.
ಮುಂಗಾರು ಮಳೆಯ ಆರ್ಭಟಕ್ಕೆ ಗೋಕಾಕ್ ಫಾಲ್ಸ್‌ಗೆ ಜೀವಕಳೆ ಬಂದಿದೆ. ಆದ್ದರಿಂದ ಪ್ರವಾಸಿಗರ ಭೇಟಿಯೂ ಹೆಚ್ಚಿದೆ. NWKRTC ಬೆಳಗಾವಿ ನಗರ ಮತ್ತು ಗೋಕಾಕ್ ಫಾಲ್ಸ್ ನಡುವೆ 2 ಮತ್ತು 4ನೇ ಶನಿವಾರ ಮತ್ತು ಪ್ರತಿ ಭಾನುವಾರ ವಿಶೇಷ ಬಸ್ ಓಡಿಸುತ್ತಿದೆ. ಈ ಬಸ್‌ನ ಪ್ರಯಾಣ ದರ 190 ರೂ.ಗಳು.
ಅಂಬೋಲಿ ಫಾಲ್ಸ್ ಮಾಹಿತಿ; ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಅಂಬೋಲಿ ಫಾಲ್ಸ್ ಧುಮ್ಮಿಕ್ಕುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸಿಂಧದುರ್ಗ ಜಿಲ್ಲೆಯಲ್ಲಿ ಈ ಜಲಪಾತವಿದ್ದು, ಬೆಳಗಾವಿಯಿಂದ 70 ಕಿ. ಮೀ. ದೂರದಲ್ಲಿದೆ.
ಅಂಬೋಲಿಯಲ್ಲಿ ಪ್ರಕೃತಿ ಸೊಬಗನ್ನು ಸವಿಯುವುದೇ ಕಣ್ಣಿಗೆ ಒಂದು ಹಬ್ಬ. ಅಂಬೋಲಿ ಫಾಲ್ಸ್, ಅಂಬೋಲಿ ಘಾಟ್‌ಗೆ ಮಳೆಗಾಲದ ಸಂದರ್ಭದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಕೃತಿ ಸೌಂದರ್ಯದ ಸೊಬಗನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.












Click it and Unblock the Notifications