ಕೊಡಗು; ಕಾವೇರಿ ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಅವಕಾಶವಿಲ್ಲ
ಮಡಿಕೇರಿ, ಜೂನ್ 19: ಕಾವೇರಿ ತ್ರಿವೇಣಿ ಸಂಗಮ ಮತ್ತು ಭಗಂಡೇಶ್ವರ ದೇವಾಲಯ ಕೊಡಗು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳು. ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಯಾವ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಭಾಗಮಂಡಲ ಮೇಲ್ಸೇತುವೆ ವೀಕ್ಷಣೆಯ ಸಂದರ್ಭದಲ್ಲಿ ಪ್ರವಾಸಿಗರು ತ್ರಿವೇಣಿ ಸಂಗಮದಲ್ಲಿ ಈಜಾಡುತ್ತಿದ್ದರು. ಇದನ್ನು ಕಂಡು ಗರಂ ಆದ ಅವರು ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡರು.

ದಕ್ಷಿಣ ಭಾರತದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕಾವೇರಿ ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಯಾವ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಪೊಲೀಸರು ಮತ್ತು ಭಗಂಡೇಶ್ವರ ದೇವಾಲಯ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದರು.
ಶಾಸಕರ ಸೂಚನೆ ಏನು?; ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ಜಲಕ್ರಿಡೆ ನಡೆಸುತ್ತಿದ್ದ ಪ್ರವಾಸಿಗರಿಗೆ ಕ್ಷೇತ್ರದ ಪಾವಿತ್ರ್ಯತೆ ಬಗ್ಗೆ ತಿಳಿಸಿ, ಮನವರಿಕೆ ಮಾಡಿಕೊಟ್ಟರು. ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ವಾತಾವರಣ ನಿರ್ಮಾಣವಾಗಬಾರದು ಎಂದರು.
ಸಿಬ್ಬಂದಿಗಳು ಕಾವಲು ಕಾಯುವಂತೆ ನಿರ್ದೇಶನ ನೀಡಿದ ಶಾಸಕ ಪೊನ್ನಣ್ಣ ಅವರು ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದರೆ ಒದಗಿಸುವುದಾಗಿ ತಿಳಿಸಿದರು. ಪ್ರವಾಸಿಗರಿಗೆ ಈ ನಿಟ್ಟಿನಲ್ಲಿ ಮಾಹಿತಿ ನೀಡಲು ತಿಳುವಳಿಕೆ ಫಲಕ ಅಳವಡಿಸುವಂತೆ ಸಬ್ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದರು.
ಶಾಸಕರು ಮಾಧ್ಯಮಗಳ ಜೊತೆ ಮಾತನಾಡಿ, "ಭಾಗಮಂಡಲ ಮತ್ತು ತಲಕಾವೇರಿ ಪೌರಾಣಿಕ ಹಿನ್ನಲೆ ಹೊಂದಿರುವ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ವಿರುದ್ದವಾಗಿ ಯಾವುದೇ ನಡವಳಿಕೆ ಸಹಿಸಲು ಸಾಧ್ಯವಿಲ್ಲ" ಎಂದರು.
"ಮಾಹಿತಿ ಕೊರತೆಯಿಂದ ಕೆಲ ಪ್ರವಾಸಿಗರಿಂದ ಅಪಚಾರವಾಗುತ್ತಿರುವ ವಿವರಗಳು ತಮ್ಮ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಾವು ಬದ್ದರಾಗಿದ್ದೇವೆ" ಎಂದು ಶಾಸಕರು ಹೇಳಿದರು.
ತಲಕಾವೇರಿ ಸಮೀಪದ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರ. ಇಲ್ಲಿ ನಡೆಯುವ ಪೊಲಿಂಕಾನ ಉತ್ಸವ ಬಹಳ ವಿಶೇಷ. ಇಲ್ಲಿ ಪೂಜೆ ಸಲ್ಲಿಕೆ ಮಾಡಿ ಜೀವನದಿ ಕಾವೇರಿ ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರು, ನಾಡಿನ ಜನರಲ್ಲಿ ಸುಭಿಕ್ಷೆ ತರುವಂತಾಗಬೇಕು ಎಂದು ಪ್ರಾರ್ಥಿಸಲಾಗುತ್ತದೆ.
ಪ್ರತಿ ವರ್ಷ ಆಷಾಢ ಮಾಸದಲ್ಲಿ ಪೊಲಿಂಕಾನ ಉತ್ಸವ ನಡೆಯಲಿದ್ದು, ಆಗ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ಪೂಜೆ ಪುರಸ್ಕಾರ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆ ಮತ್ತಿತರವನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಕಾವೇರಿ ಕರುನಾಡಿನ ಜೀವನದಿ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮವೇ ಪೊಲಿಂಕಾನ ಉತ್ಸವ. ವಜ್ರ ವೈಡೂರ್ಯಗಳಿಂದ ಅಲಂಕರಿಸಿ ಕಾವೇರಿ ಮಾತೆಗೆ ಬೇಕಾದ ವಸ್ತುಗಳನ್ನು ಬಾಗಿನದ ಮೂಲಕ ಅರ್ಪಿಸುವ ಕಾರ್ಯಕ್ರಮವು ಪೊಲಿಂಕಾನದ ವಿಶೇಷ ಪೂಜಾ ಕಾರ್ಯಕ್ರಮ.
ಆಷಾಡ ಮಾಸದಲ್ಲಿ ಭಾರೀ ಮಳೆಯಾಗುತ್ತಿತ್ತು. ಇದರಿಂದಾಗಿ ಯಾವುದೇ ಜೀವಕ್ಕೆ ಹಾನಿಯಾಗದಂತೆ ಕಾವೇರಿ ಮಾತೆಗೆ ಪ್ರಾರ್ಥಿಸಲು ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಕಳೆದ ಬಾರಿ ಕೊಡಗಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದ. ಕಾವೇರಿ ನದಿ ಬತ್ತಿ ಹೋಗಿ, ಕುಡಿಯುವ ನೀರಿನ ಕೊರತೆಯೂ ಎದುರಾಗಿತ್ತು.












Click it and Unblock the Notifications