5 ಗಂಟೆಗಳಲ್ಲಿ ಕೇವಲ 46 ಕಿ.ಮೀ ಪ್ರಯಾಣ, ಭಾರತದ ಈ ರೈಲು ಯಾಕೆ ಇಷ್ಟು ವಿಶೇಷ ?
ಭಾರತದಲ್ಲಿ ಅತ್ಯಂತ ನಿಧಾನವಾಗಿ ಸಂಚರಿಸುವ ರೈಲು ಯಾವುದು ಎಂದರೆ ನಿಮಗೆ ಗೊತ್ತಿದೆಯಾ, 46 ಕಿಲೋಮೀಟರ್ ದೂರ ಸಾಗಲು ಸರಿ ಸುಮಾರು 5 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ನೀಲಗಿರಿ ಮೌಂಟನ್ ರೈಲ್ವೆ ಇದೀಗ ಮತ್ತೆ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಮತ್ತು ಊಟಿ ನಡುವಿನ ಈ ಐತಿಹಾಸಿಕ ರೈಲು ಪ್ರಯಾಣವು ಪ್ರಕೃತಿ ಸೌಂದರ್ಯ ಮತ್ತು ಹಳೆಯ ಕಾಲದ ರೈಲು ಅನುಭವಕ್ಕಾಗಿ ಪ್ರಸಿದ್ಧಿಯಾಗಿದೆ.
ತನ್ನ ಅಪರೂಪದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಕ್ಕಾಗಿ ಪ್ರತಿಷ್ಠಿತ ಯುನೆಸ್ಕೋದ 'ಮೌಂಟನ್ ರೈಲ್ವೇಸ್ ಆಫ್ ಇಂಡಿಯಾ' ಜಾಗತಿಕ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ರೈಲು, ಭಾರತೀಯ ರೈಲ್ವೆಯ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿದೆ.

ಪ್ರಕೃತಿ ಸೌಂದರ್ಯದ ನಡುವೆ ಮೈನವಿರೇಳಿಸುವ ಪಯಣ
ಸಾಮಾನ್ಯ ರೈಲುಗಳು ವೇಗಕ್ಕೆ ಆದ್ಯತೆ ನೀಡಿದರೆ, ನೀಲಗಿರಿ ಎಕ್ಸ್‌ಪ್ರೆಸ್ ಮಾತ್ರ ಪ್ರಕೃತಿಯನ್ನು ಆಸ್ವಾದಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡುತ್ತದೆ. ತಮಿಳುನಾಡಿನ ಪಶ್ಚಿಮ ಘಟ್ಟಗಳ ರಮಣೀಯ ಶ್ರೇಣಿಗಳ ಮಧ್ಯೆ ಸಾಗುವ ಈ ರೈಲು ಪ್ರಯಾಣಿಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ಹಸಿರಿನ ಹೊದಿಕೆ: ಕಣ್ಣು ಹಾಯಿಸಿದಷ್ಟೂ ಕಾಣುವ ಹಸಿರು ಬೆಟ್ಟಗಳು.
ಚಹಾ ತೋಟಗಳು: ಮಂಜಿನ ನಗರಿ ಊಟಿಯ ಪ್ರಸಿದ್ಧ ಚಹಾ ತೋಟಗಳ ನಡುವಿನ ಸಂಚಾರ.
ದಟ್ಟ ಕಾಡುಗಳು: ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುವ ಕಾನನ ಹಾದಿ.
ಯಾಕೆ ಈ ರೈಲು ಇಷ್ಟು ನಿಧಾನವಾಗಿ ಸಂಚರಿಸುತ್ತದೆ ?
ನೀಲಗಿರಿ ಪರ್ವತಗಳ ಕಡಿದಾದ ಪ್ರದೇಶಗಳಲ್ಲಿ ಸಂಚರಿಸುವ ಈ ರೈಲು ಗಂಟೆಗೆ ಸರಾಸರಿ 9 ಕಿಲೋಮೀಟರ್ ವೇಗದಲ್ಲಿ ಮಾತ್ರ ಚಲಿಸುತ್ತದೆ. ಆದರೆ ಇದೇ ನಿಧಾನಗತಿಯ ಪ್ರಯಾಣವೇ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಪರ್ವತ ಪ್ರದೇಶದ ತೀವ್ರ ತಿರುವುಗಳು, ಏರುಭಾಗಗಳು ಮತ್ತು ಕಿರಿದಾದ ಹಳಿ ಮಾರ್ಗಗಳ ಕಾರಣ ರೈಲು ನಿಧಾನವಾಗಿ ಸಾಗಬೇಕಾಗುತ್ತದೆ.
ಪ್ರಯಾಣದ ಹಾದಿಯಲ್ಲಿನ ಪ್ರಮುಖ ಆಕರ್ಷಣೆಗಳು
ಮೆಟ್ಟುಪಾಳ್ಯಂನಿಂದ ಊಟಿಗೆ ಸಾಗುವ ಕೇವಲ 46 ಕಿಲೋಮೀಟರ್‌ಗಳ ಈ ಪ್ರಯಾಣದಲ್ಲಿ ಪ್ರವಾಸಿಗರನ್ನು ಸ್ವಾಗತಿಸುವ ಪ್ರಮುಖ ಅಂಶಗಳು ಇಲ್ಲಿವೆ.
ರೋಮಾಂಚಕ ಸುರಂಗಗಳು: ಬೆಟ್ಟಗಳನ್ನು ಕೊರೆದು ನಿರ್ಮಿಸಲಾದ 16 ಐತಿಹಾಸಿಕ ಸುರಂಗಗಳು.
ಕಡಿದಾದ ತಿರುವುಗಳು: ಮೈನವಿರೇಳಿಸುವ 200ಕ್ಕೂ ಹೆಚ್ಚು ತಿರುವುಗಳು.
ಭವ್ಯ ಸೇತುವೆಗಳು: ಕಣಿವೆಗಳನ್ನು ಜೋಡಿಸುವ 250ಕ್ಕೂ ಹೆಚ್ಚು ಬೃಹತ್ ಸೇತುವೆಗಳು.
'ಚಯ್ಯಾ ಚಯ್ಯಾ' ಹಾಡಿನಿಂದ ಹೆಚ್ಚಾದ ಖ್ಯಾತಿ
ನೀಲಗಿರಿ ಮೌಂಟನ್ ರೈಲ್ವೆಗೆ ಕೇವಲ ಪ್ರಕೃತಿ ಪ್ರೇಮಿಗಳಷ್ಟೇ ಅಲ್ಲ, ಸಿನಿಮಾ ರಂಗದೊಂದಿಗೂ ಅತ್ಯಂತ ನಿಕಟ ಸಂಬಂಧವಿದೆ. ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಪ್ರಸಿದ್ಧ 'ಚಯ್ಯಾ ಚಯ್ಯಾ' ಹಾಡಿನ ಚಿತ್ರೀಕರಣ ಇದೇ ರೈಲಿನ ಮೇಲೆ ನಡೆದಿರುವುದು ಈ ಹೆಮ್ಮೆಯ ಪರಂಪರೆಗೆ ಮತ್ತೊಂದು ಗರಿ ಮುಡಿಸಿದೆ.
ಅಕ್ಟೋಬರ್‌ನಿಂದ ಜೂನ್‌ವರೆಗೆ ಈ ರೈಲು ಪ್ರಯಾಣಕ್ಕೆ ಉತ್ತಮ ಸಮಯ ಎಂದು ಹೇಳಲಾಗುತ್ತದೆ. ಮಳೆಗಾಲದಲ್ಲಿ ಹಸಿರು ಪ್ರಕೃತಿ ಮತ್ತು ಮಂಜಿನ ಸೌಂದರ್ಯ ಹೆಚ್ಚಾಗಿದ್ದರೂ, ಕೆಲವೊಮ್ಮೆ ಭಾರೀ ಮಳೆಯಿಂದ ರೈಲು ಸಂಚಾರದಲ್ಲಿ ವಿಳಂಬ ಉಂಟಾಗಬಹುದು.
ಈ ಪ್ರಯಾಣವನ್ನು ಆರಂಭಿಬೇಕಾದರೆ ಮೆಟ್ಟುಪಾಳ್ಯಂ ಒಂದು ಪ್ರಮುಖ ಕೇಂದ್ರವಾಗಿದೆ. ಸಮೀಪದ ವಿಮಾನ ನಿಲ್ದಾಣ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ರಸ್ತೆ ಮತ್ತು ರೈಲು ಸಂಪರ್ಕದ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು.














Click it and Unblock the Notifications