ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್: ಪ್ರವಾಸಿಗರೇ ಮಡಿಕೇರಿಯ ಈ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ..!
ಮಡಿಕೇರಿ, ಡಿಸೆಂಬರ್ 19: ಕೊಡಗಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಇದು ಸಕಾಲ.. ಅದರಲ್ಲೂ ಸಣ್ಣಗೆ ಮೈನಡುಗಿಸುವ ಚಳಿಯಲ್ಲಿ ಮಂಜಿನ ಪರದೆಯಲ್ಲಿ ಅಡ್ಡಾಡುತ್ತಾ ಬಿಸಿ ಬಿಸಿ ಕಾಫಿ ಹೀರುವ ಮಜಾವೇ ಮರೆಯಲಾಗದ್ದು, ಇಂತಹ ಅನುಭವ ಪಡೆಯಲು ಮಡಿಕೇರಿ ಸೂಕ್ತ ತಾಣವಾಗಿದೆ. ಜತೆಗೆ ನಗರಕ್ಕೆ ಹೊಂದಿಕೊಂಡಂತಿರುವ ಮತ್ತು ಕೆಲವೇ ಕೆಲವು ಅಂತರಗಳಲ್ಲಿರುವ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದಾಗಿದೆ.
ಮಡಿಕೇರಿ ಬಗ್ಗೆ ಹೇಳಬೇಕೆಂದರೆ ಹಾಲೇರಿ ವಂಶದ ಮೂರನೇ ರಾಜನಾದ ಮುದ್ದುರಾಜನು 1681ರಲ್ಲಿ ಕಡಿದಾಗಿದ್ದ ಬೆಟ್ಟ ಪ್ರದೇಶವನ್ನು ಕಡಿದು ಸಮತಟ್ಟು ಮಾಡಿ ಊರನ್ನು ನಿರ್ಮಿಸಿದನು. ಅಷ್ಟೇ ಅಲ್ಲದೆ ಅಲ್ಲಿ ಕೋಟೆ ನಿರ್ಮಿಸಿ ಆಳ್ವಿಕೆ ಮಾಡಿದನೆಂದು ಹೇಳಲಾಗಿದೆ. ಅವತ್ತು ಮದ್ದುರಾಜ ನಿರ್ಮಿಸಿದ ಊರು ಮುದ್ದುರಾಜಕೇರಿಯಾಗಿ ಬಳಿಕ ಮಡಿಕೇರಿಯಾಯಿತು. 1834ರಲ್ಲಿ ಬ್ರಿಟೀಷರ ವಶವಾಯಿತು. ಈ ನಡುವೆ ಟಿಪ್ಪು ಸುಲ್ತಾನನ ಕಾಲದಲ್ಲಿ ಈ ಪ್ರದೇಶ ಆತನ ವಶವಾಗಿತ್ತು. ಆತ ಜಾಫರ್ ಬಾದ್ ಎಂದು ಕರೆದಿದ್ದರು. ಬ್ರಿಟೀಷರ ಕಾಲದಲ್ಲಿ ಮರ್ಕರ ಎಂದು ಕರೆಯಲಾಯಿತು. ಆದರೆ ಇವತ್ತಿಗೂ ಮಡಿಕೇರಿಯಾಗಿಯೇ ಉಳಿದಿದೆ.

ನೂರಾರು ವರ್ಷಗಳ ಹಿಂದೆ ಪುಟ್ಟಪಟ್ಟಣವಾಗಿದ್ದ ಮಡಿಕೇರಿ ಮಡಿಯಾಗಿತ್ತು. ಇಡೀ ನಗರ ಸಮತಟ್ಟಿಲ್ಲದೆ ಏರುತಗ್ಗುಗಳಿಂದ ಕೂಡಿದ್ದು, ಗುಡ್ಡದ ಮೇಲಿನಿಂದ ನೋಡಿದಾಗ ಕಂಡು ಬರುವ ದೃಶ್ಯಗಳು ಮನಮೋಹಕವಾಗಿರುತ್ತದೆ. ಬೆಟ್ಟದ ನಡುವಿನಿಂದ ಮೇಲೆದ್ದು ಬರುವ ಸೂರ್ಯೋದಯ ಮತ್ತು ಬೆಟ್ಟಗಳ ನಡುವೆ ಲೀನವಾಗುವ ಸೂರ್ಯಾಸ್ತಮಾನವನ್ನು ನೋಡುವುದೇ ಮಜಾ.. ಸಂಜೆಯಾಗುತ್ತಿದ್ದಂತೆಯೇ ನಡುಕ ಹುಟ್ಟಿಸುವ ಚಳಿ ಮುಂಜಾನೆ ಇಡೀ ನಗರವನ್ನೇ ಹೊದ್ದು ಕುಳಿತು ಬಿಡುವ ಮಂಜು ಒಂಥರಾ ಖುಷಿಕೊಡುತ್ತದೆ.
ಮಡಿಕೇರಿಯೊಳಗೆ ಒಂದು ಸುತ್ತು ಪ್ರಯಾಣ
ಇನ್ನು ಮಡಿಕೇರಿಗೆ ಹೊಂದಿಕೊಂಡಂತೆ ಕೆಲವು ಪ್ರವಾಸಿ ತಾಣಗಳಿದ್ದು, ಇವುಗಳನ್ನು ಪ್ರವಾಸಿಗರು ನೋಡಿಕೊಂಡು ಬರಬಹುದಾಗಿದೆ. ಮಡಿಕೇರಿಯ ಹೃದಯ ಭಾಗದ ಎತ್ತರದ ಪ್ರದೇಶದಲ್ಲಿ ಕೋಟೆಯಿದ್ದು ಅದರೊಳಗೆ ಅರಮನೆಯಿದೆ. ಕೋಟೆಯು ಅಂಕುಡೊಂಕಾದ ಷಡ್ಕೋನಾಕಾರದ ಸ್ಥಳ ವಿನ್ಯಾಸವನ್ನು ಹೊಂದಿದ್ದು, ಆರು ವಿವಿಧ ಮೂಲೆಗಳಲ್ಲಿ ಬುರುಜನ್ನು ಹೊಂದಿದೆ. ಈ ಬುರುಜುಗಳಿಂದ ನಿಂತು ನೋಡಿದರೆ ನಗರದ ವಿಹಂಗಮ ನೋಟ ಲಭ್ಯವಾಗುತ್ತದೆ.
ಕೋಟೆಯ ಮಹಾದ್ವಾರವು ಪೂರ್ವಾಭಿಮುಖವಾಗಿದ್ದು, ಈ ದ್ವಾರದಿಂದ ಪ್ರವೇಶಿಸಿ ಮೊದಲ ದ್ವಾರ ದಾಟುತ್ತಿದ್ದಂತೆಯೇ ಗಣಪತಿ ದೇಗುಲ ಸಿಗುತ್ತದೆ. ಅಲ್ಲಿಂದ ಮುಂದೆ ಸಿಗುವ ದ್ವಾರ ಪ್ರವೇಶಿಸಿ ಮುನ್ನಡೆದರೆ ಅರಮನೆ ಎದುರಾಗುತ್ತದೆ. ಅರಮನೆಯು 1814ರ ನಂತರದ ವರ್ಷಗಳಲ್ಲಿ ಪುನರ್ರಚನೆಗೊಂಡಿದ್ದು, ಎರಡನೆಯ ಲಿಂಗರಾಜನ ಕಾಲದಲ್ಲಿದ್ದ ಹುಲ್ಲಿನ ಛಾವಣಿಯನ್ನು ತೆಗೆದು ಬ್ರಿಟಿಷರು ಹೆಂಚು ಹಾಕಿದ್ದಾರೆ. ಎರಡು ಅಂತಸ್ತನ್ನು ಹೊಂದಿರುವ ಅರಮನೆಯು ಚೌರಸ್ ಸ್ಥಳ ವಿನ್ಯಾಸವನ್ನು ಹೊಂದಿದೆ. ವಿಶಾಲ ಹಜಾರಗಳನ್ನು ಸಭಾ ಭವನವನ್ನು ಹೊಂದಿರುವ ಅರಮನೆಯ ಭಿತ್ತಿಗಳಲ್ಲಿ ವಿವಿಧ ಚಿತ್ರಗಳು ಮೂಡಿವೆ. ವಾಸ್ತುಶಿಲ್ಪ ವಿನ್ಯಾಸದಲ್ಲಿ ಹೊಸತನವಿದ್ದು, ಆಕರ್ಷಣೀಯವಾಗಿದೆ.

ಮಡಿಕೇರಿಯ ಸುಂದರವಾದ ಅರಮನೆ
ಸುಮಾರು 110 ಅಡಿಯಷ್ಟು ಅಗಲವಿರುವ ಕಟ್ಟಡದಲ್ಲಿ ಕಮಾನು ಹಾಗೂ ಎತ್ತರವಾದ ಚೌಕಾಕಾರದ ಕಿಟಕಿಗಳು ಬಣ್ಣದ ಗಾಜುಗಳಿಂದ ಕೂಡಿದ್ದು ಗಮನಸೆಳೆಯುತ್ತವೆ. ಪ್ರವೇಶ ದ್ವಾರದಲ್ಲಿ ಎರಡು ಕುದುರೆಗಳು ನೆಗೆಯುತ್ತಿರುವ ಕೆತ್ತನೆಯ ವೀಕ್ಷಕ ಮಂಟಪ ಕಾಣಸಿಗುತ್ತದೆ. ಅರಮನೆಯ ಎಡ ಪಾರ್ಶ್ವದ ಮುಂಭಾಗದಲ್ಲಿ ಕಲ್ಲಿನಿಂದ ಕೆತ್ತಲಾದ ಎರಡು ಆನೆಗಳು ಆಕರ್ಷಕವಾಗಿವೆ. ಅರಮನೆಯ ಒಂದು ಪಾರ್ಶ್ವದಲ್ಲಿ ಗಡಿಯಾರ ಗೋಪುರ ಕಂಡು ಬರುತ್ತದೆ.
ಅರಮನೆ ಆವರಣದಲ್ಲಿ ವಸ್ತು ಸಂಗ್ರಹಾಲಯವಿದ್ದು, ಈ ಸಂಗ್ರಹಾಲಯದ ಕಟ್ಟಡ ಹಿಂದೆ ಚರ್ಚ್ ಆಗಿತ್ತಂತೆ. ಕೋನಾಕಾರದ ಗಾಥಿಕ್ ಶೈಲಿಯ ಗೋಪುರವನ್ನು ಹೊಂದಿರುವ ಈ ಕಟ್ಟಡ ಕೋನಾಕಾರದ ಕಮಾನುಗಳ ಕಿಟಿಕಿಯೊಂದಿಗೆ ಸುಂದರವಾಗಿದೆ. ಪಕ್ಕದಲ್ಲಿಯೇ ಮಹಾತ್ಮಗಾಂಧಿ ಕೇಂದ್ರ ಗ್ರಂಥಾಲಯವಿದೆ. ಹಿಂದೆ ತಪ್ಪಿತಸ್ಥರನ್ನು ಗಲ್ಲಿಗೇರಿಸುತ್ತಿದ್ದರೆನ್ನಲಾದ ಬಾವಿಯಿದ್ದು, ಇದರತ್ತ ತೆರಳುವ ಪ್ರವಾಸಿಗರು ಕುತೂಹಲದ ನೋಟ ಬೀರುತ್ತಾರೆ.
ಲಿಂಗರಾಜೇಂದ್ರ ನಿರ್ಮಿಸಿದ ದೇಗುಲ
ಇನ್ನು ಇಲ್ಲಿಗೆ ಸಮೀಪದಲ್ಲಿಯೇ ಓಂಕಾರೇಶ್ವರ ದೇವಸ್ಥಾನವಿದೆ. 1820 ರಲ್ಲಿ ಎರಡನೇ ಲಿಂಗರಾಜೇಂದ್ರನು ಓಂಕಾರೇಶ್ವರ ದೇಗುಲವನ್ನು ಕಟ್ಟಿಸಿದ್ದಾನೆ. ಇಂಡೋಸಾರ್ಸನಿಕ್ ಶೈಲಿಯಲ್ಲಿರುವ ದೇಗುಲ ನಾಲ್ಕೂ ಮೂಲೆಗಳಲ್ಲೂ ಉದ್ದನೆಯ ಗೋಪುರಗಳನ್ನು ಹೊಂದಿದ್ದು ನಡುವೆ ಬೃಹತ್ ಗುಮ್ಮಟವಿದ್ದು ಆಕರ್ಷಣೀಯವಾಗಿದೆ. ಲಿಂಗರಾಜೇಂದ್ರನು ಪರಮ ದೈವ ಭಕ್ತನಾಗಿದ್ದ ಸುಬ್ಬನರಸಯ್ಯ ಎಂಬ ಬ್ರಾಹ್ಮಣನನ್ನು ಅನ್ಯಾಯವಾಗಿ ಶಿಕ್ಷಿಸಿದ್ದರಿಂದ ಆತ ಸಾವಿಗೀಡಾದನೆಂದೂ. ಇದರಿಂದಾಗಿ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಲು ಜ್ಯೋತಿಷಿಗಳ, ಮಂತ್ರವಾದಿಗಳ ಹಾಗೂ ನೀಲೇಶ್ವರ ತಂತ್ರಿಗಳ ಸಲಹೆಯಂತೆ ಈ ಶಿವನ ದೇವಸ್ಥಾನವನ್ನು ನಿರ್ಮಿಸಿದನೆಂಬ ಐತಿಹ್ಯವಿದೆ.

ಇಲ್ಲಿಗೆ ಸಮೀಪದಲ್ಲಿಯೇ ಗಾಂಧಿಮಂಟಪವಿದೆ. ಇಲ್ಲಿನ ಮೈದಾನದಲ್ಲಿ ಗಾಂಧೀಜಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದು ಆ ನೆನಪಿಗಾಗಿ ಗಾಂಧಿ ಮಂಟಪವನ್ನು ಕಟ್ಟಲಾಗಿದ್ದು, ಇಲ್ಲಿನ ಮೈದಾನವನ್ನು ಗಾಂಧಿ ಮೈದಾನ ಎಂದೇ ಕರೆಯಲಾಗುತ್ತದೆ. ಇದಕ್ಕೆ ಹೊಂದಿಕೊಂಡಂತೆ ರಾಜಾಸೀಟ್ ಇದೆ. ಇವತ್ತಿನ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.
ನಿಸರ್ಗ ಸುಂದರ ರಾಜಾಸೀಟ್
ರಾಜರ ಕಾಲದಲ್ಲಿ ರಾಜ ಪರಿವಾರದೊಂದಿಗೆ ಸಂಜೆಯ ಸಮಯದಲ್ಲಿ ಅರಮನೆಯಿಂದ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದರಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ರಾಜಾಸೀಟ್ ಆಗಿದೆ. ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಗಿದ್ದು, ಇದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ರಾಜಾಸೀಟಿನ ಬಳಿಯಲ್ಲಿಯೇ ಪುಟಾಣಿ ರೈಲು, ಶಕ್ತಿದೇವತೆ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮನ ದೇಗುಲವಿದೆ. ದೇವಾಲಯವನ್ನು ದಾಟಿ ಮುನ್ನಡೆದರೆ ಆಕಾಶವಾಣಿ ಕೇಂದ್ರ, ನೆಹರು ಮಂಟಪವಿದೆ.
ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ಗದ್ದಿಗೆಯಿದ್ದು, ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇನ್ನು ಎಡಭಾಗದಲ್ಲಿ 1834ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್‌ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳು ಇಲ್ಲಿವೆ.

ಮನಕ್ಕೆ ಮುದ ನೀಡುವ ಅಬ್ಬಿಫಾಲ್ಸ್
ಇಲ್ಲಿಂದ ಮುಂದಕ್ಕೆ ಅಂದರೆ ಸುಮಾರು ಸುಮಾರು 8 ಕಿ.ಮೀ. ತೆರಳಿದರೆ ಅಬ್ಬಿ ಜಲಪಾತವನ್ನು ತಲುಪಬಹುದು. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್ ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಆದರೆ ಇದು ಇಂದಿಗೂ ಅಬ್ಬಿ ಫಾಲ್ಸ್ ಆಗಿಯೇ ಹೆಸರು ವಾಸಿಯಾಗಿದೆ.
ಇಲ್ಲಿಂದ ಮುಂದಕ್ಕೆ ಪ್ರಯಾಣ ಬೆಳಸಿದರೆ ನಿಸರ್ಗ ರಮಣೀಯ ತಾಣವಾದ ಮಾಂದಲ್ ಪಟ್ಟಿಗೆ ತೆರಳಬಹುದಾಗಿದೆ. ಏರು ರಸ್ತೆಯಲ್ಲಿ ಸಾಗಿ ಬೆಟ್ಟದ ಮೇಲೆ ಹೋದರೆ ಬೆಟ್ಟಗುಡ್ಡಗಳ ಸುಂದರ ದೃಶ್ಯಗಳನ್ನು ನೋಡಬಹುದಾಗಿದೆ. ಒಟ್ಟಾರೆ ಮಡಿಕೇರಿಗೆ ಆಗಮಿಸುವ ಪ್ರವಾಸಿಗರು ನಗರದಲ್ಲಿ ವಾಸ್ತವ್ಯ ಹೂಡಿ ನಗರ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳನ್ನೆಲ್ಲ ನೋಡಿಕೊಂಡು ಬರಬಹುದಾಗಿದೆ.












Click it and Unblock the Notifications