ಕೊಡಗು ಪ್ರವಾಸೋದ್ಯಮ; ಹೊಸ ವೆಬ್‌ಸೈಟ್ ಅಂಗೈನಲ್ಲೇ ಮಾಹಿತಿ
ಮಡಿಕೇರಿ, ಫೆಬ್ರವರಿ 08: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗು ಜಿಲ್ಲೆಗೆ ಭೇಟಿ ನೀಡುವವರಿಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ. ಕೊಡಗು ಹೋಂ ಸ್ಟೇಗಳ ದರ, ಅಗತ್ಯ ಮೂಲ ಸೌಕರ್ಯ, ಮತ್ತಿತರ ಮಾಹಿತಿ ಒಳಗೊಂಡ ವೆಬ್‍ಸೈಟ್ ಅಭಿವೃದ್ಧಿ ಪಡಿಸಲಾಗುತ್ತಿದೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಹಲವು ವಿಷಯಗಳ ಕುರಿತು ಸುಧೀರ್ಘವಾದ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು, "ಕೊಡಗು ಹೋಂ ಸ್ಟೇಗಳ ದರ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಮತ್ತಿತರ ಮಾಹಿತಿ ಒಳಗೊಂಡ ವೆಬ್‍ಸೈಟ್ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದ್ದು, ಅನುಮತಿ ಬಾಕಿ ಇದೆ" ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, "ಸರ್ಕಾರದಿಂದ ವೆಬ್‍ಸೈಟ್ ಅಭಿವೃದ್ಧಿಪಡಿಸಿ ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ತಾಲ್ಲೂಕುವಾರು ನೋಂದಾಯಿತ ಹೋಂಸ್ಟೇಗಳ ನಿಖರ ಮಾಹಿತಿ ದೊರೆಯಲಿದೆ. ಪ್ರವಾಸಿಗರಿಗೆ ಆನ್‍ಲೈನ್ ಮೂಲಕ ಹೋಂಸ್ಟೇ ಮಾಹಿತಿ ದೊರೆಯುವಂತಾಗಬೇಕು. ಹೋಂ ಸ್ಟೇ ಮುಂಚಿತವಾಗಿ ಕಾಯ್ದಿರಿಸಲು ಇದು ಸಹಕಾರಿ ಆಗಲಿದೆ" ಎಂದು ಹೇಳಿದರು.
ಸಭೆಯಲ್ಲಿ ಚರ್ಚೆಯಾದ ವಿಚಾರಗಳು: ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಹೋಂ ಸ್ಟೇ ಮಾಲೀಕರು ಹಾಗೂ ಟ್ಯಾಕ್ಸಿ ಮಾಲೀಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಹೆದ್ದಾರಿ ಫಲಕ ಹಾಗೂ ಸೈನೇಜ್ ಬೋರ್ಡ್‍ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲು ಮುಂದಾಗಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, "ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು. ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಬೇಕು. ಜಿಲ್ಲೆಯಲ್ಲಿ 4 ಸಾವಿರ ಹೋಂ ಸ್ಟೇಗಳಿದ್ದು, ಸುಮಾರು 1900 ರಷ್ಟು ಹೋಂ ಸ್ಟೇಗಳು ನೋಂದಣಿಯಾಗಿವೆ. ಉಳಿದ ಹೋಂ ಸ್ಟೇಗಳನ್ನು ನೋಂದಣಿ ಮಾಡಿಸಬೇಕು" ಎಂದು ತಿಳಿಸಿದರು.
ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್‍ನ ಅಧ್ಯಕ್ಷ ಬೆನ್ ಗಣಪತಿ ಮಾತನಾಡಿ, "ಹೋಂ ಸ್ಟೇ ಆರಂಭಿಸುವಾಗ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಿಂಬರಹ ಪಡೆಯಬೇಕಿದೆ. ಜೊತೆಗೆ ಪೊಲೀಸ್ ಇಲಾಖೆಯಿಂದ ಮತ್ತು ಸ್ಥಳೀಯ ಸಂಸ್ಥೆಗಳಿಂದ ಎನ್‍ಒಸಿ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಸಕಾಲದಲ್ಲಿ ಪ್ರಕ್ರಿಯೆಗಳು ಆಗಬೇಕು" ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಮಾಂದಲ್ ಪಟ್ಟಿ ಮತ್ತು ಅಬ್ಬಿಫಾಲ್ಸ್ ಮತ್ತಿತರ ಕಡೆಗಳಲ್ಲಿ ಯೆಲ್ಲೋ ಬೋರ್ಡ್ ಹೊರತುಪಡಿಸಿ ವೈಟ್‍ಬೋರ್ಡ್ ವಾಹನಗಳು ಸಹ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಗ್ಗೆ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಒಂದು ದರ ನಿಗದಿ ಮಾಡಿ ದರಪಟ್ಟಿಯ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ಮಾಡಿದರು.
ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷ ಕುಪ್ಪಂಡ ವಸಂತ ಮಾತನಾಡಿ, "ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಹಾಗೂ ಬ್ಯಾಡ್ಜ್ ಹೊಂದಿರಬೇಕು. ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ದರ ನಿಗದಿಪಡಿಸಿ ದರಪಟ್ಟಿಯ ನಾಮಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.
ಹೋಂ ಸ್ಟೇ ಅಸೋಷಿಯೇಷನ್‍ನ ಮೋಂತಿ ಗಣೇಶ್ ಮಾತನಾಡಿ, ಮಾಂದಲ್‍ಪಟ್ಟಿಯಲ್ಲಿ ಅರಣ್ಯ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಪ್ರವಾಸಿ ತಾಣಗಳಾದ ರಾಜಾಸೀಟು ಮತ್ತು ಚೇಲಾವರ ಜಲಪಾತ ಹಾಗೂ ದುಬಾರೆ ಆನೆಶಿಬಿರ ಮತ್ತು ನಿಸರ್ಗಧಾಮ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಹಾಗೂ ಯೋಜನಾ ವರದಿಯನ್ನು ತಯಾರಿಸಲು ಮುಂದಾಗಲಾಗಿದೆ. ಹಾಗೆಯೇ ಕುಂಬೂರು ಗ್ರಾಮದ ಬಳಿ ಇರುವ ಮಕ್ಕಳ ಗುಡಿಬೆಟ್ಟ ಅಭಿವೃದ್ಧಿ ಪಡಿಸಲು ಯೋಜನಾ ವರದಿ ತಯಾರಿಸಲಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಕೊಡವ ಹೆರಿಟೇಜ್ ಕೇಂದ್ರ ಸಂಬಂಧಿಸಿದಂತೆ 3.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇನ್ನೂ ಹೊರಾಂಗಣ ಅಭಿವೃದ್ಧಿ ಆಗಬೇಕಿದೆ. ಆ ನಿಟ್ಟಿನಲ್ಲಿ ಕೊಡವ ಹೆರಿಟೇಜ್ ಹಸ್ತಾಂತರ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾಧಿಕಾರಿಗಳು ಕೆಲಸ ಪೂರ್ಣವಾದ ನಂತರ ಹಸ್ತಾಂತರ ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ಕೆಲಸ ಪೂರ್ಣಗೊಳ್ಳದೇ ಪಡೆಯುವುದು ಬೇಡ ಎಂದು ಸಲಹೆ ಮಾಡಿದರು.
ಗಾಜಿನ ಸೇತುವೆ ನಿರ್ಮಿಸಲು ಹಲವರಿಂದ ಬೇಡಿಕೆ ಬರುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಸಭೆಯ ಗಮನಕ್ಕೆ ತಂದರು. ಗಾಜಿನ ಸೇತುವೆ ನಿರ್ಮಿಸಲು ಸ್ವಂತ ಜಾಗ ಹೊಂದಿರಬೇಕು. ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಅರಣ್ಯ ಇಲಾಖೆ ಅಥವಾ ಇಕೋ ಟೂರಿಸಂ ವ್ಯಾಪ್ತಿಗೆ ಬರಬಾರದು. ಈ ಎಲ್ಲಾ ಮಾನದಂಡಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.












Click it and Unblock the Notifications