Vande Bharat Train: ಶೀಘ್ರವೇ ಹುಬ್ಬಳ್ಳಿಯಿಂದ ಹೊಸ ವಂದೇ ಭಾರತ್ ರೈಲು, ಮಾರ್ಗ ವಿವರ
ಹುಬ್ಬಳ್ಳಿ, ಸೆಪ್ಟೆಂಬರ್ 08: ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಕರ್ನಾಟಕದಲ್ಲಿ ಸದ್ಯ 6ಕ್ಕೂ ಅಧಿಕ ಈ ಮಾದರಿಯ ರೈಲುಗಳು ಸಂಚಾರ ನಡೆಸುತ್ತಿವೆ. ಬೇರೆ-ಬೇರೆ ಮಾರ್ಗದಲ್ಲಿ ರೈಲು ಓಡಿಸಬೇಕು ಎಂಬ ಬೇಡಿಕೆಯೂ ಇದೆ. ಈಗ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಕರ್ನಾಟಕದಿಂದ ಮೂರು ವಂದೇ ಭಾರತ್ ರೈಲುಗಳ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಒಂದು ರೈಲು ಹುಬ್ಬಳ್ಳಿಗೆ ಸಿಗಲಿದೆ.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ಬಿಳಿ ಬಣ್ಣದ ವಂದೇ ಭಾರತ್ ರೈಲು ಹುಬ್ಬಳ್ಳಿ ಮೂಲಕ ಸಂಚಾರ ನಡೆಸಲಿದೆ. ಆದರೆ ಈಗ ಹುಬ್ಬಳ್ಳಿಯಿಂದಲೇ ಹೊರಡುವ 8 ಬೋಗಿಯ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ. ಈ ರೈಲಿನ ತಾತ್ಕಾಲಿಕ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ಸಹ ಸಾಮಾಜಿಕ ಜಾಲತಾಣಲದಲ್ಲಿ ಹರಿದಾಡುತ್ತಿದೆ.

ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು: ಸದ್ಯದ ಮಾಹಿತಿ ಪ್ರಕಾರ ಉತ್ತರ ಕರ್ನಾಟಕದ ಹುಬ್ಬಳ್ಳಿ ಮತ್ತು ಮಹಾರಾಷ್ಟ್ರ ರಾಜ್ಯದ ಪುಣೆ ನಡುವೆ ವಂದೇ ಭಾರತ್ ರೈಲು ಶೀಘ್ರವೇ ಸಂಚಾರವನ್ನು ನಡೆಸಲಿದೆ. ರೈಲಿನ ತಾತ್ಕಾಲಿಕ ವೇಳಾಪಟ್ಟಿ, ಬೋಗಿ ಸಂಯೋಜನೆ, ನಿಲ್ದಾಣಗಳನ್ನು ಸಹ ಅಂತಿಮಗೊಳಿಸಲಾಗಿದೆ. ಪ್ರಾಯೋಗಿಕ ಸಂಚಾರವೂ ಸಹ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ.
ಕರ್ನಾಟಕಕ್ಕೆ ಮೂರು ಹೊಸ ವಂದೇ ಭಾರತ್ ರೈಲು ಮಂಜೂರು ಆಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿಕೆ ಉಲ್ಲೇಖಿಸಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿಕೆ ನೀಡಿದ್ದರು. ಇದರಲ್ಲಿ ಒಂದು ರೈಲು ಬೆಂಗಳೂರು-ಶಿವಮೊಗ್ಗ ನಡುವೆ ಸಂಚಾರ ನಡೆಸಲಿದೆ ಎಂದು ತಿಳಿಸಿದ್ದರು.
ಹುಬ್ಬಳ್ಳಿ-ಪುಣೆ ನಡುವಿನ ರೈಲು ರಾಜ್ಯದ ಮತ್ತೊಂದು ವಂದೇ ಭಾರತ್ ರೈಲು ಸೇವೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. 8 ಬೋಗಿಯ ರೈಲು 558 ಕಿ. ಮೀ. ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಕರ್ನಾಟಕದ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾದ ಹುಬ್ಬಳ್ಳಿ ಮತ್ತು ಪುಣೆಯನ್ನು ಈ ರೈಲು ಸಂಪರ್ಕಿಸಲಿದೆ.
ಸದ್ಯದ ಮಾಹಿತಿ ಪ್ರಕಾರ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ನಿಲ್ದಾಣಗಳನ್ನು ಹೊಂದಿದೆ. ಸೋಮವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಈ ರೈಲು ಸಂಚಾರವನ್ನು ನಡೆಸಲಿದೆ.
ಗಡಿನಾಡು ಬೆಳಗಾವಿಯ ಜನರು ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ಬಿಳಿ ಬಣ್ಣದ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಣೆ ಮಾಡಿ ಎಂದು ಬೇಡಿಕೆ ಇಡುತ್ತಲೇ ಇದ್ದಾರೆ. ಈ ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಸಂಚಾರ 2023ರ ನವೆಂಬರ್‌ನಲ್ಲಿಯೇ ಮುಗಿದಿದೆ. ಆದರೆ ರೈಲು ಸಂಚಾರ ಮಾತ್ರ ಇನ್ನೂ ಆರಂಭವಾಗಿಲ್ಲ.
ಆದರೆ ಹುಬ್ಬಳ್ಳಿ-ಪುಣೆ ನಡುವಿನ ರೈಲು ಬೆಳಗಾವಿಯಲ್ಲಿ ನಿಲುಗಡೆ ಹೊಂದಿದೆ. ಈ ರೈಲಿನಿಂದ ಹುಬ್ಬಳ್ಳಿ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪುಣೆಗೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ. ಪ್ರತಿದಿನ ನೂರಾರು ಜನರು ಉಭಯ ರಾಜ್ಯಗಳ ಎರಡು ಪ್ರಮುಖ ನಗರಗಳ ನಡುವೆ ಸಂಚಾರವನ್ನು ನಡೆಸಲಿದ್ದಾರೆ.












Click it and Unblock the Notifications