ಹೊಸಪೇಟೆ-ಹಂಪಿ-ಗಂಗಾವತಿ ನಡುವೆ ಹೊಸ 4 ಪಥದ ರಸ್ತೆ ನಿರ್ಮಾಣ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೊಸಪೇಟೆ, ಹಂಪಿ ಹಾಗೂ ಗಂಗಾವತಿ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ.
ಕೊಪ್ಪಳ, ಫೆಬ್ರವರಿ 14; ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿಂದುಳಿದ ಪ್ರದೇಶ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತಂತೆ ಮಹತ್ವದ ಸಭೆ ನಡೆಯಿತು. ಹೊಸಪೇಟೆ, ಹಂಪಿ ಹಾಗೂ ಗಂಗಾವತಿ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ನಾಲ್ಕು ಪಥದ ರಸ್ತೆ ನಿರ್ಮಾಣ ಸಂಬಂಧ ಕಾರ್ಯ ಸಾಧ್ಯತಾ ಅಧ್ಯಯನ, ಸಮಗ್ರ ಯೋಜನಾ ವರದಿ ತಯಾರಿಕೆ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಬಸಪ್ಪ ಆಚಾರ್, ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ತ್ರಿವೇದಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ಆರ್. ಎಸ್. ಕಡಿವಾಳ್, ಎನ್‌ಹೆಚ್ಎಐ ಯೋಜನಾ ನಿರ್ದೇಶಕ ವಿ. ಸುರೇಶ್ ರಾಜು ವಿವರವಾದ ಚರ್ಚೆ ನಡೆಸಿದರು.

ಹೊಸಪೇಟೆ, ಹಂಪಿ ಹಾಗೂ ಗಂಗಾವತಿ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ಕುರಿತಂತೆ ಕಾರ್ಯ ಸಾಧ್ಯತಾ ಅಧ್ಯಯನ ಹಾಗೂ ಸಮಗ್ರ ಯೋಜನಾ ವರದಿ ತಯಾರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಹೆಚ್ಎಐ)ಈ ಸಭೆ ಆಯೋಜನೆ ಮಾಡಿತ್ತು.
ಸಚಿವರ ಮಾತು; ಸಭೆಯಲ್ಲಿ ಮಾತನಾಡಿದ ಸಚಿವ ಹಾಲಪ್ಪ ಬಸಪ್ಪ ಆಚಾರ್, "ಹಿಂದುಳಿದ ಪ್ರದೇಶದ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೊಸಪೇಟೆ, ಹಂಪಿ ಹಾಗೂ ಗಂಗಾವತಿ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬರುವ ಅರಣ್ಯ ಇಲಾಖೆಗೆ ಸೇರಿದ ಕಾಯ್ದಿಟ್ಟ ಅರಣ್ಯ ಪ್ರದೇಶಗಳ ಬಗ್ಗೆ ಅರಣ್ಯ, ಲೋಕೋಪಯೋಗಿ ಇಲಾಖೆ ಹಾಗೂ ಎನ್‌ಹೆಚ್‌ಎಐಯಿಂದ ಪುನಃ ಸರ್ವೇ ಕಾರ್ಯ ಕೈಗೊಳ್ಳಬೇಕು. ಇದ್ದಕ್ಕಾಗಿ ಅರಣ್ಯ ಪ್ರದೇಶವನ್ನು ಆದಷ್ಟು ಕಡಿಮೆ ಬಳಕೆ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿ ಹತ್ತಿರ ಬೈಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ, "ಹೊಸಪೇಟೆ, ಹಂಪಿಯಿಂದ ಗಂಗಾವತಿ ವರೆಗೆ ಸಂಪರ್ಕ ಕಲ್ಪಿಸುವ ಈ ಹೊಸ ರಸ್ತೆ ನಿರ್ಮಾಣದಿಂದ ಈ ಭಾಗದ ಸಾರ್ವಜನಿಕರಿಗೆ, ಪ್ರವಾಸಿಗಳಿಗೆ ಹಾಗೂ ವಿಶೇಷವಾಗಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿರುವ ಭಕ್ತಾಧಿಗಳಿಗೆ ತುಂಬಾ ಅನುಕೂಲವಾಗಲಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೈಜೋಡಿಸಿದ್ದು, ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಬೇಕು" ಎಂದರು.
ಅಂಜನಾದ್ರಿ ಬೆಟ್ಟದ ಮಾರ್ಗವಾಗಿ ರಸ್ತೆ; ಹೊಸಪೇಟೆ-ಹಂಪಿ-ಗಂಗಾವತಿ ಚತುಷ್ಪಥ ರಸ್ತೆಯನ್ನು ಹೊಸಪೇಟೆ-ಹಂಪಿಯಿಂದ ಹಿಟ್ನಾಳ್ ಕ್ರಾಸ್ ಮೂಲಕ ಅಂಜನಾದ್ರಿ ಬೆಟ್ಟ, ಗಂಗಾವತಿಯವರೆಗೆ ನಿರ್ಮಾಣ ಮಾಡುವ ಬಗ್ಗೆ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತದಿಂದ ಪ್ರಸ್ತಾಪಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನಾಲ್ಕು ಪಥದ ರಸ್ತೆ ನಿರ್ಮಾಣಗೊಂಡರೆ ಪ್ರವಾಸಿಗರು ಕೊಪ್ಪಳ ಮೂಲಕ ನೇರವಾಗಿ ಯುನೆಸ್ಕೋ ಮಾನ್ಯತೆ ಪಡೆದ ವಿಶ್ವಪರಂಪರೆ ತಾಣ ಹಂಪಿಗೆ ಸಂಚಾರ ನಡೆಸಬಹುದಾಗಿದೆ.
ಹೊಸ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯ; ಗಂಗಾವತಿ-ಹಂಪಿ, ಹೊಸಪೇಟೆ-ಹಂಪಿ ರಸ್ತೆಗಳು ಹಳ್ಳಿ ರಸ್ತೆಗಳಾಗಿ ಉಳಿದಿವೆ. ಹಂಪಿಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು, ಇಲ್ಲವೇ ಹೊಸ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು.
ಕೊಪ್ಪಳ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಸರ್ಕಾರಕ್ಕೆ ಈ ಕುರಿತು ಪತ್ರವನ್ನು ಬರೆದಿದ್ದರು. ಹೈದರಾಬಾರ್-ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಕಲಬುರಗಿ ಸಹ ಈ ಪತ್ರವನ್ನು ಬೆಂಬಲಿಸಿ ವಿವಿಧ ಸಚಿವರಿಗೆ ಪತ್ರ ಬರೆದಿತ್ತು.











Click it and Unblock the Notifications