ದಸರಾ ರಜೆ: ಕರ್ನಾಟಕದ ಕರಾವಳಿಗೆ ವಿಶೇಷ ರೈಲು ಸಂಚಾರ
ಬೆಂಗಳೂರು, ಸೆಪ್ಟೆಂಬರ್ 28: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೆಚ್ಚುವರಿ ರೈಲುಗಳು ಬೇಕು ಎಂಬ ಬೇಡಿಕೆ ಇದ್ದೇ ಇದೆ. ಸಾಲು ಸಾಲು ರಜೆ ಸಂದರ್ಭದಲ್ಲಿ ಬಸ್ ಪ್ರಯಾಣ ದುಬಾರಿ, ರೈಲುಗಳಲ್ಲಿ ಸೀಟುಗಳು ಸಿಗುವುದಿಲ್ಲ ಎಂಬ ಆರೋಪವಿದೆ. ಆದ್ದರಿಂದ ವಿಶೇಷ ರೈಲುಗಳನ್ನು ಓಡಿಸಿ ಎಂದು ಮನವಿ ಮಾಡಲಾಗುತ್ತದೆ. ಈಗ ದಸರಾ ರಜೆ ಸಂದರ್ಭದಲ್ಲಿಯೂ ಮತ್ತೆ ಇದೇ ಬೇಡಿಕೆಯನ್ನು ಮುಂದಿಡಲಾಗಿದೆ.
ಅಕ್ಟೋಬರ್ 11, 12 ಮತ್ತು 13 ಮೂರು ದಿನಗಳ ರಜೆ ಇದೆ. ಅಕ್ಟೋಬರ್ 12ರ ಶನಿವಾರ ವಿಜಯದಶಮಿ ರಜೆ ಇದೆ. ಆದ್ದರಿಂದ ನವರಾತ್ರಿ ಮತ್ತು ವಿಜಯದಶಮಿ ಹಿನ್ನಲೆಯಲ್ಲಿ ಸಾವಿರಾರು ಜನರು ಬೆಂಗಳೂರು ನಗರದಿಂದ ಕರಾವಳಿ ಭಾಗಕ್ಕೆ ಸಂಚಾರವನ್ನು ನಡೆಸುತ್ತಾರೆ. ಆದ್ದರಿಂದ ಬಸ್, ರೈಲುಗಳು ಭರ್ತಿಯಾಗುತ್ತವೆ.

ವಿಶೇಷ ರೈಲುಗಳ ಸಂಚಾರ: ನವರಾತ್ರಿ ಮತ್ತು ವಿಜಯದಶಮಿಗೆ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗಾಗಿ ವಿಶೇಷ ರೈಲು ಓಡಿಸಲಾಗುತ್ತದೆ. ನೈಋತ್ಯ ರೈಲ್ವೆಗೆ ಈಗಾಗಲೇ ಈ ಕುರಿತು ಸೂಚನೆ ನೀಡಲಾಗಿದೆ. ರೈಲುಗಳ ವೇಳಾಪಟ್ಟಿ, ನಿಲ್ದಾಣಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. 'ನವರಾತ್ರಿ ಮತ್ತು ವಿಜಯದಶಮಿಯ ಸಂಭ್ರಮಕ್ಕೆ ಬೆಂಗಳೂರಿನಿಂದ ಊರಿಗೆ ಬರುವ ಪ್ರಯಾಣಿಕರಿಗೆ ಟಿಕೇಟು ಸಿಗದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯ ಮನವಿಯಂತೆ ನೈರುತ್ಯ ರೈಲ್ವೆಗೆ ನವಮಿ ಹಾಗೂ ವಿಜಯ ದಶಮಿಗೆ ವಿಶೇಷ ರೈಲು ಓಡಿಸುವಂತೆ ಸೂಚಿಸಲಾಗಿದೆ' ಎಂದು ಹೇಳಿದ್ದಾರೆ.
'ಈಗಾಗಲೇ ಬಸ್ ಹಾಗು ರೈಲುಗಳ ಟಿಕೇಟ್ ಖಾಲಿಯಾಗಿದ್ದು,ಕಡೇ ಕ್ಷಣದಲ್ಲಿ ಪ್ರಯಾಣ ಮಾಡಬೇಕಿರುವ ಸಾವಿರಾರು ಜನ ಉಡುಪಿ, ಕುಂದಾಪುರ, ಕಾರವಾರ ಭಾಗದ ಜನರಿಗೆ ಈ ವಿಶೇಷ ರೈಲು ಅನುಕೂಲವಾಗಲಿದೆ ತಿಳಿಸಿದ್ದು, ಈ ಬಗ್ಗೆ ಶೀಘ್ರ ಪ್ರಕಟಣೆಗೆ ಇಲಾಖೆಗೆ ಮನವಿ ಮಾಡಿದ್ದೇನೆ' ಎಂದು ಸಂಸದರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳು. ಬೆಂಗಳೂರು-ಮಂಗಳೂರು ನಡುವೆ ಹಲವು ರೈಲುಗಳಿವೆ. ಆದರೆ ಈ ರೈಲುಗಳಲ್ಲಿ ಕೇರಳ ರಾಜ್ಯದ ವಿವಿಧ ನಗರಗಳಿಗೆ ಸಂಚಾರ ನಡೆಸುವ ಜನರು ಸಹ ಹೆಚ್ಚಾಗಿ ಪ್ರಯಾಣಿಸುತ್ತಾರೆ. ಆದ್ದರಿಂದ ಸಾಲು ಸಾಲು ರಜೆ ಸಂದರ್ಭದಲ್ಲಿ ಟಿಕೆಟ್ ಸಿಗುವುದು ಕಷ್ಟ.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ ಸೇರಿದಂತೆ ವಿವಿಧ ಕಡೆ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯೂ ಸಹ ಹೆಚ್ಚಿದೆ. ರಜೆಗಳ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ದುಪ್ಪಟ್ಟು ದರಗಳನ್ನು ವಿಧಿಸುತ್ತವೆ. ಸರ್ಕಾರಿ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಅಲ್ಲದೇ ಮಹಿಳೆಯರು, ಮಕ್ಕಳು, ವೃದ್ಧರು ರೈಲು ಪ್ರಯಾಣವನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಆದರೆ ರೈಲುಗಳಲ್ಲಿ ಸೀಟುಗಳು ಸಿಗುವುದಿಲ್ಲ.
ಬೆಂಗಳೂರು ಮತ್ತು ಕರಾವಳಿ ನಡುವೆ ಈಗಿರುವ ರೈಲುಗಳ ಜೊತೆ ಹೆಚ್ಚುವರಿ ರೈಲುಗಳು ಬೇಕು ಎಂದು ಪದೇ ಪದೇ ಬೇಡಿಕೆ ಇಡಲಾಗುತ್ತಿದೆ. ಈಗ ನವರಾತ್ರಿ ಹಬ್ಬದ ರಜೆ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಒಂದು ಟ್ರಿಪ್ ಸಂಚಾರ ನಡೆಸುವ ರೈಲುಗಳನ್ನು ಬೆಂಗಳೂರು ಮತ್ತು ಕರಾವಳಿ ನಡುವೆ ಓಡಿಸುತ್ತದೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲವನ್ನು ಮಾಡಿಕೊಡಲಿದೆ.












Click it and Unblock the Notifications