ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರ ಗಮನಕ್ಕೆ
ಮೈಸೂರು, ಫೆಬ್ರವರಿ 26; ಮೈಸೂರು-ಚಾಮರಾಜನಗರ ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಹಲವು ರೈಲುಗಳು ಓಡುತ್ತವೆ. ಆದರೆ ಉಭಯ ನಗರಗಳ ನಡುವೆ ಎಲೆಕ್ಟ್ರಿಕ್ ರೈಲು ಏಕೆ ಸಂಚಾರ ನಡೆಸುವುದಿಲ್ಲ?. ಇದಕ್ಕೆ ಈಗ ಉತ್ತರ ಸಿಕ್ಕಿದೆ.
ಚಾಮರಾಜನಗರ- ಮೈಸೂರು ನಡುವಿನ ಸುಮಾರು 60 ಕಿ. ಮೀ. ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದೆ. ಆದರೆ ಎಲೆಕ್ಟ್ರಿಕ್ ರೈಲುಗಳ ಸಂಚಾರವಿಲ್ಲ. ಇದಕ್ಕೆ ಮೈಸೂರು-ನಂಜನಗೂಡು ನಡುವಿನ 1 ಕಿ. ಮೀ. ಮಾರ್ಗ ಕಾರಣ ಎಂದರೆ ಅಚ್ಚರಿ ಆಗಬಹುದು.

ಮೈಸೂರು-ನಂಜನಗೂಡು ನಡುವೆ ಮೈಸೂರು ವಿಮಾನ ನಿಲ್ದಾಣದ ಸಮೀಪ 1 ಕಿ. ಮೀ. ರೈಲು ಮಾರ್ಗ ಇನ್ನೂ ಸಹ ವಿದ್ಯುದೀಕರಣಗೊಂಡಿಲ್ಲ. ಈ ಕಾಮಗಾರಿಗೆ ರೈಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಜಟಾಪಟಿ ನಡೆಯುತ್ತಿದೆ.
ವಿಮಾನ ನಿಲ್ದಾಣದ ಸಮೀಪ ರೈಲು ಮಾರ್ಗ ವಿದ್ಯುದೀಕರಣ ಮಾಡಿದರೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪ್ರಭಾವದಿಂದ ವಿಮಾನಗಳ ದಿಕ್ಸೂಚಿಗಳ ಮೇಲೆ ಪ್ರಭಾವ ಬೀರಬಹುದು ಎಂಬುದು ಅಂದಾಜಿಸಲಾಗಿದೆ. ಆದ್ದರಿಂದ 1 ಕಿ. ಮೀ. ಮಾರ್ಗದಲ್ಲಿ ವಿದ್ಯುದೀಕರಣ ಮಾಡಲು ಒಪ್ಪಿಗೆ ಸಿಗುತ್ತಿಲ್ಲ.
ಸಮಸ್ಯೆಗೆ ಪರಿಹಾರವೇನು?; ಮೈಸೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಶಿಲ್ಪಿ ಅಗರ್‌ವಾಲ್ ಈ ಕುರಿತು ಮಾತನಾಡಿದ್ದಾರೆ. 1 ಕಿ. ಮೀ. ರೈಲು ಮಾರ್ಗದ ವಿನ್ಯಾಸ ಬದಲಾವಣೆ ಮಾಡಿ ವಿದ್ಯುದೀಕರಣಕ್ಕೆ ಅವಕಾಶ ಮಾಡಿಕೊಡುವ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಒಂದು ಕಿ. ಮೀ. ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡರೆ ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕ್ ರೈಲುಗಳ ಸಂಚಾರ ಆರಂಭವಾಗಲಿದೆ. ಆಗ ಹೆಚ್ಚಿನ ಬೋಗಿಗಳು ಇರುವ ರೈಲು ಓಡಲಿದ್ದು, ಹೆಚ್ಚು ಪ್ರಯಾಣಿಕರು ಸಂಚಾರ ನಡೆಸಲು ಅನುಕೂಲವಾಗಲಿದೆ.
ಮೈಸೂರು ಹೊರವಲಯದ ಮಂಡಕಳ್ಳಿಯಲ್ಲಿ ಮೈಸೂರು ವಿಮಾನ ನಿಲ್ದಾಣವಿದೆ. ಮೈಸೂರು-ನಂಜನಗೂಡು ಮಾರ್ಗದಲ್ಲಿ ಇದು ಇದ್ದು, ಇದರ ಸಮೀಪವೇ ಮೈಸೂರು-ಚಾಮರಾನಗರ ರೈಲು ಮಾರ್ಗ ಹಾದು ಹೋಗಿದೆ. ಉಭಯ ನಗರಗಳ ನಡುವಿನ ರೈಲು ಮಾರ್ಗದಲ್ಲಿ ಈ 1 ಕಿ. ಮೀ. ಮಾತ್ರ ಇನ್ನೂ ವಿದ್ಯುದೀಕರಣಗೊಂಡಿಲ್ಲ.
2021ರಲ್ಲಿ ಮೈಸೂರು-ಚಾಮರಾಜನಗರ ನಡುವಿನ ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡುವ ಯೋಜನೆ ಆರಂಭವಾಗಿತ್ತು. 20 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಟೆಂಡರ್ ಅನ್ನು ಗುರು ಇನ್‌ಫ್ರಾಟೆಕ್ ಪ್ರೈ. ಲಿ. ಸಂಸ್ಥೆ ಪಡೆದುಕೊಂಡಿತ್ತು.
ಉಭಯ ನಗರಗಳ ನಡುವಿನ ರೈಲು ಮಾರ್ಗ ವಿದ್ಯುದೀಕರಣಕ್ಕೆ 12 ತಿಂಗಳ ಗಡುವು ನೀಡಲಾಗಿತ್ತು. ಆದರೆ ಅಷ್ಟು ಸಮಯ ಬೇಡ. ಮಳೆಗಾಲದಲ್ಲಿ ಕಾಮಗಾರಿ ವಿಳಂಬವಾಗಬಹುದು ಎಂದು ಹೆಚ್ಚಿನ ಸಮಯ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
2024ರ ಅಂತ್ಯದ ವೇಳೆಗೆ ದೇಶದ ಎಲ್ಲಾ ರೈಲು ಮಾರ್ಗಗಳನ್ನು ವಿದ್ಯುದೀಕರಣ ಮಾಡುವ ಗುರಿಯ ಅಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಒಳಪಡುವ ಮೈಸೂರು-ಚಾಮರಾಜನಗರ ರೈಲು ಮಾರ್ಗದ ವಿದ್ಯುದೀಕರಣ ಸಹ ಕೈಗೊಳ್ಳಲಾಗಿತ್ತು.
ನಂಜನಗೂಡಿನಲ್ಲಿ ಕಪಿಲಾ ನದಿಯ ಸೇತುವೆಯಲ್ಲಿ ವಿದ್ಯುತ್ ಮಾರ್ಗ ಅಳವಡಿಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಹೆಚ್ಚುವರಿ ಸಮಯ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಈಗ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಸುಮಾರು 1 ಕಿ. ಮೀ. ಮಾರ್ಗದ ಕಾಮಗಾರಿ ಬಾಕಿ ಇದೆ.
ಈಗ ಅಡ್ಡಿಯಾಗಿರುವ 1 ಕಿ. ಮೀ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಮೈಸೂರು-ಚಾಮರಾಜನಗರ ನಡುವೆ ಮೆಮು ರೈಲುಗಳನ್ನು ಓಡಿಸಲು ಅನುಕೂಲವಾಗಲಿದೆ. ಆಗ ರೈಲುಗಳ ವೇಗ ಹೆಚ್ಚುವುದಲ್ಲದೇ ಪ್ರತಿ ದಿನ ಸಂಚಾರ ನಡೆಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.












Click it and Unblock the Notifications