ಕರಾವಳಿ-ತಿರುಪತಿ ರೈಲು: ಶನಿವಾರದಿಂದ ಆರಂಭ, ವೇಳಾಪಟ್ಟಿ, ನಿಲ್ದಾಣ, ದರ
ಉಡುಪಿ, ಅಕ್ಟೋಬರ್ 12: ಕರ್ನಾಟಕ ಕರಾವಳಿ ಭಾಗದ ಭಕ್ತರು ತಿರುಪತಿಗೆ ಭೇಟಿ ನೀಡಲು ಅನುಕೂಲವಾಗುವಂತೆ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಭಾರತೀಯ ರೈಲ್ವೆ ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ರೈಲು ಸಂಚಾರಕ್ಕೆ ವಿಜಯದಶಮಿ ಶನಿವಾರ ಚಾಲನೆ ಸಿಗಲಿದೆ. ರೈಲುಗಳ ವೇಳಾಪಟ್ಟಿ, ದರ, ನಿಲ್ದಾಣಗಳ ಮಾಹಿತಿ ಇಲ್ಲಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದ್ದು, 'ದೈವ ದೇವರುಗಳ ಪುಣ್ಯ ಭೂಮಿ ಕರಾವಳಿ ಮೊದಲ ಬಾರಿಗೆ ವಿಜಯದಶಮಿಯ ಪಾವನ ಸಂದರ್ಭದಲ್ಲಿ ತಿರುಪತಿ ಜತೆ ರೈಲು ಸಂಪರ್ಕ ಹೊಂದಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರ ವಿಶೇಷ ಮುತುವರ್ಜಿಯಿಂದ ಇದು ಸಾಧ್ಯವಾಗಿದ್ದು ,ಇದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲು ನಂಬರ್ 12789/ 12790 ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲುನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ರೈಲು ಸೇವೆಗೆ ಶನಿವಾರ ಚಾಲನೆ ಸಿಗಲಿದ್ದು, ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ಭಕ್ತರು ಈ ರೈಲನ್ನು ಬಳಸಬಹುದು.
ನಿಲ್ದಾಣ, ದರದ ಮಾಹಿತಿ: ಭಾರತೀಯ ರೈಲ್ವೆಯ ಮಾಹಿತಿಯಂತೆ ರೈಲು ಮುರುಡೇಶ್ವರದಿಂದ ಬುಧವಾರ, ಶನಿವಾರ ಮತ್ತು ತಿರುಪತಿಯಿಂದ ಮಂಗಳವಾರ, ಶುಕ್ರವಾರ ಸಂಚಾರವನ್ನು ನಡೆಸಲಿದೆ. ಅಕ್ಟೋಬರ್ 12ರ ಶನಿವಾರ ಮಧ್ಯಾಹ್ನ 3.20ಕ್ಕೆ ಮುರುಡೇಶ್ವರದಿಂದ ಹೊರಡುವ ರೈಲು 3.54 ಬೈಂದೂರು, 4.40 ಕುಂದಾಪುರ, 5 ಗಂಟೆ ಬಾರ್ಕೂರು, 5.20 ಉಡುಪಿ, 7.55 ಮಂಗಳೂರು ತಲುಪಲಿದೆ. ಮಂಗಳೂರಿನಿಂದ 8.05ಕ್ಕೆ ಹೊರಟು ರವಿವಾರ ಬೆಳಗ್ಗೆ 11.30ಕ್ಕೆ ರೇಣಿಗುಂಟ (ತಿರುಪತಿ), ಸಂಜೆ 6 ಗಂಟೆಗೆ ಕಾಚಿಗುಡ (ಹೈದರಾಬಾದ್) ತಲುಪಲಿದೆ.
ತಿರುಪತಿಗೆ ಹೋಗುವ ಭಕ್ತರು ಕುಂದಾಪುರದಿಂದ ರೈಲು ಹತ್ತಿದರೆ ಮರುದಿನ ಬೆಳಗ್ಗೆ 11.30ರ ವೇಳೆಗೆ ರೇಣಿಗುಂಟ ತಲುಪಬಹುದು. ರೇಣಿಗುಂಟ ತಿರುಪತಿ ನಡುವಿನ ದೂರ 9 ಕಿ. ಮೀ. ತಿರುಪತಿಯಲ್ಲಿ ಸಂಜೆ ಅಥವ ಮರುದಿನ ಬೆಳಗ್ಗೆ ದರ್ಶನ ಮುಗಿಸಿಕೊಳ್ಳಬಹುದು. ಮರು ದಿನ ಸಂಜೆ 4.45ಕ್ಕೆ ಇದೇ ರೈಲು ರೇಣುಗುಂಟಗೆ ಆಗಮಿಸಲಿದ್ದು, ಅಲ್ಲಿಂದ ಉಡುಪಿ ಕಡೆ ಸಂಚಾರವನ್ನು ನಡೆಸಲಿದೆ.
ಕುಂದಾಪುರ-ತಿರುಪತಿ ಸ್ಲೀಪರ್ ಕೋಚ್ ದರ 510 ರೂ.ಗಳು, ಎಸಿ ಕೋಚ್ ದರ 1,110 ರೂ.ಗಳು. ಮಂತ್ರಾಲಯಕ್ಕೆ ಹೋಗುವ ಭಕ್ತರು ಸಹ ಈ ರೈಲಿನಿಂದ ಸಂಪರ್ಕವನ್ನು ಪಡೆದು ಸಂಚಾರವನ್ನು ನಡೆಸಬಹುದು ಎಂದು ರೈಲ್ವೆ ಇಲಾಖೆ ಹೇಳಿದೆ. ಶನಿವಾರ ಸಂಜೆ ಕುಂದಾಪುರ ರೈಲು ನಿಲ್ದಾಣದಲ್ಲಿ ಈ ರೈಲನ್ನು ಸ್ವಾಗತಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕರ್ನಾಟಕ ಕರಾವಳಿ ಮತ್ತು ತಿರುಪತಿ ಸಂಪರ್ಕಿಸುವ ರೈಲು ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿತ್ತು. 2024ರ ಲೋಕಸಭೆ ಚುನಾವಣೆ ಬಳಿಕ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದಿದ್ದರು. ಈ ಬೇಡಿಕೆಗೆ ರೈಲು ಸಚಿವರು ಒಪ್ಪಿಗೆ ನೀಡಿದ್ದರು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿರುವ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಪತ್ರವನ್ನು ಬರೆದಿದ್ದರು. ರೈಲು ನಂಬರ್ 12789/ 12790 ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದರು. ಶನಿವಾರದಿಂದ ಈ ರೈಲು ಸಂಚಾರ ಆರಂಭವಾಗುತ್ತಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ರೈಲು ಸೇವೆ ಬಗ್ಗೆ ಪೋಸ್ಟ್ ಹಾಕಿದ್ದು, 'ತಿರುಪತಿ ಮಾತ್ರವಲ್ಲದೆ ದಕ್ಷಿಣ ಭಾರತದ ಬಹುತೇಕ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಈ ರೈಲು ಬೆಸೆಯಲಿದೆ. ಮುರುಡೇಶ್ವರದಿಂದ ಆರಂಭವಾಗಿ, ಕೊಲ್ಲೂರು, ಕುಂದಾಪುರದ ದೇಗುಲಗಳು, ಉಡುಪಿ ಶ್ರೀ ಕೃಷ್ಣ ಮಠ ಸಹಿತ ದೇವಸ್ಥಾನಗಳು, ಮೂಲ್ಕಿ-ಮಂಗಳೂರಿನ ಕಟೀಲು, ಪೊಳಲಿ, ಧರ್ಮಸ್ಥಳ, ಕದ್ರಿ, ಸುಬ್ರಹ್ಮಣ್ಯ ನಂತರ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪ್ರಸಿದ್ಧ ಆದಿಯೋಗಿ ಕ್ಷೇತ್ರ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳನ್ನು ದಾಟುತ್ತಾ ತಿರುಪತಿ ಮುಟ್ಟಲಿದೆ' ಎಂದು ಹೇಳಿದ್ದಾರೆ.












Click it and Unblock the Notifications