Chardham Yatra 2024: ಚಾರ್‌ಧಾಮ್ ಯಾತ್ರೆಗೆ ನೋಂದಣಿ ಹೆಚ್ಚಳ: ಒಂದೇ ದಿನದಲ್ಲಿ ಲಕ್ಷಾಂತರ ಭಕ್ತರ ರಿಜಿಸ್ಟ್ರೇಷನ್
ಉತ್ತರಖಂಡದ ಚಾರ್‌ಧಾಮ್ ಯಾತ್ರೆಗಾಗಿ ನೋಂದಣಿ ಆರಂಭವಾಗಿದ್ದು ಮೊದಲ ದಿನವೇ 2 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ.
ಚಾರ್‌ಧಾಮ್ ದೇಶದಲ್ಲೇ ತುಂಬಾ ಪ್ರಸಿದ್ಧವಾದ ಯಾತ್ರೆಯಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿದರೆ ಮೋಕ್ಷ ಪಡೆಯುತ್ತಾರೆನ್ನುವ ನಂಬಿಕೆ ಇದೆ. ಹೀಗಾಗಿ ಜನ ಉತ್ತರಖಂಡದಲ್ಲಿ ಇರುವ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಲು ಬಯಸುತ್ತಾರೆ.

ಈ ಬಾರಿ ಕೇದಾರನಾಥ ದೇವಸ್ಥಾನದ ಬಾಗಿಲು ಮೇ10ರಂದು ತೆರೆಯಲಿದ್ದು, ಈ ದಿನದಿಂದ ಭಕ್ತಾಧಿಗಳಿಗೆ ಕೇದಾರನಾಥನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿಗೆ ಭೇಟಿ ನೀಡಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೀಗಾಗಿ ಭಕ್ತರಿಗಾಗಿ ಸೋಮವಾರ (ಏಪ್ರಿಲ್ 15) ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಆರಂಭವಾದ ಮೊದಲ ದಿನವೇ ಚಾರ್ಧಾಮ್ ಯಾತ್ರೆಗಾಗಿ 2 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ.
ಮೇ 12 ರಂದು ಬದರಿನಾಥ ಧಾಮ ಮತ್ತು ಮೇ 25 ರಂದು ಹೇಮಕುಂಡ್ ಸಾಹಿಬ್‌ನ ದೇವಸ್ಥಾನಗಳ ಬಾಗಿಲುಗಳು ಸಹ ತೆರೆಯಲಿವೆ. ಎಲ್ಲಾ ಧಾಮಗಳ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಿದ ನಂತರ, ಪ್ರವಾಸೋದ್ಯಮ ಇಲಾಖೆ ಸೋಮವಾರದಿಂದ ಚಾರ್ ಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿಯನ್ನು ಪ್ರಾರಂಭಿಸಿದೆ. ಚಾರ್ ಧಾಮ್ ಯಾತ್ರಾ ಆಡಳಿತ ಸಂಸ್ಥೆ ಹೊರಡಿಸಿದ ನೋಂದಣಿ ಬುಲೆಟಿನ್ ಪ್ರಕಾರ, ಒಟ್ಟು 2,01,851 ನೋಂದಣಿಗಳು ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮಾಡಲಾಗಿದೆ.

ಕೇದಾರನಾಥಕ್ಕೆ ಹೆಲಿ ಸೇವೆಯ ಬುಕ್ಕಿಂಗ್ ಆರಂಭ:
ಚಾರ್ ಧಾಮ್ ಗೆ ಮೊದಲ ದಿನವೇ ಎರಡು ಲಕ್ಷಕ್ಕೂ ಹೆಚ್ಚು ನೋಂದಣಿಯಾಗಿದೆ. ಕೇದಾರನಾಥ ಧಾಮಕ್ಕೆ 69 ಸಾವಿರ ನೋಂದಣಿಯಾಗಿದೆ. ಇದಲ್ಲದೇ ಈ ಬಾರಿ ಚಾರ್‌ಧಾಮ್ ಹಾಗೂ ಹೇಮಕುಂಡ್ ಸಾಹಿಬ್‌ಗೆ ನೋಂದಣಿ ಆರಂಭಿಸಲಾಗಿದೆ. ಕೇದಾರನಾಥಕ್ಕೆ ಹೆಲಿ ಸೇವೆಯ ಬುಕ್ಕಿಂಗ್ ಕೂಡ ಏಪ್ರಿಲ್ 18ರಿಂದ ಪ್ರಾರಂಭವಾಗಲಿದೆ.
ಈ ವರ್ಷ ಚಾರ್ ಧಾಮ್ ಯಾತ್ರೆಯು ಮೇ 10 ರಂದು ಗಂಗೋತ್ರಿ-ಯಮುನೋತ್ರಿ ಮತ್ತು ಕೇದಾರನಾಥ ಧಾಮದ ಬಾಗಿಲು ತೆರೆಯುವುದರೊಂದಿಗೆ ಪ್ರಾರಂಭವಾಗುತ್ತದೆ. ಇದರ ನಂತರ, ಮೇ 12 ರಂದು ಬದರಿನಾಥ ಧಾಮ ಮತ್ತು ಮೇ 25 ರಂದು ಹೇಮಕುಂಡ್ ಸಾಹಿಬ್‌ನ ಬಾಗಿಲುಗಳು ಸಹ ಭಕ್ತರಿಗೆ ತೆರೆಯಲ್ಪಡುತ್ತವೆ.
4 ಯಾತ್ರಾ ಸ್ಥಳಗಳ ನೋಂದಣಿ ವಿವರ:
ಕೇದಾರನಾಥ ಧಾಮಕ್ಕೆ 69,543 ನೋಂದಣಿಗಳನ್ನು ಮಾಡಲಾಗಿದೆ. ಬದರಿನಾಥ ಧಾಮಕ್ಕೆ 58,685, ಯಮುನೋತ್ರಿಗೆ 35,356, ಗಂಗೋತ್ರಿಗೆ 36,111 ಮತ್ತು ಹೇಮಕುಂಡ್ ಸಾಹಿಬ್‌ಗೆ 2,156 ಜನರು ನೋಂದಾಯಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ 450 ಭಕ್ತರು ಆದಿ ಕೈಲಾಸ ಮತ್ತು ಓಂ ಪರ್ವತಕ್ಕಾಗಿ ಬುಕ್ಕಿಂಗ್ ಮಾಡಿದ್ದಾರೆ.
ಭಕ್ತರಿಗೆ ಆನ್‌ಲೈನ್ ಪೂಜೆ ಬುಕ್ಕಿಂಗ್ ಆರಂಭ:
ಅಷ್ಟೇ ಅಲ್ಲದೆ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಆನ್‌ಲೈನ್ ಪೂಜೆ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಯಾತ್ರೆಗೆ ತೆರಳು ಆಗದ ಭಕ್ತರು ಇದನ್ನು ಬುಕ್ ಮಾಡಿಕೊಳ್ಳಬಹುದು. ಜೊತೆಗೆ ನೀವುರುವ ಸ್ಥಳದಲೇ ಕುಳಿತು ಚಾರ್‌ಧಾಮ್ ಪೂಜೆಯನ್ನು ವೀಕ್ಷಿಸಬಹುದು. ಜೂನ್ 30 ರವರೆಗೆ BKTC ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಪೂಜೆಯನ್ನು ಬುಕ್ ಮಾಡಬಹುದು.












Click it and Unblock the Notifications