ಮದುವೆ ತಡವಾಗಿದ್ದರೆ ಕಾಣಿರಿ ನಿತ್ಯ ಕಲ್ಯಾಣ ಪೆರುಮಾಳ್

Posted By:
Subscribe to Oneindia Kannada

ತಮಿಳುನಾಡಿನ ಕಾಂಚೀಪುರಂನಲ್ಲಿರುವ ನಿತ್ಯ ಕಲ್ಯಾಣ ಪೆರುಮಾಳ್ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಪೆರುಮಾಳ್ ಅಂದರೆ ವಿಷ್ಣು. ಜತೆಗೆ ಲಕ್ಷ್ಮಿ ವರಾಹ ಸನ್ನಿಧಿಯೂ ಇದೆ. ಮದುವೆ ತಡವಾಗುತ್ತಿರುವ ಯುವತಿಯರು ಈ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಶೀಘ್ರ ವಿವಾಹ ನಿಶ್ಚಯವಾಗುತ್ತದೆ ಎಂಬುದು ಪ್ರಚಲಿತದಲ್ಲಿರುವ ನಂಬಿಕೆ.

ಅಂದಹಾಗೆ, ದೇವರಿಗೆ ವಿಶೇಷ ದಿನಗಳಲ್ಲಿ ಕಲ್ಯಾಣೋತ್ಸವ ಮಾಡಿಸುವುದನ್ನು ನೀವು ಕೇಳಿರುತ್ತೀರಿ. ಆದರೆ ಈ ದೇವಸ್ಥಾನದಲ್ಲಿ ವರ್ಷದ ಎಲ್ಲ ದಿನವೂ ಕಲ್ಯಾಣೋತ್ಸವ ನಡೆಯುತ್ತದೆ. ತಿರುಮಂಗೈ ಆಳ್ವಾರ್ ಎಂಬುವರು ಈ ದೇವರ ಸ್ತುತಿಯನ್ನು ಅದ್ಭುತವಾಗಿ ಮಾಡಿದ್ದಾರೆ. ತಮಿಳು ಸಾಹಿತ್ಯದಲ್ಲೇ ಸೊಗಸಾದ ಸ್ತುತಿಗಳಿವು ಎಂಬ ಮನ್ನಣೆ ಕೂಡ ಪಡೆದಿವೆ.[ಅಷ್ಟಮಂಗಲ ಪ್ರಶ್ನೆ: ಅಲ್ಲೊಂದು ಶತಮಾನಗಳ ಹಿಂದಿನ ದೇವಸ್ಥಾನವಿತ್ತು]

Temple

ಕೋವಲಂಗೆ ಹತ್ತಿರದಲ್ಲಿರುವ ಈ ದೇವಾಲಯ ಕಾಂಚೀಪುರಂ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ 360 ಕಿ.ಮೀ ದೂರದಲ್ಲಿರುವ ಇಲ್ಲಿಗೆ ಕಾರಿನಲ್ಲಿ ಹೋಗುವುದಾದರೆ ಆರೇಳು ಗಂಟೆಗಳ ಪ್ರಯಾಣ. ಫೋ-044-27472235, 9840599310, 9840936927. ದೇವಾಲಯದ ಸಮಯ- ಬೆಳಗ್ಗೆ 6ರಿಂದ ಮಧ್ಯಾಹ್ನ 12. ಮಧ್ಯಾಹ್ನ 3ರಿಂದ ರಾತ್ರಿ 8.

ಇತಿಹಾಸ: ತ್ರೇತಾಯುಗದಲ್ಲಿ ಮೇಘನಾಥನ ಮಗನಾದ ಬಲಿಯು ಆಳ್ವಿಕೆ ಮಾಡುತ್ತಿರುತ್ತಾನೆ. ಆಗ ದೇವತೆಗಳೊಂದಿಗೆ ಯುದ್ಧ ಸಾರುವ ರಾಕ್ಷಸರು ಅತನ ಸಹಾಯ ಕೇಳುತ್ತಾರೆ. ಬಲಿ ತನ್ನಿಂದ ಸಾಧ್ಯವಿಲ್ಲ ಎನ್ನುತ್ತಾನೆ. ಆ ಯುದ್ಧದಲ್ಲಿ ರಾಕ್ಷಸರಿಗೆ ಸೋಲಾಗುತ್ತದೆ. ಮತ್ತೆ ಬಲಿಯ ಬಳಿ ಸಹಾಯ ಕೇಳಿ ಬರುತ್ತಾರೆ.

ಈ ಬಾರಿ ಇಲ್ಲವೆನ್ನಲಾಗದೆ ಬಲಿ ಯುದ್ಧ ಮಾಡಿ ದೇವತೆಗಳನ್ನು ಸೋಲಿಸುತ್ತಾನೆ. ದೇವತೆಗಳನ್ನು ಕೊಂದ ಪಾಪ ಅವನಿಗೆ ತಗುಲುತ್ತದೆ. ಆತ ಈ ಸ್ಥಳಕ್ಕೆ ಬಂದು ಪೂಜೆ ಮಾಡಿದಾಗ ವಿಷ್ಣು ದಯೆಯಿಂದ ದೋಷ ನಿವಾರಣೆಯಾಗುತ್ತದೆ. ಬಲಿಗೆ ವಿಷ್ಣುವು ವರಾಹ ರೂಪದಲ್ಲಿ ದರ್ಶನ ನೀಡುತ್ತಾನೆ.[ನಾಗದೋಷ ಎಂದರೇನು, ಅದರಿಂದ ಪಾರಾಗುವುದು ಹೇಗೆ?]

360 ಹೆಣ್ಣುಮಕ್ಕಳ ದಿನಕ್ಕೊಂದು ವಿವಾಹ: ಋಷಿಯೊಬ್ಬರು ತಮ್ಮ ಮಗಳ ಜತೆ ಸೇರಿ, ಸ್ವರ್ಗ ಸಿಗಲಿ ಎಂದು ವಿಷ್ಣುವನ್ನು ಪ್ರಾರ್ಥಿಸುತ್ತಾರೆ. ಆಗ ಋಷಿ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ. ಅವಿವಾಹಿತೆ ಅನ್ನೋ ಕಾರಣಕ್ಕೆ ಆತನ ಮಗಳಿಗೆ ಸಾಧ್ಯವಾಗುವುದಿಲ್ಲ. ಆಕೆಯನ್ನು ಮದುವೆಯಾಗುವಂತೆ ಋಷಿಗಳನ್ನು ನಾರದರು ಮನವಿ ಮಾಡುತ್ತಾರೆ. ಕಲವ ಎಂಬಾತ ಆಕೆಯನ್ನು ವಿವಾಹ ಆಗುತ್ತಾನೆ. ಆ ದಂಪತಿಗೆ 360 ಹೆಣ್ಣುಮಕ್ಕಳು ಹುಟ್ಟುತ್ತಾರೆ.

ಕಲವ ಋಷಿಯು ತನ್ನ ಮಕ್ಕಳನ್ನು ಮದುವೆ ಆಗುವಂತೆ ವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಆದರೆ ನಾರಾಯಣ ಬರುವುದಿಲ್ಲ. ಒಂದು ದಿನ ತೇಜಸ್ವಿಯಾದ ಬ್ರಾಹ್ಮಣ ಯುವಕನೊಬ್ಬ ಬರುತ್ತಾನೆ. ತನ್ನ ಮಕ್ಕಳನ್ನು ಮದುವೆಯಾಗುವಂತೆ ಆತನನ್ನು ಋಷಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿಕೊಳ್ಳುವ ಯುವಕ ದಿನಕ್ಕೆ ಒಬ್ಬರಂತೆ 360 ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾನೆ. ಕೊನೆಯ ದಿನ ತನ್ನ ನಿಜ ಸ್ವರೂಪ ತೋರುತ್ತಾನೆ.

ಆತ ವರಾಹ ರೂಪದಲ್ಲಿರುವ ನಾರಾಯಣ ಆಗಿರುತ್ತಾನೆ. ಎಲ್ಲ ಹೆಣ್ಣುಮಕ್ಕಳನ್ನು ಸೇರಿಸಿ, ಒಬ್ಬರನ್ನಾಗಿ ಮಾಡಿ ತನ್ನ ಎಡ ಭಾಗದಲ್ಲಿ ಇರಿಸಿಕೊಳ್ಳುತ್ತಾನೆ ಎಂಬುದು ಇಲ್ಲಿನ ದೇವಾಲಯದ ಪುರಾಣ ಇತಿಹಾಸ. ಈ ರೀತಿ ನಿತ್ಯವೂ ಕಲ್ಯಾಣ ಮಾಡಿಕೊಳ್ಳುವ ವಿಷ್ಣು, ಬೇರೆಲ್ಲೂ ಇಲ್ಲವಂತೆ. ನಂಬಿಕೆಯಿಂದ ದರ್ಶಿಸಿ, ಭಕ್ತಿಯಿಂದ ಆರಾಧಿಸಿದರೆ ಈ ಕಲ್ಯಾಣ ಪೆರುಮಾಳ್ ಬದುಕಿನಲ್ಲಿ ಕಲ್ಯಾಣ ಉಂಟು ಮಾಡುತ್ತಾನೆ ಎಂಬುದು ಜನಜನಿತ ನಂಬಿಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nitya kalyana perumal temple near chennai is thousanad year old. This temple visit by girls whose marriage got delayed, will get marry soon. It is belief of people who visited this temple.
Please Wait while comments are loading...