ಮಂಗಳೂರು-ಉಡುಪಿ ಮೆಟ್ರೋ ಯೋಜನೆ: ಅಪ್‌ಡೇಟ್
ಉಡುಪಿ, ಏಪ್ರಿಲ್ 13: ಕರ್ನಾಟಕದ ಅವಳಿ ನಗರದಲ್ಲಿ ಉಡುಪಿ-ಮಂಗಳೂರು ಸಹ ಒಂದು. ಉಭಯ ನಗರಗಳ ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರವನ್ನು ನಡೆಸುತ್ತಾರೆ. ಹಾಲಿ ಈ ಎರಡೂ ನಗರಗಳ ನಡುವೆ ಖಾಸಗಿ ಬಸ್‌ಗಳ ಪಾರಮ್ಯ ಹೆಚ್ಚಿದೆ. ಸರ್ಕಾರಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿನಸಬೇಕು ಎಂದು ಕರ್ನಾಟಕದ ಕರಾವಳಿ ನಗರದ ಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ.
ಉಡುಪಿ-ಮಂಗಳೂರು ನಡುವೆ ಮೆಟ್ರೋ ರೈಲು ಸೇವೆ ಆರಂಭಿಸಬೇಕು ಎಂಬ ಚರ್ಚೆಗಳು ಜೋರಾಗಿದೆ. ಸದ್ಯ ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟು ಬೇರೆ ಯಾವುದೇ ನಗರದಲ್ಲಿ ಮೆಟ್ರೋ ರೈಲು ಸೇವೆ ಇಲ್ಲ. ಕರಾವಳಿ ನಗರದಲ್ಲಿ ಮೆಟ್ರೋ ಸೇವೆ ಆರಂಭಿಸುವ ಮೊದಲ ಹಂತದ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.

ಮಂಗಳೂರು-ಉಡುಪಿ ನಡುವೆ ಮೆಟ್ರೋ ರೈಲು ಯೋಜನೆ ಅನುಷ್ಠಾನಗೊಳಿಸುವ ಕುರಿತು ಕಾರ್ಯ ಸಾಧ್ಯತೆ ವರದಿಯನ್ನು ನೀಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಈ ಸೂಚನೆ ಕೊಡಲಾಗಿದೆ.
ಮಂಗಳೂರು-ಉಡುಪಿ ಮೆಟ್ರೋ ರೈಲು: ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಉಡುಪಿ ಮತ್ತು ಮಂಗಳೂರು ತಮ್ಮದೇ ಆದ ಪ್ರಭಾವವನ್ನು ಹೊಂದಿವೆ. ಎರಡೂ ನಗರಗಳು ರಾಜ್ಯದ ವಾಣಿಜ್ಯ ಕ್ಷೇತ್ರಕ್ಕೆ, ಆರೋಗ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. ಈ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಮೆಟ್ರೋ ರೈಲು ಯೋಜನೆ ಆರಂಭಿಸಬೇಕು ಎಂಬುದು ಬೇಡಿಕೆಯಾಗಿದ್ದು, ಇದು ಇನ್ನೂ ಪ್ರಸ್ತಾವನೆ ಹಂತದಲ್ಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮಂಗಳೂರು-ಉಡುಪಿ ನಡುವೆ ಮೆಟ್ರೋ ರೈಲು ಯೋಜನೆಯು ಕರಾವಳಿಯ ಆರ್ಥಿಕತೆ ಬೆಳವಣಿಗೆ, ಜನರ ಜೀವನಮಟ್ಟ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದಾರೆ.
ಮಂಗಳೂರು-ಉಡುಪಿ ನಡುವೆ ಮೆಟ್ರೋ ರೈಲು ಯೋಜನೆ ಕಾರ್ಯ ಸಾಧ್ಯತಾ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ವಾಣಿಜ್ಯ ನಗರವಾದ ಮಂಗಳೂರಿನಲ್ಲಿ ಇರುವ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮ ಮುಂತಾದ ಅಂಶಗಳನ್ನು ಪರಿಗಣನೆ ಮಾಡಿ ಮೆಟ್ರೋ ರೈಲು ಯೋಜನೆ ಅನುಷ್ಠಾನದ ಕುರಿತು ವರದಿ ಸಲ್ಲಿಸಬೇಕು ಎಂದು ಪತ್ರ ಬರೆದು ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಬರೆದ ಪತ್ರವನ್ನು ಜಿಲ್ಲಾಧಿಕಾರಿಗಳ ಕಛೇರಿ ಪರಿವಾಗಿ ಎನ್‌ಎಂಪಿಎ, ಎಂಆರ್‌ಪಿಎಲ್, ನಗರ ಪೊಲೀಸ್ ಆಯುಕ್ತರು, ಎನ್‌ಐಟಿಕೆ, ಸಾರಿಗೆ ಇಲಾಖೆ, ಮಂಗಳೂರು ವಿಶ್ವವಿದ್ಯಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳಿಸಲಾಗಿದೆ.
ಮಾರ್ಚ್ ತಿಂಗಳ ಆರಂಭದಲ್ಲಿ ಕರ್ನಾಟಕ ಸರ್ಕಾರ ಮಂಗಳೂರು-ಉಡುಪಿ-ಮಣಿಪಾಲ ಸಂಪರ್ಕಿಸುವ 64 ಕಿ. ಮೀ. ಇಂಟರ್ ಸಿಟಿ ಮೆಟ್ರೋ ರೈಲು ಯೋಜನೆ ಬಗ್ಗೆ ಪ್ರಸ್ತಾಪಿಸಿತ್ತು. ಈ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿತ್ತು. ಈ ವಿಷಯದ ಕುರಿತು ಈಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳಿಸಲಾಗಿದೆ.
ಎರಡು ನಗರದ ನಡುವೆ ಸದ್ಯ ಅಸ್ತಿತ್ವದಲ್ಲಿರುವ ಸಾರಿಗೆ ವ್ಯವಸ್ಥೆಯು ದಟ್ಟಣೆಯಿಂದ ಕೂಡಿದೆ. ರಸ್ತೆ ಮಾರ್ಗ ಮಾತ್ರ ಇರುವುದರಿಂದ ಪ್ರಯಾಣದ ಅವಧಿ ಹೆಚ್ಚಾಗುತ್ತಿದೆ. ಉಡುಪಿ-ಮಂಗಳೂರು ನಡುವೆ ಮೆಟ್ರೋ ಸೇವೆ ಆರಂಭಿಸಬೇಕು ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು.












Click it and Unblock the Notifications