Vande Bharat Express : ಸಿಹಿಸುದ್ದಿ; ಶೀಘ್ರವೇ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲ ಸೌಕರ್ಯ ಒದಗಿಸಲು ಟೆಂಡರ್ ಆಹ್ವಾನಿಸಲಾಗಿದೆ. ಶೀಘ್ರದಲ್ಲೇ ಮಂಗಳೂರಿಗೆ ವಂದೇ ಭಾರತ್ ರೈಲು ಆಗಮಿಸಲಿದೆ.
ಮಂಗಳೂರು, ಮಾರ್ಚ್ 23; ಕರ್ನಾಟಕದ ಕರಾವಳಿ ಭಾಗದ ಜನರಿಗೆ ಭಾರತೀಯ ರೈಲ್ವೆ ಶೀಘ್ರದಲ್ಲೇ ಸಿಹಿಸುದ್ದಿ ನೀಡಲಿದೆ. ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೆ ಆಗಮಿಸಲಿದೆ. ರೈಲು ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲ ಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ.
ಭಾರತೀಯ ರೈಲ್ವೆಯ ಪಾಲಕ್ಕಾಡ್ ವಿಭಾಗ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲ ಸೌಕರ್ಯ ಒದಗಿಸಲು ಟೆಂಡರ್ ಆಹ್ವಾನಿಸಿದೆ. 14/4/2023ರ ತನಕ ಟೆಂಡರ್ ಸಲ್ಲಿಕೆ ಮಾಡಲು ಅವಕಾಶವಿದ್ದು, ಪ್ರಕ್ರಿಯೆಗಳು ಅಂತಿಮಗೊಂಡ ಬಳಿಕ ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಟೆಂಡರ್ ಪ್ರಕಟಣೆಯಲ್ಲಿ ಸೂಚನೆ ನೀಡಲಾಗಿದೆ.

ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ದಕ್ಷಿಣ ರೈಲ್ವೆ ವಿಭಾಗ ಜಂಟಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲ ಸೌಕರ್ಯ ಒದಗಿಸಲು ಟೆಂಡರ್ ಕರೆದಿದೆ. ಈ ಮೂಲಕ ಕರ್ನಾಟಕದ ಕರಾವಳಿಗೆ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಮಿಸಲು ತಯಾರಿ ನಡೆದಿದೆ. ಕೇರಳದ ಜೊತೆ ಗಡಿ ಹಂಚಿಕೊಂಡಿರುವ ಮಂಗಳೂರಿಗೆ ಕೇರಳದ ಮೂಲವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಮಿಸಲಿದೆ.
ಎಲ್ಲಿಂದ, ಎಲ್ಲಿಗೆ ವಂದೇ ಭಾರತ್ ರೈಲು?; 2023ರ ಆಗಸ್ಟ್‌ನಲ್ಲಿ 75 ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರ ಭಾಗವಾಗಿಯೇ ಕೇರಳ ರಾಜ್ಯದ ಎರಡು ಮಾರ್ಗದಲ್ಲಿ ರೈಲು ಓಡಿಸಲು ಪರಿಶೀಲನೆ ನಡೆದಿದೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಕೇರಳ ರಾಜ್ಯದ ತಿರುವನಂತಪುರಂ ವಿಭಾಗ ಒಟ್ಟು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಯಾರು ಮಾಡಲು ಈಗಾಗಲೇ ಚೆನ್ನೈ ಕೋಚ್ ಫ್ಯಾಕ್ಟರಿಗೆ ಮನವಿ ಸಲ್ಲಿಕೆ ಮಾಡಿದೆ.

ಕೇರಳ ರಾಜ್ಯ ತಿರುವನಂತಪುರಂ-ಎರ್ನಾಕುಲಂ (ವಯಾ ಅಲಪ್ಪುಳ) ಮತ್ತು ಶೋರ್ನೂರ್-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ. ಶೋರ್ನೂರ್ ಕಣ್ಣೂರು ನಗರದಲ್ಲಿದೆ, ಇಲ್ಲಿಗೆ ಆಗಮಿಸುವ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗುತ್ತದೆ. ಈ ಎರಡೂ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲು ಓಡಿಸಲು ಬೇಕಾದ ಕೆಲವು ಕಾಮಗಾರಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಅಲ್ಲದೇ ಕೊಲ್ಲಂ ಮತ್ತು ಕುಟ್ಟಿಪುರಂ ರೈಲು ನಿಲ್ದಾಣದಲ್ಲಿ ಬೈಪಾಸ್ ಕಾಮಗಾರಿ ಆರಂಭಿಸಲಾಗಿದೆ.
2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದರು. ಈ ರೈಲು ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ವಯಾ ಬೆಂಗಳೂರು ಸಂಚಾರ ನಡೆಸುತ್ತಿದೆ. ಈ ರೈಲು ಸೇವೆ ಆರಂಭವಾದಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಚೆನ್ನೈ-ಕನ್ಯಾಕುಮಾರಿ ನಡುವಿನ ವಂದೇ ಭಾರತ್ ರೈಲಿಗಾಗಿ ಬೇಡಿಕೆ ಇಟ್ಟಿದ್ದರು. ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡರೆ ರೈಲನ್ನು ತಿರುವನಂತಪುರಂ ತನಕ ವಿಸ್ತರಣೆ ಮಾಡಬಹುದು ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯ 'ಮೇಕ್ ಇನ್ ಇಂಡಿಯಾ' ಕರೆಗೆ ಉದಾಹರಣೆ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಸದ್ಯ ಚೆನ್ನೈನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ 44 ವಂದೇ ಭಾರತ್ ಬೋಗಿಗಳ ತಯಾರಿ ಕೆಲಸ ನಡೆಯುತ್ತಿದೆ. ಮೂಲ ಸೌಕರ್ಯ ಕಾಮಗಾರಿಗಳು ಅಂತಿಮಗೊಂಡ ಬಳಿಕ ದಕ್ಷಿಣ ಭಾರತದ ರಾಜ್ಯದಲ್ಲಿ ಹೆಚ್ಚಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಮಾರ್ಗಗಳನ್ನು ಅಂತಿಮಗೊಳಿಸುವ ಕಾರ್ಯಗಳು ನಡೆಯುತ್ತಿವೆ.
2022ರ ನವೆಂಬರ್‌ನಲ್ಲಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕೆ. ಎಸ್. ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಸದ್ಯ ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ ಒಂದೇ ಒಂದು ವಂದೇ ಭಾರತ್ ರೈಲು ಇದಾಗಿದೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ರೈಲು ಘೋಷಣೆ ಮಾಡಲಾಗಿದ್ದು, ಈ ವರ್ಷದ ಏಪ್ರಿಲ್ ಅಂತ್ಯದಲ್ಲಿ ಈ ಸೇವೆ ಆರಂಭವಾಗುವ ನಿರೀಕ್ಷೆಇದೆ.












Click it and Unblock the Notifications