4 ಲಕ್ಷದಿಂದ 20 ಲಕ್ಷದ ವರೆಗೆ ಟಿಕೆಟ್ ದರ: ಮಹಾರಾಜಾಸ್ ಎಕ್ಸ್‌ಪ್ರೆಸ್‌ನ ವೈಭವ, ವಿಶೇಷ
ಭಾರತದಲ್ಲಿ ಐಷಾರಾಮಿ ರೈಲು ಪ್ರಯಾಣ ಎಂದಾಗ ಸಾಮಾನ್ಯವಾಗಿ ರಾಜಧಾನಿ, ಶತಾಬ್ದಿ ಅಥವಾ ವಂದೇ ಭಾರತ್ ರೈಲುಗಳ ಹೆಸರುಗಳು ನೆನಪಿಗೆ ಬರುತ್ತವೆ. ಆದರೆ ಇವುಗಳಿಗಿಂತಲೂ ಹೆಚ್ಚು ವೈಭವ ಮತ್ತು ದುಬಾರಿ ಅನುಭವವನ್ನು ನೀಡುವ ರೈಲು ಎಂದರೆ 'ಮಹಾರಾಜಾಸ್ ಎಕ್ಸ್‌ಪ್ರೆಸ್'. ಭಾರತದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ರೈಲು ಪ್ರಯಾಣವೆಂದು ಇದನ್ನು ಕರೆಯಲಾಗುತ್ತದೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ನಡೆಸುವ ಈ ವಿಶೇಷವಾದ ರೈಲನ್ನು "ಚಲಿಸುವ ಅರಮನೆ" ಎಂದೇ ಹಲವರು ಬಣ್ಣಿಸುತ್ತಾರೆ. ರಾಜಮನೆತನದ ಶೈಲಿಯ ಒಳವಿನ್ಯಾಸ, ವೈಭವಶಾಲಿ ಸೌಲಭ್ಯಗಳು ಮತ್ತು ಭಾರತದ ಪ್ರಮುಖ ಪ್ರವಾಸಿ ತಾಣಗಳ ಮೂಲಕ ಸಾಗುವ ಈ ರೈಲು ವಿಶ್ವದ ಶ್ರೀಮಂತ ಪ್ರವಾಸಿಗರನ್ನೂ ಗಮನ ಸೆಳೆಯುತ್ತದೆ.

ಮಹಾರಾಜಾಸ್ ಎಕ್ಸ್‌ಪ್ರೆಸ್‌ನ ಅತ್ಯಂತ ದುಬಾರಿ ಟಿಕೆಟ್ 'ಪ್ರೆಸಿಡೆನ್ಷಿಯಲ್ ಸೂಟ್'ಗೆ ಸೇರಿದೆ. ಪ್ರಯಾಣದ ಮಾರ್ಗ ಮತ್ತು ಅವಧಿಯನ್ನು ಅವಲಂಬಿಸಿ ಇದರ ದರ ಒಬ್ಬರಿಗೆ ಸುಮಾರು 20 ಲಕ್ಷ ರೂಪಾಯಿಗೂ ಅಧಿಕವಾಗುತ್ತದೆ. ಕೆಲವು ಅಧಿಕೃತ ಪ್ಯಾಕೇಜ್‌ಗಳಲ್ಲಿ ಇದರ ಬೆಲೆ ಸುಮಾರು ₹21 ಲಕ್ಷ (25 ಸಾವಿರ ಅಮೆರಿಕನ್ ಡಾಲರ್‌ಗೂ) ತಲುಪುವ ಸಾಧ್ಯತೆ ಇರುತ್ತದೆ.
ಈ ರೈಲಿನಲ್ಲಿರುವ 4 ದಿನಗಳ "ಟ್ರೆಷರ್ಸ್ ಆಫ್ ಇಂಡಿಯಾ" ಪ್ಯಾಕೇಜ್ ದರ ಡಿಲಕ್ಸ್ ಕ್ಯಾಬಿನ್ ಸುಮಾರು ₹4 ಲಕ್ಷದಿಂದ ಆರಂಭವಾಗುತ್ತದೆ. 7 ದಿನಗಳ ದೀರ್ಘ ಪ್ರಯಾಣದ ಪ್ಯಾಕೇಜ್‌ಗಳು ₹7 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗಬಹುದು.
ದೇಹಲಿಯಿಂದ ಪ್ರಾರಂಭಗೊಂಡು ಆಗ್ರಾ, ಜೈಪುರ್ ಮತ್ತು ರಣಥಂಬೋರ್ ನಗರಗಳನ್ನು ಒಳಗೊಂಡಂತೆ 3 ರಾತ್ರಿ, 4 ಹಗಲಿನ ಒಂದು ಚಿಕ್ಕದಾದ ಮತ್ತು ಆಕರ್ಷಕವಾದ ರೈಲು ಪ್ರವಾಸ ಆಗಿದೆ. ರೈಲಿನಲ್ಲಿ ಡಿಲಕ್ಸ್ ಕ್ಯಾಬಿನ್, ಜೂನಿಯರ್ ಸೂಟ್, ಸೂಟ್ ಹಾಗೂ ಪ್ರೆಸಿಡೆನ್ಷಿಯಲ್ ಸೂಟ್ ಸೇರಿದಂತೆ ನಾಲ್ಕು ವಿವಿಧ ವಸತಿ ವ್ಯವಸ್ಥೆಗಳಿವೆ. ಪ್ರತಿಯೊಂದು ವಿಭಾಗದಲ್ಲೂ ವೈಭವ ಮತ್ತು ಸೌಲಭ್ಯಗಳ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ.
ಪ್ರೆಸಿಡೆನ್ಷಿಯಲ್ ಸೂಟ್ ಸುಮಾರು 448 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಅನೇಕ ಹೋಟೆಲ್ ಕೊಠಡಿಗಳಿಗಿಂತಲೂ ದೊಡ್ಡದಾಗಿದೆ. ಇದರಲ್ಲಿ ಎರಡು ಮಲಗುವ ಕೊಠಡಿಗಳು, ವಿಶಾಲವಾದ ಲಿವಿಂಗ್ ರೂಮ್, ಬರವಣಿಗೆ ಟೇಬಲ್, ಮಿನಿ ಬಾರ್, ಐಷಾರಾಮಿ ಬಾತ್‌ರೂಮ್, ಟಿವಿ ಮತ್ತು ಖಾಸಗಿ ಬಟ್ಲರ್ ಸೇವೆಯೂ ಲಭ್ಯವಿದೆ ಮತ್ತು ಭಾಷಾ ಪ್ರವೀಣರಾದ ಗೈಡುಗಳು ಮತ್ತು ಆಪ್ರ ಬೋರ್ಡ ಪ್ರವಾಸಗಳಿಗೆ ಪ್ರತ್ಯಕ್ಷ ಐಷಾರಾಮಿ ಕಾರಿನ ವ್ಯವಸ್ಥಯನ್ನು ಮಾಡಲಾಗುತ್ತದೆ.
ಮಹಾರಾಜಾಸ್ ಎಕ್ಸ್‌ಪ್ರೆಸ್ ಹಲವು ವೈಭವಯುತ ಪ್ರವಾಸ ಮಾರ್ಗಗಳಲ್ಲಿ ಸಂಚರಿಸುತ್ತದೆ. 'ಇಂಡಿಯನ್ ಸ್ಪ್ಲೆಂಡರ್', 'ಹೆರಿಟೇಜ್ ಆಫ್ ಇಂಡಿಯಾ', 'ಇಂಡಿಯನ್ ಪನೋರಮಾ' ಮತ್ತು 'ಟ್ರೆಷರ್ಸ್ ಆಫ್ ಇಂಡಿಯಾ' ಪ್ರಮುಖ ಪ್ಯಾಕೇಜ್‌ಗಳಾಗಿವೆ. ಈ ಪ್ರಯಾಣದಲ್ಲಿ ಜೈಪುರ, ಆಗ್ರಾ, ವಾರಾಣಸಿ, ಉದಯಪುರ, ರಣಥಂಭೋರ್ ರಾಷ್ಟ್ರೀಯ ಉದ್ಯಾನವನ ಮತ್ತು ಖಜುರಾಹೋ ದೇವಾಲಯಗಳಂತಹ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲಾಗುತ್ತದೆ.
ಮಹಾರಾಜಾಸ್ ಎಕ್ಸ್‌ಪ್ರೆಸ್ ವೈಭವಯುತ ಪ್ರವಾಸ ಮಾರ್ಗಗಳು
ಇಂಡಿಯನ್ ಸ್ಪ್ಲೆಂಡರ್
ದೆಹಲಿಯಿಂದ ಹೊರಟು ಮುಂಬೈನಲ್ಲಿ ಕೊನೆಗೊಳ್ಳುವ ಈ 6 ರಾತ್ರಿ ಮತ್ತು 7 ದಿನಗಳ ಪ್ರವಾಸವು ರಾಜಸ್ಥಾನದ ಪ್ರಮುಖ ಸಾಂಸ್ಕೃತಿಕ ತಾಣಗಳು ಮತ್ತು UNESCO ವಿಶ್ವ ಪರಂಪರೆಯ ತಾಣಗಳನ್ನು ಒಳಗೊಂಡಿದೆ.
ಪ್ರಾರಂಭದ ಸ್ಥಳ: ದೆಹಲಿ
ಕೊನೆಯ ಸ್ಥಳ: ಮುಂಬೈ
ಪ್ರಮುಖ ನಿಲ್ದಾಣಗಳು: ಆಗ್ರಾ (ತಾಜ್ ಮಹಲ್), ರಣಥಂಬೋರ್ (ಹುಲಿ ವೀಕ್ಷಣೆ), ಜೈಪುರ, ಬಿಕಾನೇರ್, ಜೋಧಪುರ ಮತ್ತು ಉದಯಪುರ
ಪ್ರವಾಸದ ಶುಲ್ಕ: ₹6.51.000(ಒಬ್ಬರಿಗೆ)
ಹೆರಿಟೇಜ್ ಆಫ್ ಇಂಡಿಯಾ
ಮುಂಬೈನಿಂದ ಹೊರಟು ರಾಜಸ್ಥಾನದ ಐತಿಹಾಸಿಕ ನಗರಗಳಾದ ಉದಯಪುರ, ಜೋಧ್‌ಪುರ, ಜೈಪುರ ಮತ್ತು ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಸಾಗಿ ದೆಹಲಿಯಲ್ಲಿ ಕೊನೆಗೊಳ್ಳುತ್ತದೆ.
ಪ್ರಾರಂಭದ ಸ್ಥಳ: ಮುಂಬೈ
ಕೊನೆಯ ಸ್ಥಳ: ದೆಹಲಿ
ಪ್ರಮುಖ ನಿಲ್ದಾಣಗಳು: ಮುಂಬೈನ , ಉದಯಪುರ, ಜೋಧ್‌ಪುರ, ಬಿಕಾನೇರ್, ಜೈಪುರ, ರಣಥಂಬೋರ್, ಫತೇಪುರ್, ದೆಹಲಿ
ಪ್ರವಾಸದ ಶುಲ್ಕ: ₹ 6,00,000 ರಿಂದ ₹ 20,00,000 ವರೆಗೆ ಇರುತ್ತದೆ.
ಡಿಲಕ್ಸ್ ಕ್ಯಾಬಿನ್: ₹6,00,000
ಪ್ರೆಸಿಡೆನ್ಶಿಯಲ್ ಸೂಟ್: ₹20,00,000
ಇಂಡಿಯನ್ ಪನೋರಮಾ
ಈ ಪ್ರವಾಸವು 6 ರಾತ್ರಿಗಳು / 7 ದಿನಗಳು ಹೊಂದಿರುತ್ತದೆ, ನವದೆಹಲಿಯಿಂದ ಆರಂಭವಾಗಿ ಜೈಪುರ, ರಣಥಂಬೋರ್, ಫತೇಪುರ್ ಸಿಕ್ರಿ ಮತ್ತು ಆಗ್ರಾ, ಖಜುರಾಹೊ ಮೂಲಕ ಸಾಗಿ ವಾರಣಾಸಿಯಲ್ಲಿ ಕೊನೆಗೊಳ್ಳುತ್ತದೆ.
ಪ್ರಾರಂಭದ ಸ್ಥಳ: ದೆಹಲಿ
ಕೊನೆಯ ಸ್ಥಳ: ವಾರಣಾಸಿ
ಪ್ರಮುಖ ನಿಲ್ದಾಣಗಳು: ದೆಹಲಿ, ಜೈಪುರ, ರಣಥಂಬೋರ್, ಫತೇಪುರ್ ಸಿಕ್ರಿ ಮತ್ತು ಆಗ್ರಾ, ಖಜುರಾಹೊ, ವಾರಣಾಸಿ
ಪ್ರವಾಸದ ಶುಲ್ಕ : ₹ 8,19,000 ರಿಂದ ₹ 23,78,500 ವರೆಗೆ ಇರುತ್ತದೆ.
ಡಿಲಕ್ಸ್ ಕ್ಯಾಬಿನ್: ₹ 8,19,000
ಜೂನಿಯರ್ ಸೂಟ್: ₹ 10,43,250
ಸೂಟ್: ₹ 15,21,000
ಪ್ರೆಸಿಡೆನ್ಷಿಯಲ್ ಸೂಟ್: ₹ 23,78,500
ಟ್ರೆಷರ್ಸ್ ಆಫ್ ಇಂಡಿಯಾ
ಈ ಪ್ರವಾಸವು 3 ರಾತ್ರಿಗಳು ಮತ್ತು 4 ದಿನಗಳು ಹೊಂದಿರುತ್ತದೆ, ನವದೆಹಲಿಯಿಂದ ಆರಂಭವಾಗಿ ಆಗ್ರಾ - ರಣಥಂಬೋರ್ - ಜೈಪುರ - ದೆಹಲಿ ತಲುಪುತ್ತದೆ.
ಪ್ರಮುಖ ನಿಲ್ದಾಣಗಳು: ಆಗ್ರಾ - ರಣಥಂಬೋರ್ - ಜೈಪುರ
ಪ್ರವಾಸದ ಶುಲ್ಕ: ₹ 4,70,780 ರಿಂದ ಪ್ರಾರಂಭವಾಗುತ್ತದೆ.
ಡಿಲಕ್ಸ್ ಕ್ಯಾಬಿನ್ ₹ 4,70,780
ಜೂನಿಯರ್ ಸೂಟ್ ₹ 5,05,880
ಸೂಟ್ ₹ 7,63,250
ಪ್ರೆಸಿಡೆನ್ಶಿಯಲ್ ಸೂಟ್ ₹ 12,95750
ವಿಶ್ವದ ಅತ್ಯುತ್ತಮ ಐಷಾರಾಮಿ ರೈಲುಗಳ ಪಟ್ಟಿಯಲ್ಲಿ ಮಹಾರಾಜಾಸ್ ಎಕ್ಸ್‌ಪ್ರೆಸ್ ಹಲವು ಬಾರಿ ಸ್ಥಾನ ಪಡೆದಿದೆ. ಐಷಾರಾಮಿ ಪ್ರವಾಸವನ್ನು ಇಷ್ಟಪಡುವವರಿಗೆ ಭಾರತವನ್ನು ರಾಜಮನೆತನದ ಶೈಲಿಯಲ್ಲಿ ಅನುಭವಿಸಲು ಇದು ಅತ್ಯಂತ ವೈಭವಯುತ ಮಾರ್ಗವೆಂದು ಪರಿಗಣಿಸಲಾಗಿದೆ.














Click it and Unblock the Notifications