Vande Bharat Train: ಮಧುರೈ-ಬೆಂಗಳೂರು ಪ್ರಾಯೋಗಿಕ ಸಂಚಾರ ಆರಂಭ
ಬೆಂಗಳೂರು, ಜೂನ್ 17: ಲೋಕಸಭೆ ಚುನಾವಣೆ 2024 ಮುಗಿಯುತ್ತಿದ್ದಂತೆಯೇ ಭಾರತೀಯ ರೈಲ್ವೆ ಎರಡು ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲಿದೆ. ಈ ರೈಲುಗಳ ಪ್ರಾಯೋಗಿಕ ಸಂಚಾರ ಸೋಮವಾರ ಆರಂಭವಾಗಲಿದ್ದು, ರೈಲುಗಳಿಗೆ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ನಿರೀಕ್ಷೆ ಇದೆ.
ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮಧುರೈ- ಬೆಂಗಳೂರು (ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ಮತ್ತು ಚೆನ್ನೈ-ನಾಗರ್‌ಕೋಯಿಲ್ ನಡುವೆ ಸಂಚಾರ ನಡೆಸಲಿದೆ. ರೈಲು ಸೇವೆ ಆರಂಭಕ್ಕೆ ಪೂರ್ವಭಾವಿಯಾಗಿ ಸೋಮವಾರದಿಂದ 4 ದಿನ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ.

ಪ್ರಾಯೋಗಿಕ ಸಂಚಾರದ ವೇಳಾಪಟ್ಟಿ: ಮಧುರೈ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವಿನ ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಅಧಿಕೃತವಾಗಿ ಇಲಾಖೆ ಇನ್ನೂ ಸಹ ಬಿಡುಗಡೆ ಮಾಡಿಲ್ಲ. ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾಹಿತಿಗಳ ಪ್ರಕಾರ ಈ ರೈಲು ಸೇವೆಗೆ ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ ಮತ್ತು ಹೊಸೂರು ನಿಲ್ದಾಣದಲ್ಲಿ ನಿಲುಗಡೆ ಇದೆ.
ಪ್ರಾಯೋಗಿಕ ಸಂಚಾರದ ವೇಳೆ ವಂದೇ ಭಾರತ್ ರೈಲು ಮಧುರೈ ನಿಲ್ದಾಣದಿಂದ 05:15ಕ್ಕೆ ಹೊರಡಲಿದೆ ಮತ್ತು ಬೆಂಗಳೂರು ನಗರವನ್ನು 22:25ಕ್ಕೆ ತಲುಪಲಿದೆ. ನಾಲ್ಕು ದಿನಗಳ ಪ್ರಾಯೋಗಕ ಸಂಚಾರಕ್ಕೆ ಬೇರೆ-ಬೇರೆ ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ.
ವಂದೇ ಭಾರತ್ ರೈಲು ಉಭಯ ನಗರಗಳ ನಡುವೆ 6 ಗಂಟೆಗಳಲ್ಲಿ ಸಂಚಾರ ನಡೆಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರೈಲಿನ ವೇಗ, ಮೂಲ ಸೌಕರ್ಯ ವ್ಯವಸ್ಥೆ ಮುಂತಾದವುಗಳನ್ನು ಪರಿಶೀಲನೆ ಮಾಡಿದ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ.
ಸದ್ಯದ ಮಾಹಿತಿಯಂತೆ ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಚೆನ್ನೈ ರೈಲು ನಿಲ್ದಾಣದಲ್ಲಿ ಮಧುರೈ-ಬೆಂಗಳೂರು (ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ಮತ್ತು ಚೆನ್ನೈ-ನಾಗರ್‌ಕೋಯಿಲ್ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬಳಿಕ ರೈಲು ಸಂಚಾರದ ದಿನಾಂಕ ಪ್ರಕಟವಾಗಲಿದೆ.
ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಹಲವು ರಾಜ್ಯಗಳಲ್ಲಿ ಬೇಡಿಕೆ ಇದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಕೊಯಮತ್ತೂರು ನಡುವೆ ಈಗಾಗಲೇ ವಂದೇ ಭಾರತ್ ರೈಲು ಸಂಚಾರವಿದೆ. ಈಗ ಬೆಂಗಳೂರು-ಮಧುರೈ ನಡುವೆ ಸಹ ರೈಲು ಸೇವೆ ಆರಂಭವಾಗುತ್ತಿದೆ.
ಬೆಂಗಳೂರು-ಮಧುರೈ ನಡುವೆ 8 ಬೋಗಿಯ ವಂದೇ ಭಾರತ್ ರೈಲುಗಳನ್ನು ಓಡಿಸುವ ನಿರೀಕ್ಷೆ ಇದೆ. ಬಿಳಿ ಮತ್ತು ಕೇಸರಿ ಬಣ್ಣದ ರೈಲುಗಳಿದ್ದು, ಯಾವ ಬಣ್ಣದ ರೈಲು ಓಡಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಉಭಯ ನಗರಗಳ ನಡುವಿನ ಸಂಚಾರದ ಅವಧಿ 6 ಗಂಟೆಗಳು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಇದೆ. ಇಲ್ಲಿಂದ ನಗರದ ಮೆಜೆಸ್ಟಿಕ್ ಸಂಪರ್ಕಿಸಲು ನಮ್ಮ ಮೆಟ್ರೋ ರೈಲು, ಬಿಎಂಟಿಸಿ ಬಸ್, ಕ್ಯಾಬ್, ಆಟೋ ಸೇರಿದಂತೆ ಹಲವು ಸಂಚಾರ ವ್ಯವಸ್ಥೆ ಇದೆ.
ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮೂಲಕವೇ ಸಂಚಾರ ನಡೆಸುತ್ತದೆ. ಈಗ ಮಧುರೈ-ಬೆಂಗಳೂರು ರೈಲು ಸಹ ಇದೇ ನಿಲ್ದಾಣದಿಂದ ಹೊರಡಲಿದೆ.
ಕರ್ನಾಟಕದ 10 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇದೆ. ಅಲ್ಲದೇ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಆದರೆ ಈ ರೈಲು ಸೇವೆ ಇನ್ನೂ ಆರಂಭವಾಗಿಲ್ಲ.











Click it and Unblock the Notifications