ಕುಶಾಲನಗರ ಹೆಸರು ಬಂದಿದ್ದೇಗೆ? ಇಲ್ಲಿರುವ ಪ್ರವಾಸಿ ತಾಣಗಳು ಯಾವುವು?
ಮಡಿಕೇರಿ, ಫೆಬ್ರವರಿ 19: ಇತಿಹಾಸದ ಗರ್ಭದಲ್ಲಿ ಹುದುಗಿಹೋದ ಹತ್ತಾರು ವಿಚಾರಗಳನ್ನು ತಿರುವಿ ನೋಡಿದಾಗ ಇಂದಿನ ಬದಲಾವಣೆಯ ಜಗತ್ತಿನಲ್ಲಿ ರೋಮಾಂಚನಕಾರಿ ವಿಚಾರಗಳು ಬೆಳಕಿಗೆ ಬರುತ್ತವೆ. ಇವತ್ತಿನ ಬದುಕಿನ ಜಂಜಾಟದಲ್ಲಿ ಇತಿಹಾಸ ಪುಟಗಳನ್ನು ತಿರುವಿ ನೋಡುವ ಸಮಯವಾದರೂ ಎಲ್ಲಿದೆ? ಆದರೂ ಪ್ರತಿಯೊಂದು ಊರು, ಪಟ್ಟಣಗಳ ಹಿಂದೆ ಅದರದ್ದೇ ಆದ ಇತಿಹಾಸವಂತು ಇದ್ದೇ ಇರುತ್ತದೆ. ಇಂತಹ ಪಟ್ಟಣಗಳ ಸಾಲಿಗೆ ಕೊಡಗಿನ ಹೆಬ್ಬಾಗಿಲೆಂದೇ ಕರೆಯುವ ಕುಶಾಲನಗರ ಸೇರುತ್ತದೆ.
ಇವತ್ತು ಕುಶಾಲನಗರ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಗಳ ಪೈಕಿ ಮುಂಚೂಣಿಯಲ್ಲಿದೆ. ಇತ್ತ ಕೊಡಗು ಅತ್ತ ಮೈಸೂರು ಮತ್ತು ಹಾಸನಕ್ಕೆ ಹೊಂದಿಕೊಂಡಂತೆ ಇರುವುದರಿಂದ ಅಷ್ಟೇ ಅಲ್ಲದೆ ಸುತ್ತಮುತ್ತ ಪ್ರವಾಸಿ ತಾಣಗಳನ್ನು ಹೊಂದಿ ಕೊಡಗಿನಲ್ಲಿಯೇ ಇದ್ದರೂ ಮಳೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸುರಿಯುವ ಪ್ರದೇಶವಾಗಿ, ಮೈಸೂರು ಹಾಗೂ ಹಾಸನದ ವಾತಾವರಣದೊಂದಿಗೆ ಬೆರೆತು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗಮನಸೆಳೆಯುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದು ಪ್ರತಿದಿನವೂ ಪ್ರವಾಸಿಗರು ಆಗಮಿಸುವುದರೊಂದಿಗೆ ವ್ಯಾಪಾರ ವಹಿವಾಟುಗಳಿಗೂ ತೆರೆದುಕೊಳ್ಳುತ್ತಾ ಸಾಗುತ್ತಿದೆ.

ಮೈಸೂರು, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಕಾರಣದಿಂದಾಗಿ ಹೆಚ್ಚಿನವರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಈ ಪೈಕಿ ಪ್ರವಾಸ ತಾಣಗಳಿಗೆಂದೇ ಬರುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಕಾವೇರಿ ನದಿ ಹರಿಯುವುದಲ್ಲದೆ, ಸುತ್ತಲಿನ ಪ್ರಾಕೃತಿಕ ಸುಂದರತೆ ನಗರಕ್ಕೆ ತೋರಣ ಕಟ್ಟಿದೆ. ಇದರ ಜತೆಗೆ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ಕಾವೇರಿ ನಿಸರ್ಗಧಾಮ, ದುಬಾರೆ ಆನೆಶಿಬಿರ ಹೀಗೆ ಹಲವು ಪ್ರವಾಸಿ ತಾಣಗಳು ಕುಶಾಲನಗರಕ್ಕೆ ಕಳೆಕಟ್ಟಿವೆ.
ನಾಗಾಲೋಟದಲ್ಲಿ ಬೆಳೆಯುತ್ತಿರುವ ಕುಶಾಲನಗರ
ಕುಶಾಲನಗರ ಜನವಸತಿ ಪ್ರದೇಶವಾಗಿ ಬೆಳೆಯುತ್ತಿದೆ. ಪಟ್ಟಣದ ವ್ಯಾಪ್ತಿ ವಿಸ್ತರಿಸುತ್ತಾ ಸಾಗುತ್ತಿದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡಾವಣೆಗಳು ತಲೆ ಎತ್ತುವುದರೊಂದಿಗೆ ನಿವೇಶನಗಳ ಬೆಲೆಯೂ ಗಗನಕ್ಕೇರುತ್ತಿದೆ. ಹೋಟೆಲ್, ರೆಸಾರ್ಟ್ ಗಳು ಸೇರಿದಂತೆ ಉದ್ಯಮಗಳು ಹುಟ್ಟಿಕೊಳ್ಳುತ್ತಿವೆ. ಕೊಡಗು ಸೇರಿದಂತೆ ಸುತ್ತಮುತ್ತಲಿನವರು ಕುಶಾಲನಗರ ಸುತ್ತಮುತ್ತ ನೆಲೆನಿಲ್ಲುವ ಬಯಕೆ ತೋರುತ್ತಿದ್ದಾರೆ. ಇದರ ಜತೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವಾಸ್ತವ್ಯ ಹೂಡಿ ಪ್ರವಾಸಿ ತಾಣಗಳನ್ನು ವೀಕ್ಷಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಹೀಗಾಗಿ ಸದಾ ಜನರಿಂದ ಪಟ್ಟಣ ಗಿಜಿಗುಟ್ಟುತ್ತಿರುತ್ತದೆ.
ಇನ್ನು ಈ ಪಟ್ಟಣಕ್ಕೆ ಕುಶಾಲನಗರ ಎಂಬ ಹೆಸರು ಹೇಗೆ ಬಂತು ಎಂಬುದನ್ನು ನೋಡಿದ್ದೇ ಆದರೆ ಇತಿಹಾಸದ ಪುಟಗಳಲ್ಲಿ ಸಿಗುವ ಕೆಲವೊಂದು ಮಾಹಿತಿ ಪ್ರಕಾರ ಕೊಡಗಿಗೆ ದಂಡೆತ್ತಿ ಬಂದು ಬೀಡು ಬಿಟ್ಟಿದ್ದ ಹೈದರಾಲಿಗೆ ಮಗ ಟಿಪ್ಪು ಸುಲ್ತಾನ್ ಹುಟ್ಟಿದ ಸಂದೇಶ ಇಲ್ಲಿದ್ದಾಗಲೇ ಸಿಕ್ಕಿತಂತೆ. ಇಂತಹ ಸಂತೋಷದ ವಾರ್ತೆ ಸಿಕ್ಕಿದ ಖುಷಿಯಲ್ಲಿ ತಾನಿದ್ದ ಪ್ರದೇಶಕ್ಕೆ ಕುಶಾಲನಗರ ಎಂದು ಹೆಸರಿಟ್ಟು ಕರೆದನೆಂದು ಹೇಳಲಾಗುತ್ತಿದೆ. ಇದಾದ ನಂತರದ ಕಾಲಘಟ್ಟದಲ್ಲಿ ಬ್ರಿಟೀಷರು ಶ್ರೀರಂಗಪಟ್ಟಣದಲ್ಲಿ ಟಿಪ್ಪುವನ್ನು ಮಣಿಸಿ ಅಧಿಕಾರ ಹಿಡಿದ ಬಳಿಕ ಕೊಡಗಿನ ರಾಜರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ.

ಫ್ರೇಸರ್ ಪೇಟೆ ಕುಶಾಲನಗರವಾಗಿ ಉಳಿದಿದ್ದೇಗೆ?
ಅವತ್ತು ಕೊಡಗನ್ನು ಆಳುತ್ತಿದ್ದ ಲಿಂಗರಾಜನ ಮರಣಾನಂತರ ಪಟ್ಟಕ್ಕೆ ಬಂದ ಚಿಕ್ಕವೀರರಾಜ ಬ್ರಿಟೀಷರೊಂದಿಗಿದ್ದ ಸಂಬಂಧ ಕಡಿದುಕೊಂಡನು ಹೀಗಾಗಿ ಬ್ರಿಟೀಷರು ಮಡಿಕೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಚಿಕ್ಕವೀರರಾಜ ಪರಿವಾರದೊಂದಿಗೆ ಮಡಿಕೇರಿ ಅರಮನೆಯನ್ನು ಬಿಟ್ಟು ನಾಲ್ಕುನಾಡು ಅರಮನೆಯಲ್ಲಿ ತಲೆಮರೆಸಿಕೊಂಡನು. ಹೀಗಾಗಿ ಬ್ರಿಟೀಷರು ಮಡಿಕೇರಿಯನ್ನು 11-04-1834ರಲ್ಲಿ ವಶಪಡಿಸಿಕೊಂಡರು. ಇದಾದ ನಂತರ ಕೊಡಗಿನಲ್ಲಿ ಬ್ರಿಟೀಷ್ ಆಡಳಿತ ಬಂತು. ಕರ್ನಲ್ ಫ್ರೇಸರ್ ಕೊಡಗಿನ ಪ್ರಥಮ ಕಮೀಷನರ್ ಆಗಿ ನೇಮಕಗೊಂಡನು. ಈತನ ನೆನಪಿಗಾಗಿ ಕುಶಾಲನಗರಕ್ಕೆ ಬ್ರಿಟೀಷರ್ ಪ್ರೇಸರ್ ಪೇಟೆ ಎಂದು ಕರೆದರು. ಆದರೆ 1947ರ ಹೊತ್ತಿಗೆ ಭಾರತದಲ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಳು ತೀವ್ರಗೊಂಡು ಸ್ವಾತಂತ್ರ್ಯ ಸಿಕ್ಕಾಗ ಕೊಡಗಿನಲ್ಲಿಯೂ ಬ್ರಿಟೀಷರ ಅಧಿಪತ್ಯ ಮರೆಯಾಯಿತು.
ಸ್ವಾತಂತ್ರ್ಯ ನಂತರ ಫ್ರೇಸರ್ ಪೇಟೆ ಎಂದು ಕರೆಯಲ್ಪಡುತ್ತಿದ್ದ ಪಟ್ಟಣ ಮತ್ತೆ ಕುಶಾಲನಗರವಾಯಿತು. ಇವತ್ತಿಗೂ ಕುಶಾಲನಗರವಾಗಿಯೇ ಉಳಿದಿದೆ. ದೂರದಿಂದ ಕೊಡಗಿನತ್ತ ಬರುವ ಪ್ರವಾಸಿಗರಿಗೆ ಕುಶಾಲನಗರ ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಅವರ ಸಾಮರ್ಥ್ಯಕ್ಕೆ ತಕ್ಕಂತೆ, ಲಾಡ್ಜ್, ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಿದ್ದು, ಇಲ್ಲಿ ವಾಸ್ತವ್ಯ ಹೂಡಿ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.
ಸುತ್ತಮುತ್ತವಿರುವ ಪ್ರವಾಸಿ ತಾಣಗಳ ವಿವರ
ಇನ್ನು ಸುತ್ತಮುತ್ತ ಇರುವ ಪ್ರವಾಸಿಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಮಡಿಕೇರಿ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯ ಎಡಭಾಗದಲ್ಲಿಯೇ ಕಾವೇರಿ ನಿಸರ್ಗಧಾಮದವಿದೆ. ಇಲ್ಲಿಂದ ಮುಂದಕ್ಕೆ ಸಿದ್ದಾಪುರಕ್ಕೆ ತೆರಳುವ ರಸ್ತೆಯಲ್ಲಿ ಸುಮಾರು 18 ಕಿ.ಮೀ ಸಾಗಿದರೆ ದುಬಾರೆ ಪ್ರವಾಸಿ ತಾಣಕ್ಕೆ ಭೇಟಿ ನೀಡಬಹುದಾಗಿದೆ.
ದುಬಾರೆಯಿಂದ ಸಿದ್ದಾಪುರ ರಸ್ತೆಯಲ್ಲಿ ಸಾಗಿ ಅಲ್ಲಿಂದ ಬಲಕ್ಕೆ ಸುಂಟಿಕೊಪ್ಪದ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಚಿಕ್ಲಿಹೊಳೆ ಜಲಾಶಯವನ್ನು ತಲುಪಬಹುದು. ಹಾಗೆಯೇ ಮುಂದಕ್ಕೆ ಮಡಿಕೇರಿ ಕಡೆಗೆ ತೆರಳಬಹುದು. ಇನ್ನು ಕುಶಾಲನಗರದಿಂದ ಸೋಮವಾರಪೇಟೆ ಕಡೆಗಿನ ರಸ್ತೆಯಲ್ಲಿ ತೆರಳಿದರೆ ಸುಮಾರು 8ಕಿ.ಮೀ. ದೂರದಲ್ಲಿ ಹಾರಂಗಿ ಜಲಾಶಯ ಸಿಗುತ್ತದೆ. ಕುಶಾಲನಗರದಿಂದ ಮೈಸೂರಿಗೆ ತೆರಳುವ ರಸ್ತೆಯಲ್ಲಿ ಸಾಗಿ ಕೊಪ್ಪದಿಂದ ಬಲಕ್ಕೆ ತಿರುಗಿದರೆ ಗೋಲ್ಡನ್ ಟೆಂಪಲ್ ನ್ನು ತಲುಪಬಹುದಾಗಿದೆ.
ಕುಶಾಲನಗರದಿಂದ ಹಾಸನದ ಕಡೆಗೆ ತೆರಳುವ ರಸ್ತೆಯಲ್ಲಿ ಕೂಡಿಗೆ ಬಳಿ ಇರುವ ಕಣಿವೆ ಶ್ರೀರಾಮಲಿಂಗೇಶ್ವರ ದೇಗುಲದಿಂದ ಪ್ರಸಿದ್ಧಿ ಹೊಂದಿದೆ ಕಾವೇರಿ ನದಿ ತಟದಲ್ಲಿರುವ ಈ ದೇಗುಲ ಸುಂದರವಾಗಿದೆ. ಹಾರಂಗಿಯಿಂದ ಹಾದು ಹೋಗಿರುವ ನಾಲೆ ಎದ್ದು ಕಾಣಿಸುತ್ತದೆ. ಇಲ್ಲಿರುವ ತೂಗು ಸೇತುವೆ ಗಮನಸೆಳೆಯುತ್ತದೆ. ಇಲ್ಲಿಗೆ ಸಮೀಪದ ಕೂಡ್ಲೂರು ಎಂಬಲ್ಲಿರುವ ವೀರಭೂಮಿ ಕೂಡ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕುಶಾಲನಗರ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸುಂದರ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications