Kunda Betta: ಸ್ವರ್ಗದ ಸೌಂದರ್ಯ ಬಿಚ್ಚಿಡುವ ಕುಂದಬೆಟ್ಟಕ್ಕೆ ನೀವು ಒಮ್ಮೆ ಭೇಟಿ ನೀಡಲೇಬೇಕು, ಮಾರ್ಗಗಳ ವಿವರ ತಿಳಿಯಿರಿ
ಮಡಿಕೇರಿ, ನವೆಂಬರ್, 19: ಬೆಟ್ಟಗುಡ್ಡ ಹತ್ತುವ ಸಾಹಸಪ್ರಿಯರಿಗಾಗಿಯೇ ಕೊಡಗಿನಲ್ಲಿ ಹತ್ತಾರು ಬೆಟ್ಟಗಳಿವೆ. ಅವುಗಳನ್ನೇರಲು ಇದು ಸಕಾಲವಾಗಿದೆ. ಇಡೀ ನಿಸರ್ಗವೇ ಹಸಿರಿನಿಂದ ತುಂಬಿದ್ದು, ಅದರ ನಡುವೆ ಬೆಟ್ಟಗುಡ್ಡಗಳನ್ನೇರುವುದು ಒಂಥರಾ ಮಜಾ.
ಕೊಡಗಿನಲ್ಲಿ ಹತ್ತು ಹಲವು ಬೆಟ್ಟಗಳಿದ್ದು, ಎಲ್ಲವೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಮತ್ತು ಇವು ದೈವಿಕ ತಾಣವಾಗಿಯೂ ಗಮನಸೆಳೆಯುತ್ತವೆ. ಇಂತಹ ಬೆಟ್ಟಗಳ ನಡುವೆ ದಕ್ಷಿಣ ಕೊಡಗಿನಲ್ಲಿದ್ದು, ಪೊನ್ನಂಪೇಟೆ ತಾಲೂಕಿಗೆ ಸೇರಿರುವ ಕುಂದಬೆಟ್ಟ ಕೂಡ ಪ್ರವಾಸಿಗರ ಸೆಳೆಯುತ್ತಿದ್ದು, ಸಾಹಸಪ್ರಿಯರಿಗೆ ಚಾರಣ ತಾಣವಾಗಿಯೂ, ಭಕ್ತಾದಿಗಳಿಗೆ ಪವಿತ್ರ ತಾಣವಾಗಿಯೂ ಗಮನಸೆಳೆಯುತ್ತಿದೆ.

ಕುಂದಬೆಟ್ಟವು ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರದ ಇನ್ನೂರು ಅಡಿ ಎತ್ತರವಿರುವ ಈ ತಾಣ ತನ್ನ ಸ್ನಿಗ್ಧ ಸೌಂದರ್ಯದಿಂದ ಜನರನ್ನು ಬೆರಗುಗೊಳಿಸುವುದರಲ್ಲಿ ಎರಡು ಮಾತಿಲ್ಲ. ಈ ಬೆಟ್ಟವನ್ನೇರುವುದೇ ಮರೆಯಲಾಗದ ಒಂದು ಅನುಭವ.
ಮೈಮನ ಸೆಳೆಯುವ ಸುಂದರ ನೋಟ
ಕೊಡವ ಭಾಷೆಯಲ್ಲಿ "ಕುಂದ್" ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಗ್ರಾಮದ ಕಣ್ಮಣಿಯೇ ಕುಂದಬೆಟ್ಟ. ಕಲು, ಮುಳ್ಳು ಅಂಕುಡೊಂಕಿನ ಹಾದಿಯ ಮೂಲಕ ಈ ಬೆಟ್ಟವನ್ನೇರುವುದು ಅಷ್ಟು ಸುಲಭವಲ್ಲ.
ಬೆಟ್ಟವನ್ನೇರುತ್ತಾ ಹೋದಂತೆಲ್ಲ ಸುತ್ತಲೂ ಹಸಿರನ್ನೊದ್ದು ಕುಳಿತ ಪರಿಸರ, ಬೀಸುವ ತಂಗಾಳಿ, ಬೆಟ್ಟವನ್ನೇರಲು ಹುರುಪು ನೀಡುತ್ತವೆ. ಬೆಟ್ಟದ ಮೇಲ್ಭಾಗವನ್ನು ತಲುಪಿ ಅಲ್ಲಿ ಒಂದು ಕ್ಷಣ ನಿಂತು ಸುತ್ತಲೂ ದೃಷ್ಟಿ ಹರಿಸಿದರೆ ಬೆಟ್ಟಗಳನ್ನೆಲ್ಲ ಒತ್ತೊತ್ತಾಗಿ ಜೋಡಿಸಿಟ್ಟಂತೆ ಕಾಣಬರುವ ಸುಂದರ ನೋಟ ನೋಡುಗನ ಮೈಮನ ತಣಿಸುತ್ತದೆ.
ಬೆಟ್ಟದ ಮೇಲಿದೆ ಪುರಾತನ ದೇಗುಲ
ದೂರದಲ್ಲಿ ಹರಡಿಕೊಂಡಿರುವ ಪರ್ವತ ಶ್ರೇಣಿಗಳು. ಹಸಿರನ್ನೊಳಗೊಂಡು ಗುಂಪುಗುಂಪಾಗಿ ಕಂಡು ಬರುವ ಕಾನನಗಳು. ಕಾಫಿ ತೋಟಗಳು. ಗದ್ದೆಯ ಬಯಲುಗಳು ಸೇರಿದಂತೆ ಪ್ರಕೃತಿಯ ವಿಹಂಗಮ ನೋಟ ಖುಷಿ ಕೊಡುತ್ತದೆ. ಎಲ್ಲೆಂದರಲ್ಲಿ ಹಸಿರನ್ನು ಚೆಲ್ಲಿದ ದೃಶ್ಯ ಪಟ್ಟಣದ ಜಂಜಾಟದಲ್ಲಿ ತೊಡಗಿಸಿಕೊಂಡವರಿಗೆ ಹೊಸ ಅನುಭವ ನೀಡುತ್ತದೆ.
ಇನ್ನು ಕುಂದಬೆಟ್ಟ ಚಾರಣಿಗರ ಮನ ತಣಿಸುವ ತಾಣ ಮಾತ್ರವಾಗಿರದೇ, ಪವಿತ್ರ ಕ್ಷೇತ್ರವೂ ಇದಾಗಿದೆ. ಇಲ್ಲಿ ಬೊಟ್ಲಪ್ಪ ಈಶ್ವರ ದೇವಾಲಯ, ಭೀಮ ಕಲ್ಲು, ದೇರಟೆ ಕಲ್ಲು, ನರಿಗುಡ್ಡೆ ಮೊದಲಾದ ವೀಕ್ಷಣಾರ್ಹ ಸ್ಥಳಗಳಿವೆ. ಇಲ್ಲಿರುವ ಬೊಟ್ಲಪ್ಪ ಈಶ್ವರ ದೇವಾಲಯ ಪುರಾತನದಾಗಿದ್ದು, ಈ ದೇವಾಲಯ ಹೇಗೆ ನಿರ್ಮಿತವಾಯಿತು ಎಂಬುದಕ್ಕೊಂದು ದಂತ ಕಥೆಯಿದೆ.
ಪಾಂಡವರು ನಿರ್ಮಿಸಿದ ದೇಗುಲ
ವನವಾಸಕ್ಕೆ ತೆರಳಿದ ಪಾಂಡವರು ಕುಂದಬೆಟ್ಟಕ್ಕೆ ಬಂದಿದ್ದರಂತೆ. ಈ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ಭೀಮನು ಕಲ್ಲು ಹೊತ್ತು ತಂದು ದೇವಾಲಯವನ್ನು ಕಟ್ಟಿದನೆಂದೂ ಕೆಲಸ ಸಂಪೂರ್ಣ ಮುಗಿಯುವ ವೇಳೆಗೆ ಬೆಳಗಾದುದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲಿಕ್ಕಾಗಲಿಲ್ಲವಂತೆ. ಆದರೆ ಕೆಲವರ ಅಭಿಪ್ರಾಯದ ಪ್ರಕಾರ ಈ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿತವಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಾತಿಗೆ ಪೂರಕ ಎನ್ನುವಂತೆ ಶಿಲಾಸನದಲ್ಲಿ "ಮನೆಯ ಪಂಡ ಸಂಬ್ರಾಯ" ಎಂಬ ಹೆಸರಿರುವುದು ಕಂಡು ಬರುತ್ತದೆ. ಅದೇನೇ ಇರಲಿ ಈ ದೇವಾಲಯದ ಅಧಿದೇವತೆಯೂ ಆದ ಈಶ್ವರ ಸುತ್ತ ಮುತ್ತಲ ಗ್ರಾಮದ ರಕ್ಷಕನಾಗಿದ್ದಾನೆ.
ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ
ದೇವಾಲಯದ ಮುಂದೆ ಬೃಹತ್ ಶಿಲಾ ಬಂಡೆಯೊಂದು ಹರಡಿಕೊಂಡಿದ್ದು, ಈ ಬಂಡೆಯ ತುದಿಯಲ್ಲಿ ಒಂದು ಉಬ್ಬು ಕಲ್ಲಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿಯಿದೆ. ಹಿಂದೆ ಸುಬ್ರಹ್ಮಣ್ಯ ಸ್ವಾಮಿಯ ನವಿಲು ಈ ಕಲ್ಲಿನ ಮೇಲೆ ನಾಟ್ಯವಾಡಿತ್ತೆಂದೂ ಆದುದರಿಂದಲೋ ಏನೋ ಈ ಕಲ್ಲನ್ನು ದೇರಟೆಕಲ್ಲು ಎಂದು ಕರೆಯುತ್ತಾರೆ.
ದೇರಟೆ ಕಲ್ಲಿನ ವಿಶೇಷತೆ ಹಾಗಿದ್ದರೆ ದೇವಾಲಯದ ಹಿಂಭಾಗದಲ್ಲಿ ಮತ್ತೊಂದು ಬೃಹತ್ ಕಲ್ಲು ಕಂಡು ಬರುತ್ತದೆ. ಇದನ್ನು ಭೀಮನ ಕಲ್ಲು ಎಂದೇ ಕರೆಯುತ್ತಾರೆ. ಬೊಟ್ಲಪ್ಪ ಈಶ್ವರ ದೇವಾಲಯವನ್ನು ನಿರ್ಮಿಸುತ್ತಿದ್ದ ಸಂದರ್ಭ ಭೀಮನೇ ಆ ಬೃಹತ್ ಕಲ್ಲನ್ನು ಹೊತ್ತು ತಂದು ಅಲ್ಲಿಟ್ಟನಂತೆ. ಈ ಕಲ್ಲಿನಲ್ಲಿ ಕಾಲಿನ ಮಂಡಿಯ ಮತ್ತು ಕೈಬೆರಳುಗಳ ಗುರುತು ಕಂಡು ಬರುತ್ತದೆ.
ಬೆಟ್ಟದತ್ತ ಮುಖ ಮಾಡುತ್ತಿರುವ ಪ್ರವಾಸಿಗರು
ಈ ಕಲ್ಲಿನ ಪಕ್ಕದಲ್ಲೇ ಚಿಕ್ಕ ಪೊಟರೆಯೊಂದಿದ್ದು ಹಿಂದೆ ಪಾಂಡವರು ಈ ಪೊಟರೆಯನ್ನು ಅಡುಗೆ ಸಾಮಾನುಗಳನ್ನು ಇಡಲು ಉಪಯೋಗಿಸುತ್ತಿದ್ದರೆಂದು ಕೆಲವರು ಹೇಳುತ್ತಾರೆ. ಈ ಕಲ್ಲನ್ನೇರಿ ಕುಳಿತು ಸೌಂದರ್ಯವನ್ನು ಆಸ್ವಾದಿಸುವುದು ಹೊಸ ಅನುಭವ ನೀಡುತ್ತದೆ.
ದೇವಾಲಯದ ಮುಂಭಾಗಕ್ಕಾಗಿ ಹಾದು ಕಾಡು, ಮೇಡನ್ನೆಲ್ಲಾ ಕ್ರಮಿಸಿದರೆ, ಅಲ್ಲೊಂದು ಬಾಯಿ ತೆರೆದ ಗುಹೆಯೊಂದು ಗೋಚರವಾಗುತ್ತದೆ. ನೆಲಮಾಳಿಗೆಯಂತಿರುವ ಗುಹೆಯಲ್ಲಿ ಕತ್ತಲು ಆವರಿಸಿದ್ದು ಈ ಗುಹೆಯೊಳಗೆ ನುಗ್ಗಿ ಮುನ್ನೆಡೆದರೆ ಅಲ್ಲೊಂದು ಕಿಂಡಿಯಿದ್ದು, ಇದರ ಮೂಲಕ ಪ್ರಕೃತಿ ಸೊಬಗನ್ನು ನೋಡಬಹುದಾಗಿದೆ.
ಮೊದಲೆಲ್ಲ ಕುಂದಬೆಟ್ಟಕ್ಕೆ ತೆರಳುವವರ ಸಂಖ್ಯೆ ಕಡಿಮೆಯಿತ್ತು. ದೇಗುಲದ ಪೂಜೆ, ಜಾತ್ರೆಗೆ ಜನ ತೆರಳುತ್ತಿದ್ದರಾದರೂ ಉಳಿದಂತೆ ಪ್ರಶಾಂತವಾಗಿರುತ್ತಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದಂತೆಯೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications