ದಾವಣಗೆರೆ-ಜೋಗ ವಿಶೇಷ ಟೂರ್ ಪ್ಯಾಕೇಜ್; ಸಮಯ, ದರದ ವಿವರಗಳು
ದಾವಣಗೆರೆ, ಜುಲೈ 10; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗ ಪ್ರವಾಸಿಗರ ಅನುಕೂಲಕ್ಕಾಗಿ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ನೈಋತ್ಯ ಮುಂಗಾರು ಋತುವಿನಲ್ಲಿ ಸಂಚಾರ ನಡೆಸುವ ಜನರಿಗೆ ಅನುಕೂಲವಾಗುವಂತೆ ಈ ಪ್ಯಾಕೇಜ್ ದರ, ಸಮಯವನ್ನು ನಿಗದಿಗೊಳಿಸಲಾಗಿದೆ.
ಈ ವಿಶೇಷ ಪ್ಯಾಕೇಜ್ ಟೂರ್ ಬಸ್‌ಗಳು ದಾವಣಗೆರೆ ಹಾಗೂ ಹರಿಹರದಿಂದ ಶಿವಮೊಗ್ಗದ ಜೋಗ ಮತ್ತು ಶಿರಸಿಗೆ ಪ್ರತಿ ಭಾನುವಾರ ಸಂಚಾರ ನಡೆಸಲಿವೆ. ಜುಲೈ 16 ರಿಂದ ಈ ವಿಶೇಷ ಪ್ಯಾಕೇಜ್ ಟೂರ್ ಸಾರಿಗೆ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಲಾಗಿದೆ.

ವಿಶೇಷ ಟೂರ್ ಪ್ಯಾಕೇಜ್‌ಗೆ ಮುಂಗಡವಾಗಿ ಬುಕ್ಕಿಂಗ್ ಮಾಡಲು ಬಸ್ ನಿಲ್ದಾಣದ ಟಿಕೆಟ್ ಬುಕ್ಕಿಂಗ್ ಕೌಂಟರ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕರಾರಸಾ ನಿಗಮದ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಪ್ಯಾಕೇಜ್ ಸಮಯ ಮತ್ತು ದರ; ಜುಲೈ 16 ರಿಂದ ಪ್ರತಿ ಭಾನುವಾರ ಈ ವಿಶೇಷ ಪ್ಯಾಕೇಜ್ ಟೂರ್ ಆರಂಭವಾಗಲಿದೆ. ಬೆಳಗ್ಗೆ 7 ಗಂಟೆಗೆ ದಾವಣಗೆರೆಯಿಂದ ಬಸ್ ಹೊರಟು 10.30ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30ಕ್ಕೆ ಜೋಗ, ಸಂಜೆ 4.30ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆಗೆ ವಾಪಸ್ ಆಗಲಿದೆ. ಎರಡೂ ಕಡೆಯ ಪ್ರಯಾಣದರ ರೂ. 600 ಮತ್ತು ಮಕ್ಕಳಿಗೆ ರೂ. 450.
ಹರಿಹರದಿಂದ ಬೆಳಗ್ಗೆ 7.30 ಗಂಟೆಗೆ ಬಸ್ ಹೊರಟು 10.30ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30ಕ್ಕೆ ಜೋಗ, ಸಂಜೆ 4.30ಕ್ಕೆ ಜೋಗದಿಂದ ಹೊರಟು ರಾತ್ರಿ 7.30 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕಡೆ ಸೇರಿ ಪ್ರಯಾಣದರ ರೂ. 575 ಮತ್ತು ಮಕ್ಕಳಿಗೆ ರೂ. 430 ನಿಗದಿ ಮಾಡಲಾಗಿದೆ.
ಹುಬ್ಬಳ್ಳಿಯಿಂದಲೂ ಟೂರ್ ಪ್ಯಾಕೇಜ್; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಸಹ ಪ್ರವಾಸಿಗರ ಅನುಕೂಲಕ್ಕಾಗಿ ಹುಬ್ಬಳ್ಳಿ-ಜೋಗ ನಡುವೆ ವಿಶೇಷ ಬಸ್ ಓಡಿಸುತ್ತಿದೆ. ಜುಲೈ 9ರ ಭಾನುವಾರದಿಂದ ಈ ಸೇವೆ ಆರಂಭಿಸಲಾಗಿದೆ. ಪ್ರವಾಸಿಗರು ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಹುಬ್ಬಳ್ಳಿ ಮತ್ತು ಜೋಗ ಜಲಪಾತದ ನಡುವೆ ವಿಶೇಷ ಐಷಾರಾಮಿ ಬಸ್ ಈ ಪ್ಯಾಕೇಜ್ ಅಡಿ ಸಂಚಾರ ನಡೆಸಲಿದೆ. ಪ್ರತಿ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಹುಬ್ಬಳ್ಳಿ-ಜೋಗ ನಡುವೆ ರಾಜಹಂಸ ಹಾಗೂ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಓಡಲಿದೆ.
ಐರಾವತ ವೋಲ್ವೋ ಮಲ್ಟಿ ಆಕ್ಸೆಲ್ ಬಸ್‌ನ ಟೂರ್ ಪ್ರತಿ ಭಾನುವಾರ ಹುಬ್ಬಳ್ಳಿಯಿಂದ ಜೋಗಕ್ಕೆ ಸಂಚಾರ ನಡೆಸುತ್ತದೆ. ಪ್ರಯಾಣ ದರ 600 ರೂ.ಗಳು. ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಬಸ್ 12 ಗಂಟೆಗೆ ಜೋಗ ಜಲಪಾತ ತಲುಪುತ್ತದೆ. ಜೋಗದಿಂದ 5 ಗಂಟೆಗೆ ಹೊರಡುವ ಬಸ್ 9 ಗಂಟೆಗೆ ಹುಬ್ಬಳ್ಳಿಗೆ ತಲುಪಲಿದೆ.
ರಾಜಹಂಸ ಬಸ್ ಟೂರ್ ಪ್ಯಾಕೇಜ್ ಬಸ್ ಪ್ರಯಾಣ ದರ 450 ರೂ.ಗಳು ಎಂದು ನಿಗದಿ ಮಾಡಲಾಗಿದೆ. ಬಸ್ ಹುಬ್ಬಳ್ಳಿಯಿಂದ ಬೆಳಗ್ಗೆ 7.45ಕ್ಕೆ ಹೊರಡುತ್ತದೆ. ಜೋಗ ಫಾಲ್ಸ್ ಅನ್ನು 12 ಗಂಟೆಗೆ ತಲುಪುತ್ತದೆ. 17:00 ಗಂಟೆಗೆ ಜೋಗದಿಂದ ಹೊರಟು 21:30ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ.












Click it and Unblock the Notifications