ತುಮಕೂರು ಜಿಲ್ಲೆಯ ಈ ಗ್ರಾಮಕ್ಕೆ ಕೊನೆಗೂ ಬಂದೇ ಬಿಡ್ತು KSRTC ಬಸ್ಸು, ಸ್ಥಳೀಯರ ಅದ್ಧೂರಿ ಸಂಭ್ರಮಾಚರಣೆ ಹೀಗಿತ್ತು
ತುಮಕೂರು, ಜನವರಿ, 04: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ತುಮಕೂರು ಜಿಲ್ಲೆಯ ಈ ಗ್ರಾಮಕ್ಕೆ ಒಂದೇ ಒಂದು ಬಸ್ ಇದ್ದಿಲ್ಲ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅಲ್ಲಿನ ಜನರು ಕೂಡ ತುಂಬಾ ತೊಂದರೆ ಅನುಭವಿಸಿದ್ದರು. ಇದೀಗ ಎಚ್ಚೆತ್ತ ಅಧಿಕಾರಿಗಳು ಈ ಗ್ರಾಮಕ್ಕೆ ಸಾರಿಗೆ (KSRTC) ಬಸ್ ವ್ಯವಸ್ಥೆ ಕಲ್ಪಿಸಿದ್ದು, ಈ ಹಿನ್ನೆಲೆ ಇಲ್ಲಿನ ಜನರು ಕಳೆದುಹೋದ ಜೀವ ಬಂತು ಎನ್ನುವ ರೀತಿಯಲ್ಲಿ ಅದ್ಧೂರಿಯಾಗಿ ಸಂಭ್ರಮಾವರಣೆ ಮಾಡಿದ್ದಾರೆ.
ಕೊರಟಗೆರೆ ತಾಲೂಕಿನ ನವಿಲುಕುರಿಕೆ ಗ್ರಾಮಕ್ಕೆ ಗೃಹ ಸಚಿವ, ಶಾಸಕ ಡಾ.ಜಿ ಪರಮೇಶ್ವರ್ ಅವರ ಆದೇಶದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್‌ನ ವ್ಯವಸ್ಥೆ ಕಲ್ಪಿಸಿದ್ದು, ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮತ್ತೊಂದೆಡೆ ವಿದ್ಯಾರ್ಥಿಗಳ ಮುಖದಲ್ಲಿ ಎಲ್ಲಿಲ್ಲದ ಸಂತೋಷಭಾಷ್ಪವೇ ಹರಿದುಬಂದಿತು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಮಹತ್ವದ ಕಾರ್ಯಕ್ರಮದಲ್ಲಿ ಅಂದಿನ ತಹಶೀಲ್ದಾರ್ ನಹೀದಾ ಜಮ್‌ಜಮ್ ಅವರಿಗೆ ನವಿಲುಕುರಿಕೆ ಗ್ರಾಮಸ್ಥರು ಬಸ್ ಸಮಸ್ಯೆಯ ಬಗ್ಗೆ ಮನವಿಯನ್ನು ಸಲ್ಲಿಸಿದರು. ಶಾಸಕರ ಗಮನಕ್ಕೆ ತಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಆದೇಶದ ಪತ್ರ ಬರೆದಿದ್ದರು.
ನವಿಲುಕುರಿಕೆ ಗ್ರಾಮದಿಂದ ಬಹುತೇಕ ವಿದ್ಯಾರ್ಥಿಗಳು ತುಮಕೂರು ಸೇರಿದಂತೆ ಕೊರಟಗೆರೆ ಶಾಲೆ-ಕಾಲೇಜುಗಳಿಗೆ ಬಸ್‌ಗಳಿಲ್ಲದ ಕಾರಣ ಯಾವುದೇ ದಾರಿಯಿಲ್ಲದೇ ಕಿಲೋ ಮೀಟರ್‌ಗಟ್ಟಲೇ ನಡೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಅಂದು ನಡೆದ ಜಿಲ್ಲಾಧಿಕಾರಿಗಳ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ ಹಿನ್ನಲೆ ಸಾರಿಗೆ ಅಧಿಕಾರಿಗಳು ಸಚಿವ ಡಾ.ಜಿ.ಪರಮೇಶ್ವರ್ ಆದೇಶದಂತೆ ಸರ್ಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಗ್ರಾಮಸ್ಥರ ಮನವಿಯ ಮೆರೆಗೆ ಸರ್ಕಾರವು ಸಾರಿಗೆ ಇಲಾಖೆಗೆ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ಆದೇಶ ಮಾಡಿತ್ತು. ಬಳಿಕ ಸರ್ಕಾರದ ಆದೇಶದ ಮೇರೆಗೆ ಇಲಾಖೆ ನವಿಲುಕುರಿಕೆ, ದಮಗಲಯ್ಯನ ಪಾಳ್ಯ, ಜಿ.ನಾಗೇನಹಳ್ಳಿ, ಬುರುಗನಹಳ್ಳಿ, ಗೊರವನಹಳ್ಳಿ ಗ್ರಾಮಗಳಿಗೆ ಪ್ರತಿನಿತ್ಯ ಸಂಚರಿಸಲು ವಿಶೇಷ ಸಾರಿಗೆ ಬಸ್‌ನ ವ್ಯವಸ್ಥೆ ಕಲ್ಪಿಸಿದೆ. ಬಳಿಕ ಗ್ರಾಮಸ್ಥರೆಲ್ಲರೂ ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಸರ್ಕಾರಕ್ಕೆ ಮತ್ತು ಸ್ಥಳೀಯ ಶಾಸಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.
"ನಮ್ಮ ಹೋಬಳಿಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ನಡೆಯಿತು. ಆ ವೇಳೆ ತಹಶೀಲ್ದಾರ್ ನಹೀದಾ ಜಮ್‌ಜಮ್ ಅವರಿಗೆ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ ಎಂದು ಮನವಿಯನ್ನ ಸಲ್ಲಿಸಲಾಗಿತ್ತು. ಶಾಸಕ ಜಿ.ಪರಮೇಶ್ವರ್‌ರವರು ನಮ್ಮ ಸಮಸ್ಯೆಯನ್ನು ಅರಿತು ಇದೀಗ ಸಾರಿಗೆ ಬಸ್‌ನ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿದ್ದಾರೆ. ಇಂತಹ ನಾಯಕರು ಕ್ಷೇತ್ರದಲ್ಲಿರುವುದು ನಮ್ಮ ಹೆಮ್ಮೆ," ಎಂದು ಗ್ರಾಮಸ್ಥರು ಹೇಳಿದ್ದಾರೆ ಅಂತಾ ಉದಯವಾಣಿ ವರದಿ ಮಾಡಿದೆ.












Click it and Unblock the Notifications