ಜಿಟಿ..ಜಿಟಿ ಮಳೆ, ಮೈಕೊರೆಯುವ ಚಳಿ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಳೆಗಾಲದ ಮಡಿಕೇರಿ
ಮಡಿಕೇರಿ, ಜುಲೈ 11: ಇತ್ತೀಚೆಗಿನ ವರ್ಷಗಳಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ. ವರ್ಷದ ಎಲ್ಲ ಕಾಲದಲ್ಲಿಯೂ ಪ್ರವಾಸಿಗರು ಇತ್ತ ಮುಖ ಮಾಡಿದ್ದಾರೆ. ಹಿಂದೆ ಹೀಗಿರಲಿಲ್ಲ. ಮಳೆಗಾಲದಲ್ಲಿ ಕೊಡಗಿನತ್ತ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದರು. ಕಾರಣ ಪ್ರವಾಸಿಗರಿಗೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಹಳ್ಳಿಗಳು, ಕಾಡು ಪ್ರದೇಶಗಳು ಹೀಗೆ ಎಲ್ಲಿಗೆ ಹೋದರೂ ಅಲ್ಲಿ ವಾಸ್ತವ್ಯ ಹೂಡಲು ಹೋಂಸ್ಟೇ, ರೆಸಾರ್ಟ್ ಗಳಿವೆ. ಇದರಿಂದಾಗಿ ಮಾನ್ಸೂನ್ ಟೂರಿಸಂನತ್ತ ಪ್ರವಾಸಿಗರ ಒಲವು ಹೆಚ್ಚಾಗುತ್ತಿದೆ.
ಮಳೆ ಎಲ್ಲೆಡೆಯೂ ಸುರಿಯುತ್ತದೆ ಆದರೆ ಅದು ಮಲೆನಾಡಿನಲ್ಲಿ ಸುರಿದಾಗ ಅದರ ವೈಭವ ವರ್ಣಿಸಲಾರದ್ದಾಗಿರುತ್ತದೆ. ಮಲೆನಾಡಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಡೀ ನಿಸರ್ಗ ಪುಳಕಗೊಳ್ಳುತ್ತದೆ. ಅದರಾಚೆಗಿನ ಚೆಲುವು ಇಮ್ಮಡಿಯಾಗುತ್ತದೆ. ಈಗೀಗ ಮಳೆಗಾಲದ ಮಲೆನಾಡಿನತ್ತ ಅದರಲ್ಲೂ ಕೊಡಗಿನತ್ತ ದೂರದ ನಗರ ಪ್ರದೇಶದ ಜನರಿಗೆ ಒಲವು ಹೆಚ್ಚಾಗುತ್ತಿದೆ. ಹೀಗಾಗಿ ಒಂದಷ್ಟು ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿ ಇಲ್ಲಿನ ಮಳೆಗಾಲದಲ್ಲಿ ನೋಡಬಹುದಾದ ತಾಣಗಳಿಗೆ ಮುಗಿ ಬೀಳುತ್ತಿದ್ದಾರೆ.

ಒಮ್ಮೆ ಜಿಟಿ ಜಿಟಿ ಮತ್ತೊಮ್ಮೆ ಭೋರ್ಗರೆದು ಸುರಿಯುವ ಮಳೆ...ಬೀಸುವ ಗಾಳಿ... ಮೈಕೊರೆಯುವ ಚಳಿ... ಅದರಾಚೆಗೆ ಮೋಡ ಕವಿದ ವಾತಾವರಣದಲ್ಲಿ ನಮ್ಮನ್ನಾವರಿಸುವ ಮಂಜಿನ ನಡುವೆ ಹೆಜ್ಜೆ ಹಾಕುವುದೇ ಮಜಾ.. ಇನ್ನು ಮಳೆಗೆ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದು ಮರೆಯಲಾರದ ಅನುಭವ... ಚಳಿಗೆ ಬೆಚ್ಚನೆಯ ಕಾಫಿ ಸವಿಯುವುದು ಮತ್ತೊಂದು ಥ್ರಿಲ್... ಗ್ರಾಮೀಣ ಪ್ರದೇಶಗಳ ಗುಡ್ಡಬೆಟ್ಟಗಳ ನಡುವೆ ಕಾಫಿತೋಟಗಳ ನಡುವಿನ ಸುಂದರ ಪ್ರದೇಶಗಳಲ್ಲಿ ಸಮಯ ಕಳೆಯುವುದು ಹೊಸ ಅನುಭವ.. ಇಂತಹ ಸುಂದರ ಕ್ಷಣಗಳನ್ನು ಮುಂಗಾರು ಹೊರತು ಪಡಿಸಿ ಬೇರೆ ದಿನಗಳಲ್ಲಿ ಅನುಭವಿಸುವುದು ಸಾಧ್ಯವಾಗುವುದಿಲ್ಲ.
ಅದು ಕೊಡಗಿಗೆ ಸಂಕಷ್ಟದ ದಿನಗಳು
2018ರಲ್ಲಿ ಮಹಾಮಳೆಗೆ ಭೂಕುಸಿತವುಂಟಾದ ಪರಿಣಾಮ ಪ್ರವಾಸಿಗರು ಇತ್ತ ಬರಲು ಭಯಪಡುವಂತಾಯಿತು. ನಂತರದ ಎರಡು ವರ್ಷಗಳ ಕಾಲವೂ ಕೊಡಗಿನ ಭೂಕುಸಿತ ಸಂಭವಿಸುತ್ತಲೇ ಹೋಯಿತು. ಅದಾದ ನಂತರ ಕೊರೊನಾ ಕಾಡಿತು. ಹೀಗಾಗಿ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚುವಂತಾಯಿತು. ಪ್ರವಾಸಿಗರು ಕೊಡಗಿನತ್ತ ಮುಖ ಮಾಡಲಿಲ್ಲ. ಪ್ರವಾಸಿಗರನ್ನೇ ನಂಬಿದ್ದ ಕೊಡಗಿನವರು ಸಂಕಷ್ಟಕ್ಕೀಡಾಗುವಂತಾಯಿತು. ಆದರೆ 2022ರ ನಂತರ ಕೊರೊನಾ ಕಡಿಮೆಯಾದ ನಂತರ ಪ್ರವಾಸಿಗರು ಮುಖ ಮಾಡಲಾರಂಭಿಸಿದರು. ಅದರಲ್ಲೂ ಈ ಬಾರಿಯ ಬೇಸಿಗೆಯಲ್ಲಿ ತುಸು ಹೆಚ್ಚೇ ಪ್ರವಾಸಿಗರು ಆಗಮಿಸಿದರು ಎಂದರೆ ತಪ್ಪಾಗಲಾರದು.

ಮಳೆಗಾಲದಲ್ಲಿ ಮೈನವಿರೇಳಿಸುವ ನೋಟ
ಮಳೆಗಾಲದಲ್ಲಿ ಕೊಡಗಿನ ಕಡೆಗೆ ಪ್ರವಾಸಿಗರು ಆಗಮಿಸಲು ಕಾರಣವಿದೆ. ಇಲ್ಲಿನ ಹೋಂಸ್ಟೇ ಗಳಲ್ಲಿ ಮಳೆಗಾಲದಲ್ಲಿ ಪ್ರವಾಸಿಗರಿಗಾಗಿಯೇ ಕೊಡಗಿನ ಖಾದ್ಯಗಳನ್ನು ಮಾಡಿ ಬಡಿಸುತ್ತಾರೆ. ಇನ್ನು ಕೊಡಗಿನ ಮಟ್ಟಿಗೆ ಹೇಳುವುದಾದರೆ ಮಳೆಗಾಲವೆಂದರೆ ಅದು ಬರೀ ಮಳೆಗಾಲವಲ್ಲ ಅದರೊಳಗೆ ಹೊಕ್ಕಿ ನೋಡಿದರೆ ಅಚ್ಚರಿಯ ಹತ್ತಾರು ವಿಚಾರಗಳು ಕುತೂಹಲ ಕೆರಳಿಸುತ್ತವೆ. ಮಳೆಗಾಲಕ್ಕೆ ತೆರೆದುಕೊಳ್ಳುವ ನಿಸರ್ಗ ಸುಂದರಲೋಕವನ್ನು ಸೃಷ್ಟಿಸಿ ನಮ್ಮ ಮುಂದಿಡುತ್ತದೆ. ಬೆಟ್ಟಗುಡ್ಡ ಕಣಿವೆಯನ್ನೆಲ್ಲ ಒಂದು ಮಾಡುವ ಮಂಜು ಒಂದೆಡೆಯಿಂದ ಮತ್ತೊಂಡೆಗೆ ಓಟಕ್ಕೀಳುವ ದೃಶ್ಯ ಮನಮೋಹಕವಾಗಿರುತ್ತದೆ.
ಜನಪ್ರಿಯ ಕೆಸರುಗದ್ದೆ ಕ್ರೀಡಾಕೂಟಗಳು
ಬೇರೆಡೆಗೆ ಹೋಲಿಸಿದರೆ ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಮಳೆಗಾಲದಲ್ಲಿಯೇ ಹೆಚ್ಚಿನ ಕೃಷಿ ಚಟುವಟಿಕೆ ನಡೆಯುತ್ತದೆ. ಇಲ್ಲಿ ಮಳೆಗಾಲದಲ್ಲಿ ಮಳೆಯ ನೀರನ್ನು ಆಶ್ರಯಿಸಿ ಭತ್ತ ಕೃಷಿ ಮಾಡುವುದರಿಂದ ಭತ್ತದ ಬಯಲುಗಳಲ್ಲಿ ಕೃಷಿ ಚಟುವಟಿಕೆಯ ದೃಶ್ಯಗಳು ಅಚ್ಚರಿ ಮೂಡಿಸುತ್ತವೆ. ಇಲ್ಲಿನ ಇನ್ನೊಂದು ವಿಶೇಷತೆ ಗಮನಸೆಳೆಯುತ್ತದೆ. ವರ್ಷಪೂರ್ತಿ ಇಲ್ಲಿನವರು ಒಂದಲ್ಲ ಒಂದು ರೀತಿಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಮಳೆಗಾಲದಲ್ಲಿ ಸುರಿಯುವ ಮಳೆಗೆ ಕೈಕಟ್ಟಿ ಕೂರುವ ಜಾಯಮಾನ ಇಲ್ಲಿನವರದಲ್ಲ. ಸುರಿಯುವ ಮಳೆಯಲ್ಲಿಯೇ ಭತ್ತದ ಗದ್ದೆಯಲ್ಲಿ ಓಟ ಆಟಗಳನ್ನು ಏರ್ಪಡಿಸಿ ಖುಷಿ ಪಡುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಜನಪ್ರಿಯವಾಗುತ್ತಿವೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಮಳೆಗಾಲದಲ್ಲಿ ಕೊಡಗು ತನ್ನದೇ ವೈವಿಧ್ಯತೆಗೆ ತೆರೆದುಕೊಳ್ಳುವುದರಿಂದ ಅದನ್ನು ನೋಡಿ ಖುಷಿ ಪಡುವ ಮನಸ್ಸುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಣಾಮ ಮಳೆಗಾಲದಲ್ಲಿಯೂ ಪ್ರವಾಸಿಗರನ್ನು ಕೊಡಗು ಆಕರ್ಷಿಸಿ ಸುಂದರ ಅನುಭವಗಳ ಬುತ್ತಿಯನ್ನು ಕಟ್ಟಿಕೊಡುತ್ತಿರುವುದಂತು ಸತ್ಯ.












Click it and Unblock the Notifications