ಸಿಂಧನೂರು-ಬೆಂಗಳೂರು ಐಷಾರಾಮಿ 'ಕಲ್ಯಾಣ ರಥ' ಬಸ್; ದರ, ವೇಳಾಪಟ್ಟಿ
ರಾಯಚೂರು, ಆಗಸ್ಟ್ 27; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬೆಂಗಳೂರು ಮತ್ತು ಸಿಂಧನೂರು ನಡುವೆ 'ಕಲ್ಯಾಣ ರಥ' ಹೆಸರಿನ ಐಷಾರಾಮಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಿದೆ. ಆಗಸ್ಟ್ 28ರಂದು ಸಿಂಧನೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬಸ್ ಸೇವೆಗೆ ಚಾಲನೆ ನೀಡಲಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. "ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ಕಲ್ಯಾಣ ರಥ ಐಷರಾಮಿ ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಸೇವೆಗೆ ಆಗಸ್ಟ್ 28ರ ಸೋಮವಾರ ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಲಿದ್ದಾರೆ" ಎಂದು ತಿಳಿಸಿದ್ದಾರೆ.

ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಿದೆ. ಈ ಐಷಾರಾಮಿ ಬಸ್‌ಗೆ 'ಕಲ್ಯಾಣ ರಥ' ಎಂದು ನಾಮಕರಣ ಮಾಡಲಾಗಿದೆ. ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಈ ಸೇವೆಯನ್ನು ಆರಂಭಿಸಲಾಗುತ್ತಿದೆ. ನಂತರ ಸಂಸ್ಥೆಯ ಇತರ ಪ್ರದೇಶಕ್ಕೂ ಈ ಸೇವೆ ವಿಸ್ತರಣೆಯಾಗಲಿದೆ.
ಬಸ್ ವೇಳಾಪಟ್ಟಿ; ಸಿಂಧನೂರು-ಬೆಂಗಳೂರು ನಡುವಿನ ಐಷರಾಮಿ ಕಲ್ಯಾಣ ರಥ ಬಸ್ ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಡಲಿದೆ. ಕಾರಟಗಿ-ಗಂಗಾವತಿ- ಬೂದುಗುಂಪ ಕ್ರಾಸ್-ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಳಗ್ಗೆ ಬೆಂಗಳೂರಿಗೆ 5.30ಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10.15ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ.
'ಕಲ್ಯಾಣ ರಥ' ಐಷಾರಾಮಿ ಬ್ರಾಂಡ್ ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳನ್ನು ಹೊಂದಿದೆ. ಈ ಬಸ್ 350 ಬಿ.ಎಸ್-6 ಇಂಜಿನ್ ಒಳಗೊಂಡಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆಕ್ಷನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಈ ಬಸ್‌ನಲ್ಲಿದೆ.
ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಬಸ್‌ನಲ್ಲಿ ಇದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕಾಗಿ ಈ ಬಸ್ ಸೇವೆ ಆರಂಭಿಸಿದ್ದು, ಪ್ರಯಾಣಿಕರ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications