Get Updates
Get notified of breaking news, exclusive insights, and must-see stories!

ಮನೋಲ್ಲಾಸ ನೀಡುವ ಮಂಡ್ಯದ ಮುತ್ತಿನ ಕೆರೆ: ಇಲ್ಲಿದೆ ಸ್ಥಳದ ಸಂಪೂರ್ಣ ಮಾಹಿತಿ

ಕೆರೆತೊಣ್ಣೂರು ಪ್ರಕೃತಿ ಪ್ರೇಮಿಗಳು ಮೈಮರೆಯುವ ಸ್ಥಳವಾಗಿದೆ. ಒಂದೆಡೆ ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನು ಮತ್ತೊಂದೆಡೆ ದೈವಿಕ ತಾಣವಾಗಿ ಭಕ್ತರನ್ನೂ ಸೆಳೆಯುವ ಮೂಲಕ ಆಸ್ತಿಕ, ನಾಸ್ತಿಕ ಎಲ್ಲರಿಗೂ ಮೆಚ್ಚಿನ ಸ್ಥಳವಾಗಿ ಗಮನಸೆಳೆಯುತ್ತಿದೆ.

ಮಂಡ್ಯ, ಮಾರ್ಚ್‌ 16: ನಗರದ ಜಂಜಾಟದ ಬದುಕಿನಲ್ಲಿ ಕಳೆದು ಹೋದವರು ಬಿಸಿಲ ಬೇಗೆಯಲ್ಲಿ ಮೈಮನವನ್ನು ತಣ್ಣಗಾಗಿಸಿಕೊಳ್ಳುತ್ತಾ ಒಂದಷ್ಟು ಸಮಯವನ್ನು ನೆಮ್ಮದಿಯಾಗಿ ನಿಸರ್ಗದ ನಡುವೆ ಕಳೆಯಬೇಕೆಂಬ ಬಯಕೆ ಹೊಂದಿದ್ದರೆ ಅಂತಹವರಿಗೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಬಳಿಯಿರುವ ಕೆರೆತೊಣ್ಣೂರು ಅತ್ಯಂತ ಪ್ರಸಕ್ತ ಸ್ಥಳವಾಗಿದೆ.

ಕೆರೆತೊಣ್ಣೂರು ಪ್ರಕೃತಿ ಪ್ರೇಮಿಗಳು ಮೈಮರೆಯುವ ಸ್ಥಳವಾಗಿದೆ. ಒಂದೆಡೆ ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನು ಮತ್ತೊಂದೆಡೆ ದೈವಿಕ ತಾಣವಾಗಿ ಭಕ್ತರನ್ನೂ ಸೆಳೆಯುವ ಮೂಲಕ ಆಸ್ತಿಕ, ನಾಸ್ತಿಕ ಎಲ್ಲರಿಗೂ ಮೆಚ್ಚಿನ ಸ್ಥಳವಾಗಿ ಗಮನ ಸೆಳೆಯುತ್ತಿದೆ. ಹೀಗಾಗಿಯೇ ಸದಾ ಪ್ರವಾಸಿಗರು ಇತ್ತ ಆಗಮಿಸುತ್ತಿರುತ್ತಾರೆ. ಬೇಸಿಗೆಯ ದಿನಗಳ ಟ್ರಿಪ್‌ಗೆ ಕೆರೆತೊಣ್ಣೂರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇಲ್ಲಿನ ಮುತ್ತಿನಕೆರೆ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಕೆರೆತೊಣ್ಣೂರಲ್ಲಿ ವಿಶಾಲವಾಗಿ ಹರಡಿರುವ ಮುತ್ತಿನಕೆರೆ ಬಗ್ಗೆ ಹೇಳಲೇ ಬೇಕಾಗುತ್ತದೆ. ಇದನ್ನು ಮುತ್ತಿನಕೆರೆ ಎಂದು ಕರೆದವನು ಸುಬೇದಾರನ ಪುತ್ರ ನಾಸಿರ್‌ಸಿಂಗ್. ಈತ 1746ರಲ್ಲಿ ಕೆರೆತೊಣ್ಣೂರಿನಲ್ಲಿ ನೆಲೆಸಿದ್ದಾಗ ಒಮ್ಮೆ ಅಂದಿನ ರಾಜ ಪರಿವಾರಕ್ಕೆ ಸೇರಿದ ಮಹಿಳೆಯೊಬ್ಬರ ಮುತ್ತಿನ ಆಭರಣ ಕೈಜಾರಿ ಈ ಕೆರೆಯೊಳಗೆ ಬಿತ್ತಂತೆ. ಆದರೆ ಅದು ಕೆರೆಯ ತಳ ಸೇರಿದರೂ ತಿಳಿ ನೀರಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಈಜುಗಾರರು ನೀರಿನಲ್ಲಿ ಮುಳುಗಿ ಹೊರತೆಗೆದರಂತೆ. ಇದನ್ನು ನೋಡಿದ ನಾಸಿರ್‌ಸಿಂಗ್ ಖುಷಿಯಿಂದ ಮೋತಿ ತಲಾಬ್(ಮುತ್ತಿನ ಕೆರೆ) ಎಂದು ಕರೆದನು ಎಂದು ಇತಿಹಾಸ ಹೇಳುತ್ತದೆ.

ಮುತ್ತಿನ ಕೆರೆ ನಿರ್ಮಾಣದ ಇತಿಹಾಸವೇನು?

ಮುತ್ತಿನ ಕೆರೆ ನಿರ್ಮಾಣದ ಇತಿಹಾಸವೇನು?

ಎರಡು ಗುಡ್ಡಗಳಿಗೆ 'ಕಟ್ಟೆ' ಕಟ್ಟಿ ನಿರ್ಮಿಸಲಾಗಿರುವ ಕೆರೆ ಆಳ, ಅಗಲವಿದ್ದು, ಈ ಕೆರೆಯನ್ನು ಯಾವಾಗ ನಿರ್ಮಿಸಲಾಯಿತು ಎಂಬುವುದಕ್ಕೆ ಸೂಕ್ತ ದಾಖಲೆಗಳು ಇಲ್ಲವಾದರೂ ಸಿಗುತ್ತಿಲ್ಲವಾದರೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಯಾದವ ಸಮುದ್ರ ಇದಾಗಿರಬಹುದೆಂಬ ಅಭಿಪ್ರಾಯವೂ ಇರಬಹುದು ಎನ್ನಲಾಗಿದೆ. ಕ್ರಿ.ಶ. 1326ರಲ್ಲಿ ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ಮುಸಲ್ಮಾನ ದೊರೆಗಳು ದಾಳಿ ಮಾಡಿದ ಸಂದರ್ಭ ತಮ್ಮ ರಕ್ಷಣೆಗೆ ಕೆರೆತೊಣ್ಣೂರನ್ನು ಆಶ್ರಯಿಸಿದರು ಹೇಳಲಾಗಿದೆ.

ಇನ್ನು ಹೊಯ್ಸಳರ ಕಾಲದಲ್ಲಿ ಈ ಸ್ಥಳ ಪ್ರಸಿದ್ಧ ಅಗ್ರಹಾರವಾಗಿತ್ತಂತೆ. ಇದನ್ನು ಕೆರೆತೊಣ್ಣೂರನ್ನು ತೊಂಡನೂರು ಅಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ, 'ತೊಂಡೂರು' ಹೀಗೆ ಹಲವು ಹೆಸರಿನಿಂದಲೂ ಕರೆಯಲಾಗುತ್ತದೆ. ಇಷ್ಟೇ ಅಲ್ಲದೆ ಶ್ರೀರಾಮಾನುಜಚಾರ್ಯರು ಮೇಲುಕೋಟೆಗೆ ತೆರಳುವ ಸಂದರ್ಭ ಕೆಲ ಕಾಲ ಇಲ್ಲಿಯೇ ನೆಲೆಸಿದ್ದರೆಂದೂ ಅಲ್ಲದೆ ಇಲ್ಲಿನ ಕೆರೆಯನ್ನು 'ತಿರುಮಲಸಾಗರ'ಎಂಬ ಹೆಸರಿನಿಂದ ಕರೆದಿದ್ದರು ಎಂದು ಹೇಳಲಾಗಿದೆ.

ಇಮ್ಮಡಿ ಬಲ್ಲಾಳನ ಕಾಲದಲ್ಲಿ ದೇವಾಲಯಗಳ ಅಭಿವೃದ್ಧಿ

ಇಮ್ಮಡಿ ಬಲ್ಲಾಳನ ಕಾಲದಲ್ಲಿ ದೇವಾಲಯಗಳ ಅಭಿವೃದ್ಧಿ

ಕೆರೆಯ ಬಳಿಯೇ ಮೇಲಿನಿಂದ ಕೆಳಕ್ಕೆ ಧುಮುಕುವ ಮದಗವಿದ್ದು, ಇಲ್ಲಿ ತಲೆಕೊಟ್ಟು ಸ್ನಾನ ಮಾಡಿದರೆ ಜನ್ಮ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಇಷ್ಟೇ ಅಲ್ಲದೆ, ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಇಲ್ಲಿ ತುಪ್ಪಲೇಶ್ವರ ಎಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದನಂತೆ.

ಮತ್ತೊಂದೆಡೆ ವಿಷ್ಣುವರ್ಧನ ಯುವರಾಜನಾಗಿದ್ದ ಸಂದರ್ಭ ಕೆರೆತೊಣ್ಣೂರನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನೆಂದೂ ಈತ ನಿರ್ಮಿಸಿದ ಐದು ದೇವಾಲಯಗಳಲ್ಲಿ ಇಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯ ಒಂದಾಗಿರಬಹುದೆಂಬ ಅಭಿಪ್ರಾಯವೂ ಇದೆ. ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಹಾಗೂ ಕೈಲಾಸೇಶ್ವರ ದೇವಾಲಯ, ನರಸಿಂಹನ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳ ಅಭಿವೃದ್ಧಿಯಾಗಿದ್ದು, ಹೊಯ್ಸಳರ ಆಳ್ವಿಕೆಯ ಕೊನೆಗಾಲದಲ್ಲಿ ರಾಜ ಮುಮ್ಮಡಿ ಬಲ್ಲಾಳ ಕೆಲವು ಸಮಯ ಇಲ್ಲಿದ್ದನು ಎನ್ನಲಾಗುತ್ತಿದೆ. ಇಲ್ಲಿರುವ ದೇವಾಲಯಗಳ ಅಭಿವೃದ್ಧಿಯನ್ನು ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿ ಮಾಡಲಾಯಿತು ಎಂದು ತಿಳಿದು ಬಂದಿದೆ.

ಕೆರೆಯದಂಡೆಯಲ್ಲಿ ’ನಿಕುಂಬಿನಿ’ ದೇವಾಲಯ

ಕೆರೆಯದಂಡೆಯಲ್ಲಿ ’ನಿಕುಂಬಿನಿ’ ದೇವಾಲಯ

ಕೃಷ್ಣದೇವಾಲಯ ಕೂಡ ವೈಶಿಷ್ಟ್ಯಪೂರ್ಣವಾಗಿದ್ದು, ಇದಕ್ಕೆ ಬೃಹತ್ ಪ್ರವೇಶ ದ್ವಾರವಿದೆ. ಗೋಪುರವು ಬಲ್ಲಾಳರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎನ್ನಲಾಗುತ್ತಿದ್ದು ಗೋಪುರವನ್ನು ವೀರಬಲ್ಲಾಳನ ಗೋಪುರ ಎಂದು ಕರೆಯುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕೃಷ್ಣನ ದೊಡ್ಡ ಮೂರ್ತಿ ಪಕ್ಕದಲ್ಲಿ ರುಕ್ಮಿಣಿ ಸತ್ಯಭಾಮೆಯರ ಚಿಕ್ಕಮೂರ್ತಿಗಳಿವೆ. ವೇಣುಗೋಪಾಲ, ರುಕ್ಮಿಣಿ, ಸತ್ಯಭಾಮೆಯರ ಲೋಹದ ಉತ್ಸವ ಮೂರ್ತಿಗಳೂ ಕೂಡ ಗಮನಸೆಳೆಯುತ್ತವೆ.

ಕೆರೆಯದಂಡೆಯಲ್ಲಿ 'ನಿಕುಂಬಿನಿ' ಎಂಬ ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಶಾಹ ಸಲಾ ಮಸೂದ್ ಘಾಸಿಯ ದರ್ಗಾವೂ ಇಲ್ಲಿದೆ. ಒಟ್ಟಾರೆ ಹಲವು ಮಹತ್ವ ಸಾರುವ ಕೆರೆತೊಣ್ಣೂರು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ತಂಪಾದ ಹವೆ, ಕಣ್ಮನ ತಣಿಸುವ ನಿಸರ್ಗ ಖುಷಿ ಕೊಡುತ್ತದೆ.

ಎಚ್ಚರ ತಪ್ಪಿದರೆ ಪ್ರಾಣಾಪಾಯ ಖಚಿತ

ಎಚ್ಚರ ತಪ್ಪಿದರೆ ಪ್ರಾಣಾಪಾಯ ಖಚಿತ

ಕೆರೆಯ ದಂಡೆಯನ್ನು ಮೆಟ್ಟಿಲಿನಿಂದ ನಿರ್ಮಿಸಲಾಗಿದ್ದು ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ನೀರಿನಲ್ಲಿ ಆಟವಾಡಬಹುದು. ಕೆರೆಯ ಒಂದು ದಡದಲ್ಲಿ ಸ್ನಾನಘಟ್ಟ ಹಾಗೂ ಮಂಟಪವಿದ್ದು ಇದು ಕೆರೆಗೆ ಕಳೆಗಟ್ಟಿದೆ. ಆದರೆ ಸೌಂದರ್ಯಕ್ಕೆ ಮಣಿದು ಈಜಲು ಹೋಗಬಾರದಷ್ಟೆ. ಏಕೆಂದರೆ ಎಚ್ಚರ ತಪ್ಪಿದರೆ ಪ್ರಾಣಾಪಾಯ ಖಚಿತ. ಕೆರೆತೊಣ್ಣೂರು ಪಾಂಡವಪುರದಿಂದ 9ಕಿಮೀ ದೂರದಲ್ಲಿದ್ದು, ಪಾಂಡವಪುರದಿಂದ ಆಟೋ, ಟೆಂಪೋ, ಬಸ್ಸುಗಳಲ್ಲಿ ತೆರಳಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+