Vande Bharat Express: ಕೇರಳಕ್ಕೆ 3ನೇ ವಂದೇ ಭಾರತ್ ರೈಲು, ಮಂಗಳೂರಿಗೆ ಅನುಕೂಲ
ತಿರುವನಂತಪುರ, ಮಾರ್ಚ್ 25: ರೈಲ್ವೆ ಇಲಾಖೆ ಕೇರಳ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲನ್ನು ಕೊಡುಗೆಯಾಗಿ ನೀಡಲಿದೆ. ಸದ್ಯ ಕೇರಳದಲ್ಲಿ ಎರಡು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ರಾಜ್ಯದಲ್ಲಿ ವಂದೇ ಭಾರತ್ ರೈಲಿಗೆ ಉತ್ತಮ ಪ್ರತಿಕ್ರಿಯೆ ಇದ್ದು, ಎರಡು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚಾರವನ್ನು ನಡೆಸುತ್ತಿವೆ. ಹೊಸ ರೈಲು ಸೇವೆ ಪ್ರಾರಂಭವಾದರೆ ಕರ್ನಾಟಕದ ಕರಾವಳಿ ನಗರ ಮಂಗಳೂರು ನಗರಕ್ಕೂ ಉಪಯೋಗವಾಗಲಿದೆ.
ದಕ್ಷಿಣ ರೈಲ್ವೆ ಕೇರಳದಲ್ಲಿ 3ನೇ ವಂದೇ ಭಾರತ್ ರೈಲು ಸಂಚಾರಕ್ಕೆ ತಯಾರಿಯನ್ನು ನಡೆಸಿದೆ. ಎಕ್ಸಿಕ್ಯುಟಿವ್ ಕ್ಲಾಸ್‌ಗಳಿಲ್ಲದೇ ಕೇವಲ ಚೇರ್ ಕಾರ್ ಬೋಗಿಯ ಮೂಲಕ 3ನೇ ವಂದೇ ಭಾರತ್ ರೈಲನ್ನು ಸಂಚಾರ ನಡೆಸಲಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ರೈಲ್ವೆ ಇಲಾಖೆ ಬೋಗಿಗಳನ್ನು ನೀಡಿದ ಬಳಿಕ ಮುಂದಿನ ಮಾಹಿತಿ ತಿಳಿದುಬರಲಿದೆ.

ಕೇರಳದ ಎರಡು ವಂದೇ ಭಾರತ್ ರೈಲುಗಳು ಬೆಳಗ್ಗೆ ಮತ್ತು ಸಂಜೆ ಸಂಪೂರ್ಣ ಭರ್ತಿಯಾಗಿ ಸಂಚಾರವನ್ನು ನಡೆಸುತ್ತಿವೆ. ಈ ಎರಡು ರೈಲುಗಳ ವೇಳಾಪಟ್ಟಿಗೆ ತೊಂದರೆಯಾಗದ ರೀತಿಯಲ್ಲಿ 3ನೇ ರೈಲು ಸಂಚಾರವನ್ನು ರಾಜ್ಯದಲ್ಲಿ ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಯಾವ ಮಾರ್ಗದಲ್ಲಿ ರೈಲು?; ಕೇರಳ ರಾಜ್ಯಕ್ಕೆ 3ನೇ ವಂದೇ ಭಾರತ್ ರೈಲು ಸಿಕ್ಕಿದರೆ ಯಾವ ಮಾರ್ಗದಲ್ಲಿ ಅದನ್ನು ಓಡಿಸಲಾಗುತ್ತದೆ? ಎಂಬ ಕುರಿತು ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳ ಪ್ರಕಾರ ತಿರುವನಂತಪುರ-ಎರ್ನಾಕುಲಂ ಮತ್ತು ಮಂಗಳೂರು-ಶೋರ್ನೂರು ಮಾರ್ಗದಲ್ಲಿ ಹೊಸ ರೈಲು ಸಂಚಾರಕ್ಕೆ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲಾಗುತ್ತಿದೆ.

ಈ ಎರಡು ಮಾರ್ಗದಲ್ಲಿ ರೈಲುಗಳು ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವಂತೆ ಹಳಿಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಸಿಗ್ನಲ್‌ಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಆದರೆ ಯಾವ ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತದೆ? ಎಂಬ ಕುರಿತು ಅಧಿಕಾರಿಗಳು ಸಹ ಖಚಿತವಾದ ಮಾಹಿತಿ ನೀಡಿಲ್ಲ.
ಸದ್ಯ ಕೇರಳದಲ್ಲಿ ರೈಲು ನಂಬರ್ 20631/ 20632 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮತ್ತು ರೈಲು ಸಂಖ್ಯೆ 20633/ 20634 ಕಾಸರಗೋಡು-ತಿರುವನಂತರಪುರಂ ಸೆಂಟ್ರಲ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಎರಡೂ ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚಾರ ಮಾಡುತ್ತಿವೆ.
ಈಗಾಗಲೇ ಕೇರಳದ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ನಡುವೆ ಸಂಚಾರ ನಡೆಸುತ್ತಿದೆ. ಈಗ ಮತ್ತೊಂದು ರೈಲು ಮಂಗಳೂರು-ಶೋರ್ನೂರು ಮಾರ್ಗದಲ್ಲಿ ಸಂಚಾರವನ್ನು ಆರಂಭಿಸಿದರೆ ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ಸಂಪರ್ಕ ಸಿಗಲಿದೆ.
ಕೇರಳ ರಾಜ್ಯದಲ್ಲಿ ವಿವಿಧ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಈಗಾಗಲೇ ಬೇಡಿಕೆ ಇದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಯಾವ ಮಾರ್ಗದಲ್ಲಿ ಮೂಲ ಸೌಕರ್ಯ ಇದೆ ಎಂದು ನೋಡಿಕೊಂಡು ರೈಲನ್ನು ಓಡಿಸುವ ಕುರಿತು ಅಧಿಕಾರಿಗಳು ತೀರ್ಮಾನಿಸಲಿದ್ದಾರೆ.
ಸದ್ಯ ಮಂಗಳೂರು ನಗರಕ್ಕೆ ಎರಡು ವಂದೇ ಭಾರತ್ ರೈಲುಗಳ ಸಂಪರ್ಕವಿದೆ. ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್, ಮಂಗಳೂರು-ಮಡಗಾಂವ್ ರೈಲುಗಳಿವೆ. ಮಂಗಳೂರು-ಶೋರ್ನೂರು ರೈಲು ಆರಂಭವಾದರೆ ಮತ್ತೊಂದು ರೈಲು ಕರಾವಳಿ ನಗರಕ್ಕೆ ಸಿಗಲಿದೆ.
ಪ್ರಸ್ತುತ ಮಂಗಳೂರು ಮತ್ತು ಗೋವಾ ರಾಜ್ಯದ ಮಡಗಾಂವ್ ನಡುವೆ ಸಂಚಾರ ನಡೆಸುವ ರೈಲನ್ನು ಮುಂಬೈ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದು, ಅಧಿಕಾರಿಗಳಿಗೆ ಮುಂದಿನ ಪ್ರಕ್ರಿಯೆಗಾಗಿ ಸೂಚನೆ ಕೊಟ್ಟಿದ್ದಾರೆ. ಈ ರೈಲು ಮುಂಬೈಗೆ ವಿಸ್ತರಣೆಯಾದರೆ ಮಂಗಳೂರು-ಮುಂಬೈ ನಡುವಿನ ಸಂಚಾರದ ಅವಧಿ 12 ಗಂಟೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications