ಕೊಡಗಿನ ಕಾವೇರಿ ನಿಸರ್ಗಧಾಮ ಸದಾ ತಂಪಾಗಿರುವುದೇಕೆ ಗೊತ್ತಾ?
ಮಡಿಕೇರಿ, ಏಪ್ರಿಲ್ 04: ಬಿಸಿಲಿನ ಧಗೆಯಿಂದ ಬಸವಳಿದಿದ್ದ ಕೊಡಗನ್ನು ವರುಣ ತಂಪಾಗಿಸಿದ್ದಾನೆ. ಬಿಸಿಲಿಗೆ ಪ್ರಕೃತಿಯೇ ಮರುಗಿತ್ತು. ಆದರೀಗ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಹೀಗಾಗಿ ಜಿಲ್ಲೆಯೊಳಗಿನ ಪ್ರವಾಸಿ ತಾಣಗಳಲ್ಲಿ ನಡೆದಾಡುವುದು ಖುಷಿಕೊಡುತ್ತಿದೆ. ಅದರಲ್ಲೂ ಚಿಗುರಿನಿಂತ ಬಿದಿರುಮೆಳೆಗಳ ನಡುವೆ ಕಾಲ ಕಳೆಯುವುದು ಒಂಥರಾ ಮಜಾ ನೀಡುತ್ತದೆ. ಅದರಲ್ಲೂ ಬಿದಿರು ಮೆಳೆಗಳನ್ನು ಹೊದ್ದುಕೊಂಡಿರುವ ಕೊಡಗಿನ ಕುಶಾಲನಗರ ಬಳಿಯಿರುವ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡಿದರೆ ಅಲ್ಲಿನ ಪ್ರಾಕೃತಿಕ ಚೆಲುವು ಮನಸ್ಸೆಳೆಯುತ್ತದೆ.
ಹೊರಗೆ ಬಿಸಿಲು ತಲೆ ಸುಡುತ್ತಿದ್ದರೆ ಕಾನದ ನಡುವಿನ ಕಾವೇರಿ ನದಿ ಸೃಷ್ಠಿಸಿಯ ದ್ವೀಪ ಪ್ರದೇಶ ಕಾವೇರಿ ನಿಸರ್ಗಧಾಮ ತಂಪಾದ ಅನುಭವ ನೀಡುತ್ತದೆ. ಇಲ್ಲಿ ಹೆಜ್ಜೆ ಹಾಕುತ್ತಾ ಹೋದರೆ ಬಿಸಿಲಿನ ತಾಪದ ಅರಿವಾಗುವುದಿಲ್ಲ. ಕಾರಣ ಮುಗಿಲೆತ್ತರಕ್ಕೆ ಬೆಳೆದ ಮರಗಳು ಅದರ ನಡುವಿನ ಬಿದಿರುವ ಮೆಳೆಗಳು ಬಿಸಿಲನ್ನು ತಡೆದು ತಂಪಾದ ಅನುಭವ ನೀಡುತ್ತದೆ. ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಇಡೀ ನಿಸರ್ಗಧಾಮ ಬೋಳಾಗಿತ್ತು. ಬಿದಿರು ಮೆಳೆಗಳು ನಾಶ ಹೊಂದಿದ್ದವು. ಆದರೀಗ ಮತ್ತೆ ಬಿದಿರು ಹುಟ್ಟಿ ಬೆಳೆದು ನಿಂತಿರುವುದರಿಂದ ಮತ್ತೆ ಎಂದಿನ ಖುಷಿ ಕೊಡುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಕಾವೇರಿ ನಿಸರ್ಗಧಾಮಕ್ಕೆ ಮತ್ತೆ ಕಳೆ ಬರುತ್ತಿದ್ದು, ಹಳೆಯ ಬಿದಿರು ಮೆಳೆಗಳು ಒಣಗಿ ಹೋಗಿ ಹೊಸದಾಗಿ ಬಿದಿರು ಮೆಳೆಗಳು ಬೆಳೆಯತೊಡಗಿವೆ. ಇದರಿಂದ ಬೇಸಿಗೆಯಲ್ಲೂ ಮುಗಿಲತ್ತ ಬೆಳೆದು ನಿಂತ ಬಿದಿರು ತಂಪಾದ ವಾತಾವರಣವನ್ನು ಸೃಷ್ಟಿಸಿ ಸುಂದರ ವಾತಾವರಣವನ್ನು ನಿರ್ಮಿಸಿದೆ. ನಿಜಹೇಳಬೇಕೆಂದರೆ ಮೂರ್ನಾಲ್ಕು ದಶಕಗಳ ಹಿಂದೆ ಇವತ್ತಿನ ಕಾವೇರಿ ನಿಸರ್ಗಧಾಮವು ದ್ವೀಪಪ್ರದೇಶದ ಕಾಡಾಗಿತ್ತು. ಬಿದಿರು, ಮರಗಳಷ್ಟೆ ಇದ್ದವು. ಪ್ರಾಣಿಗಳು ಪಕ್ಷಿಗಳು ಇಲ್ಲಿದ್ದವು. ಇದರ ಸುತ್ತಲೂ ಕಾವೇರಿ ನದಿ ಹರಿಯುತ್ತಿತ್ತು. ಮನಷ್ಯರಾರು ಇತ್ತ ಹೋಗುವ ಧೈರ್ಯ ಮಾಡುತ್ತಿರಲಿಲ್ಲ.
ತೂಗುಸೇತುವೆ ಕಾವೇರಿ ನಿಸರ್ಗಧಾಮದ ಆಕರ್ಷಣೆ
ಈ ದ್ವೀಪ ಸುಮಾರು 65 ಎಕರೆ ಅರಣ್ಯ ಪ್ರದೇಶ ಹೊಂದಿದ್ದ ಈ ದ್ವೀಪವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬಹುದೆಂಬ ಆಲೋಚನೆ ಅವತ್ತಿನ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ತೋರ್ವೆ ಹಾಗೂ ವಲಯಾಧಿಕಾರಿ ಟಿ.ಎನ್.ನಾರಾಯಣ್ ಅವರಿಗೆ ಬಂದಿತ್ತು. ಅವರ ಸತತ ಪ್ರಯತ್ನದಲ್ಲಿ 1989ರಲ್ಲಿ ಕಾವೇರಿ ನಿಸರ್ಗಧಾಮ ಸೃಷ್ಟಿಯಾಗಿ ಪ್ರವಾಸಿಗರಿಗೆ ದೊರಕುವಂತಾಯಿತು. ಇವತ್ತು ಕೊಡಗಿನ ಪ್ರವಾಸಿತಾಣಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದುವಂತಾಗಿದೆ. ಆದರೆ ಅವತ್ತು ಕಾವೇರಿ ನಿಸರ್ಗಧಾಮದ ಆಕರ್ಷಣೆಯಯಾಗಿದ್ದದ್ದು ತೂಗುಸೇತುವೆ. ಈ ತೂಗುಸೇತುವೆಯಲ್ಲಿ ನಡೆದಾಡಲೆಂದೇ ಜನ ಬರುತ್ತಿದ್ದರು.
ಇವತ್ತು ಇರುವ ತೂಗು ಸೇತುವೆ ಹೊಸದಾಗಿ ನಿರ್ಮಿಸಿದ ಸೇತುವೆ ಆದರೆ ಹಳೆಯ ಸೇತುವೆಯೂ ಇಲ್ಲಿ ಕಾಣಸಿಗುತ್ತದೆ. ಆ ಸೇತುವೆಯನ್ನು ಸುಳ್ಯದ ತೂಗುಸೇತುವೆ ನಿರ್ಮಾತೃರಾದ ಇಂಜಿನಿಯರ್ ಗಿರೀಶ್ ಭಾರಧ್ವಾಜ್ ಅವರು ಮೊದಲ ಬಾರಿಗೆ ನಿರ್ಮಿಸಿದ್ದು, ಕಾವೇರಿ ನದಿ ದಾಟಿ ನಿಸರ್ಗಧಾಮದೊಳಕ್ಕೆ ತೆರಳಲು ತೂಗುಸೇತುವೆ ಪ್ರವಾಸಿಗರಿಗೆ ಸಂಪರ್ಕ ಸೇತುವಾಗಿತ್ತು.. ಈ ತೂಗು ಸೇತುವೆಯಲ್ಲಿ ತೂಗಾಡುತ್ತಾ ನಿಸರ್ಗಧಾಮದೊಳಕ್ಕೆ ಹೋಗಿ ಒಂದಷ್ಟು ಸಮಯ ಕಳೆಯಲು ಜನ ಬರುತ್ತಿದ್ದರು.

ಜಂಜಾಟದ ಬದುಕಿಗೆ ಮನಶಾಂತಿಯ ತಾಣ
ವರ್ಷದಿಂದ ವರ್ಷಕ್ಕೆ ಕಾವೇರಿ ನಿಸರ್ಗಧಾಮ ಅಭಿವೃದ್ಧಿಯಾಗುತ್ತಾ ಹೋಯಿತು. ಆಧುನಿಕ ಶೈಲಿಯ ಆಕರ್ಷಕ ತೂಗು ಸೇತುವೆಯನ್ನು ನಿರ್ಮಾಣ ಮಾಡಿದ ಬಳಿಕ ಹಳೆಯ ತೂಗು ಸೇತುವೆ ಪಳೆಯುಳಿಕೆಯಾಗಿ ಈಗಲೂ ಕಾಣಿಸುತ್ತಿದೆ. ಅಲ್ಲಿಂದ ಇಲ್ಲಿ ತನಕ ಕಾವೇರಿ ನಿಸರ್ಗಧಾಮವು ಹಲವು ರೀತಿಯಲ್ಲಿ ಅಭಿವೃದ್ಧಿಯನ್ನು ಕಂಡಿದೆ.
ಇದರ ಪಕ್ಕದಲ್ಲಿಯೇ ಮತ್ತೊಂದು ದ್ವೀಪವಿದ್ದು ಅದನ್ನು ಕೂಡ ಅಭಿವೃದ್ಧಿಗೊಳಿಸುವ ಮಾತುಗಳು ಹಿಂದೆಯೇ ಕೇಳಿ ಬಂದಿತ್ತು ಆದರೆ ಅದು ಕಾರ್ಯಗತವಾಗಿಲ್ಲ. ಇವತ್ತು ಕಾವೇರಿ ನಿಸರ್ಗಧಾಮದಲ್ಲಿ ಪ್ರವಾಸಿಗರನ್ನು ಸೆಳೆಯಲು ಬೇಕಾದ ಆನೆ ಸಫಾರಿ, ಉಪಹಾರದ ವ್ಯವಸ್ಥೆ, ದೋಣಿ ವಿಹಾರ, ತಂಗಲು ಕಾಟೇಜ್‌ಗಳ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳಿದ್ದು, ಜಂಜಾಟದ ಬದುಕು ಕಟ್ಟಿಕೊಂಡವರು ಒಂದಷ್ಟು ಹೊತ್ತು ಸಮಯ ಕಳೆದು ಬರಲು ಯಾವುದೇ ಅಡ್ಡಿ ಇಲ್ಲ.












Click it and Unblock the Notifications