ದೆಹಲಿಗೆ ಹೊರಟ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಕರ್ನಾಟಕ, ಬೇಡಿಕೆಗಳು
ಮಾರ್ಚ್ 13ರಂದು ದೆಹಲಿಗೆ ಭೇಟಿ ನೀಡಲಿರುವ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ರಾಜ್ಯದ ರೈಲ್ವೆ ಯೋಜನೆಗಳ ಕುರಿತು ಹಲವು ಬೇಡಿಕೆಗಳನ್ನು ಸಲ್ಲಿಕೆ ಮಾಡಲಿದೆ.
ಬೆಂಗಳೂರು, ಮಾರ್ಚ್ 09; ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ (ರಿ) ನಿಯೋಗ ನವದೆಹಲಿಗೆ ಹೊರಟಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳು, ರೈಲ್ವೆ ಇಲಾಖೆಯ ಮಂತ್ರಿಗಳು ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿರುವ ಕರ್ನಾಟಕದ ಸಚಿವರು, ಕರ್ನಾಟಕದಿಂದ ಆಯ್ಕೆಯಾದ ಲೋಕಸಭಾ ಸದಸ್ಯರಿಗೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಪತ್ರವನ್ನು ಸಲ್ಲಿಕೆ ಮಾಡಲಿದೆ. ರಾಜ್ಯದ ರೈಲ್ವೆ ಯೋಜನೆಗಳ ಕುರಿತು ಹಲವು ಬೇಡಿಕೆಗಳನ್ನು ಸಲ್ಲಿಕೆ ಮಾಡಲಿದೆ.
ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಬಹುಕೋಟಿ ರೂಪಾಯಿಗಳ ಆದಾಯ ತಂದುಕೊಡುವ ಬಳ್ಳಾರಿ ರೈಲ್ವೆ ಪ್ರದೇಶಗಳನ್ನು ನೈರುತ್ಯ ರೈಲ್ವೆ ವಲಯದಲ್ಲಿ ಸೇರ್ಪಡೆ ಮಾಡುವಂತೆ ಸತತ 188 ದಿನಗಳವರೆಗೆ ಕೆ. ಎಂ. ಮಹೇಶ್ವರಸ್ವಾಮಿ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡು ಯಶಸ್ವಿಯಾಗಿದೆ. ಇದು ಜನಪರ ಪಕ್ಷಾತೀತ, ಕರ್ನಾಟಕ ರಾಜ್ಯದ ರೈಲ್ವೆ ಅಭಿವೃದ್ಧಿಗಾಗಿ ಶ್ರಮಿಸುವ ಸಂಘಟನೆಯಿದಾಗಿರುತ್ತದೆ.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ದಿನಾಂಕ 13/03/2023ರಂದು ದೆಹಲಿಯಲ್ಲಿ ಮನವಿ ಪತ್ರವನ್ನು ಸಲ್ಲಿಕೆ ಮಾಡಲಿದೆ. ಬಳ್ಳಾರಿ ಮಾರ್ಗವಾಗಿ ನೂತನ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಿರಿ. ಬಳ್ಳಾರಿ-ಗುಂತಕಲ್-ಬೆಂಗಳೂರಿಗೆ ಬೆಳಗ್ಗೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಆರಂಭವಾಗಬೇಕು. ಇದೇ ರೈಲು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ ಬಳ್ಳಾರಿ ತಲುಪಬೇಕು. ಈ ರೈಲನ್ನು ಮುಂಜಾನೆ 4.30ಕ್ಕೆ ಕೊಪ್ಪಳದಿಂದ ಇಲ್ಲವೇ 5 ಗಂಟೆಗೆ ಹೊಸಪೇಟೆಯಿಂದ ಆರಂಭ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.
ರೈಲಿನ ಆರಂಭಕ್ಕೆ ಕಾರಣಗಳು; ಬಳ್ಳಾರಿ ಜಿಲ್ಲಾ ಕೇಂದ್ರವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋಗಲು ಮತ್ತು ರಾತ್ರಿ ಬಳ್ಳಾರಿ ತಲುಪಲು ನೇರ ರೈಲಿನ ಸೌಲಭ್ಯ ದೊರೆಯುತ್ತದೆ. ಈ ರೈಲಿನ ಆರಂಭದಿಂದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆ ಆಂಧ್ರ ಪ್ರದೇಶದ ಅನಂತಪುರದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಹತ್ತಿರದ ಯಲಹಂಕ ನಿಲ್ದಾಣದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರವಿರುತ್ತದೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಜನತೆಗೆ ವಿಮಾನ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಲಾಗಿದೆ.

ನೈರುತ್ಯ ರೈಲ್ವೆ ವಲಯದ ಕೊನೆಯ ನಿಲ್ದಾಣ ಬಳ್ಳಾರಿ ಆಗಿರುತ್ತದೆ. ಬೆಂಗಳೂರಿಗೆ ಮುಂಜಾನೆ ರೈಲಿನ ಬಗ್ಗೆ ಬಹುದಿನಗಳಿಂದ ಬೇಡಿಕೆ ಇರುತ್ತದೆ. ಪ್ರತಿನಿತ್ಯ ಮುಂಜಾನೆ ಶಿವಮೊಗ್ಗ ಬೆಂಗಳೂರಿಗೆ 2 ರೈಲುಗಳಿವೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ, ಬೆಂಗಳೂರಿಗೆ, ಮೈಸೂರಿನಿಂದ ಬೆಂಗಳೂರಿಗೆ, ಚೆನ್ನೈನಿಂದ ಬೆಂಗಳೂರಿಗೆ ರೈಲುಗಳಿವೆ. ಬಳ್ಳಾರಿಯಿಂದ ಮಾತ್ರ ಮುಂಜಾನೆ ರೈಲುಗಳು ಇರುವುದಿಲ್ಲ ಎಂದು ಕ್ರಿಯಾ ಸಮಿತಿ ಹೇಳಿದೆ. ಬೆಂಗಳೂರಿನಲ್ಲಿ ನಿಲುಗಡೆ ಮಾಡಲು ತಾಂತ್ರಿಕ ತೊಂದರೆ ಕಂಡು ಬಂದಲ್ಲಿ, ನಾಯಂಡನಹಳ್ಳಿ / ಕೆಂಗೇರಿಗೆ ರೈಲು ಸಾಗಬಹುದಾಗಿದೆ. ಇಲ್ಲವೇ ಮೈಸೂರಿಗೆ ಹೋಗಬಹುದಾಗಿದೆ. ಗುಂತಕಲ್ ರೈಲು ನಿಲ್ದಾಣದಲ್ಲಿ ನಿಲುಗಡೆ ದೊರೆಯದಿದ್ದಲ್ಲಿ ನೇರವಾಗಿ ಈ ರೈಲು ಅನಂತಪುರದ ಮುಖೇನ ಹೋಗಬಹುದು ಎಂದು ತಿಳಿಸಲಾಗಿದೆ.
ಮೆಮು ರೈಲು ಸೇವೆ ಆರಂಭಿಸಿ; ಗುಂತಕಲ್-ಬಳ್ಳಾರಿ-ಹೊಸಪೇಟೆ ನಡುವೆ ಪ್ರತಿದಿನ 2 ಬಾರಿ ಮೆಮೊ ರೈಲು ಸಂಚಾರ ಆರಂಭವಾಗಬೇಕು. ಗುಂತಕಲ್ ಪ್ರಧಾನ ಜಂಕ್ಷನ್ ಪ್ರದೇಶವಾಗಿದೆ ಹಾಗೂ ಡಿವಿಜನಲ್ ಹೆಡ್‌ಕ್ವಟರ್ ಆಗಿರುತ್ತದೆ. ಈ ರೈಲು ನಿಲ್ದಾಣದಿಂದ ಮುಂಬೈ, ಚೆನ್ನೈ, ಕನ್ಯಾಕುಮಾರಿ, ವಿಶಾಖ ಪಟ್ಟಣ, ಹೌರಾ, ಹೈದರಾಬಾದ್ ಮುಂತಾದ ಕಡೆ ದಿನವೊಂದಕ್ಕೆ 100 ರೈಲುಗಳು ಸಂಚರಿಸುತ್ತದೆ. ಆದರೆ ಗುಂತಕಲ್ ತಲುಪಲು ಜಂಕ್ಷನ್ ಪ್ರದೇಶಗಳಾದ ಬಳ್ಳಾರಿ, ಹೊಸಪೇಟೆಯಿಂದ ಹೆಚ್ಚಿನ ರೈಲುಗಳಿಲ್ಲ. ಕಾರಣ ಈ ಮಾರ್ಗದಲ್ಲಿ ಮೆಮೊ ರೈಲು ಆರಂಭಿಸಲು ಕೋರಲಾಗಿದೆ. ಅವಶ್ಯವೆನಿಸಿದ್ದಲ್ಲಿ ಈ ರೈಲಿನ ಸೌಲಭ್ಯಗಳನ್ನು ಗದಗ, ಹುಬ್ಬಳ್ಳಿಯವರೆಗೆ ವಿಸ್ತರಿಸಬಹುದಾಗಿದೆ ಎಂದು ಮನವಿ ಮಾಡಲಾಗಿದೆ.
ಚಾರ್ ಧಾಮ ಯಾತ್ರೆಯ ಅಂಗವಾಗಿ 2023 ಮೇ ತಿಂಗಳಿನಿಂದ ಮೈಸೂರಿನಿಂದ ಡೆಹರಾಡೂನ್‌ಗೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಆರಂಭಿಸಿರಿ. ನೈರುತ್ಯ ರೈಲ್ವೆ ವಲಯ 2022ರಲ್ಲಿ ಮೈಸೂರಿನಿಂದ ಡೆಹರಾಡೂನ್‌ಗೆ ನೂತನ ಸ್ಪೆಷಲ್ ರೈಲನ್ನು ಮೈಸೂರು, ಬೆಂಗಳೂರು, ತುಮಕೂರು, ಅರಸೀಕೆರೆ, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಬಾಗಲಕೋಟೆ, ಬಿಜಾಪುರ, ಸೊಲ್ಲಾಪುರ ಮಾರ್ಗದಲ್ಲಿ ಓಡಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. 2023ರ ಮೇ ತಿಂಗಳಿನಿಂದ ಈ ರೈಲು ಆರಂಭವಾಗಬೇಕು ಎಂದು ಕೋರಲಾಗಿದೆ.
ನೈರುತ್ಯ ರೈಲ್ವೆ ವಲಯದ ಪ್ರಧಾನ ಕೇಂದ್ರವಾಗಿರುವ ಹುಬ್ಬಳಿಯಿಂದ ಗುಂತಕಲ್ ಮಾರ್ಗವಾಗಿ ಬೀದರ್-ಪರಭನಿಗೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಆರಂಭಿಸಿರಿ. ಕನ್ಯಾಕುಮಾರಿಗೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನೂತನ ರೈಲು ಆರಂಭಿಸಿರಿ. ರಾಮೇಶ್ವರಂಗೆ ಸೂಪರ್ ಫಾಸ್ಟ್ ನೂತನ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಿರಿ. ಮಂಗಳೂರು-ಕಾರವಾರಕ್ಕೆ ಬಳ್ಳಾರಿ ಚಿತ್ರದುರ್ಗ ಹಾಸನ ಮಾರ್ಗವಾಗಿ ನೂತನ ರೈಲನ್ನು ಆರಂಭಿಸಿರಿ ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications