ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ರದ್ದುಗೊಳಿಸಿದ ಕರ್ನಾಟಕ
ಬೆಂಗಳೂರು, ಮಾರ್ಚ್ 08: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ 'ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021' ಅನ್ನು ರದ್ದುಗೊಳಿಸಿದೆ. ಬೈಕ್ ಟ್ಯಾಕ್ಸಿ ಯೋಜನೆಗೆ ರಾಜ್ಯದಲ್ಲಿ ಆಟೋ, ಕ್ಯಾಬ್ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹಸರಿನಲ್ಲಿ ಪುಷ್ಪ ವಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.
ಆದೇಶದ ವಿವರ: ಸರ್ಕಾರದ ಅಧಿಸೂಚನೆ 14/7/2021ರ ಅನ್ವಯ ಸಾರ್ವಜನಿಕ ಸಾರಿಗೆಗಾಗಿ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಒದಗಿಸುವ ಉದ್ದೇಶದಿಂದ, ಮೋಟಾರು ವಾಹನ ಕಾಯ್ದೆ 1988ರ (1998ರ ಕೇಂದ್ರ ಅಧಿನಿಯಮ 59ರ ಕಲಂ 2ರ ಉಪಕಲಂ (1) ಕ್ರಮ ಸಂಖ್ಯೆ: 38(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ನಗರ ಪ್ರದೇಶಗಳಿಗೆ ಅನ್ವಯಿಸುವಂತೆ 'ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021' ಅನ್ನು ಜಾರಿಗೆ ತರಲಾಗಿತ್ತು ಎಂದು ಹೇಳಿದೆ.

ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಅಗತ್ಯತೆ ಮತ್ತು ಜಾರಿಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, BMRCL ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿದಂತೆ ವರದಿಯು ಪೂರಕವಾಗಿರುವುದಿಲ್ಲವೆಂದು ತಿಳಿಸಿದೆ.
ಪ್ರಸ್ತುತ ಕೆಲವು ಖಾಸಗಿ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರಿಗೇತರ (Non-transport) ದ್ವಿಚಕ್ರ ವಾಹನಗಳನ್ನು ಸಾರಿಗೆ (Transport) ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ ಎಂದು ಆದೇಶ ಹೇಳಿದೆ.
ಖಾಸಗಿ ಸಾರಿಗೆ ಕ್ಷೇತ್ರಗಳಲ್ಲಿನ ಇತರ ಆಟೋರಿಕ್ಷಾ, ಮ್ಯಾಕ್ಸಿ ಕ್ಯಾಬ್ ಮತ್ತು ಟ್ಯಾಕ್ಸಿ ಸಂಘಗಳು/ ಚಾಲಕರುಗಳು, ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಹಲವಾರು ಬಾರಿ ಘರ್ಷಣೆಗಳು ನಡೆದು, ಮೊಕದ್ದಮೆಗಳು ದಾಖಲಾಗುತ್ತಿರುವುದನ್ನು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಹಾಗೂ ಮಹಿಳೆಯರಿಗೆ ಈ ಯೋಜನೆ ಅಸುರಕ್ಷಿತವಾಗಿರುವುದನ್ನು ಸಹ ಗಮನಿಸಲಾಗಿದೆ.
ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಗೆ ಮತ್ತು ಪ್ರವರ್ತನ ಚಟುವಟಿಕೆಯ ಸಮರ್ಥ ಕಾರ್ಯನಿರ್ವಹಣೆಗೆ ಈ ಯೋಜನೆಯಿಂದ ಕಷ್ಟವಾಗುತ್ತಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, 'ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021' ಅನ್ನು ಜಾರಿಗೊಳಿಸಿ ಹೊರಡಿಸಲಾದ ಸರ್ಕಾರದ ಅಧಿಸೂಚನೆ ದಿನಾಂಕ14/07/2021 ಅನ್ನು ಈ ಮೂಲಕ ರದ್ದುಗೊಳಿಸಿ ಆದೇಶಿಸಿದೆ ಎಂದು ಹೇಳಿದೆ.
ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯದ ಆಟೋ ಚಾಲಕರು, ಕ್ಯಾಬ್‌ಗಳ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರಲ್ಲಿಯೂ ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆ ಜಾರಿಗೊಳಿಸಿದ ಮೇಲೆ ಬೈಕ್ ಟ್ಯಾಕ್ಸಿಯನ್ನು ನಿಷೇಧಗೊಳಿಸಿ ಎಂದು ಸಾರಿಗೆ ಇಲಾಖೆಯನ್ನು ಒತ್ತಾಯಿಸುತ್ತಿದ್ದರು.
ಓಲಾ, ಊಬರ್ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳು ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುತ್ತಿವೆ. ಈಗ ಸರ್ಕಾರದ ಆದೇಶದಿಂದಾಗಿ ಈ ಕಂಪನಿಗಳಿಗೆ ಅಪಾರವಾದ ನಷ್ಟ ಉಂಟಾಗಲಿದೆ. ಈ ಕುರಿತು ಕಾನೂನು ಹೋರಾಟ ನಡೆಯಲಿದೆಯೇ? ಕಾದು ನೋಡಬೇಕಿದೆ.
ಬೈಕ್ ಟ್ಯಾಕ್ಸಿಗಳ ಚಾಲಕರು ಮಹಿಳೆಯರಿಗೆ ಕಿರುಕುಳ ನೀಡಿದ ಹಲವು ಪ್ರಕರಣಗಳು ಸಹ ನಡೆದಿದ್ದವು. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.












Click it and Unblock the Notifications