Karnataka Budget 2023; ರೈಲ್ವೆ ವಲಯದ ಘೋಷಣೆಗಳು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್‌ನಲ್ಲಿ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಸಿಕ್ಕ ಕೊಡುಗೆ ಏನು?
ಬೆಂಗಳೂರು, ಫೆಬ್ರವರಿ 17; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಒಟ್ಟು ಬಜೆಟ್ ಗಾತ್ರ 309182 ಕೋಟಿ ರೂ. ಆಗಿದೆ. ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಶುಕ್ರವಾರ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಿದರು. ಬಜೆಟ್‌ನಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಕಾಮಗಾರಿ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ಹಂಚಲಾಗಿದೆ. ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ರಾಜ್ಯ ಸರ್ಕಾರವು ರೈಲ್ವೆ ಮಂತ್ರಾಲಯದೊಂದಿಗೆ 50:50 ರ ವೆಚ್ಚ ಹಂಚಿಕೆ ಆಧಾರದಲ್ಲಿ 9 ಹೊಸ ರೈಲ್ವೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ರಾಜ್ಯ ಸರ್ಕಾರವು ನಿರ್ಮಾಣ ವೆಚ್ಚದ ಪಾಲನ್ನು ಒದಗಿಸುವುದಲ್ಲದೇ, ಎಲ್ಲಾ ಯೋಜನೆಗಳಿಗೆ ಭೂ ಸ್ವಾಧೀನದ ವೆಚ್ಚವನ್ನು ಸಹ ಭರಿಸಲಿದೆ. ಈ ವರ್ಷದ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಕರ್ನಾಟಕದ ರೈಲು ಜಾಲವನ್ನು ಅಭಿವೃದ್ಧಿಪಡಿಸಲು 7,561 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.

ಯಾವ ರೈಲು ಯೋಜನೆಗೆ ಎಷ್ಟು ಅನುದಾನ?
ಬಸವರಾಜ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರವು ಈ ವರ್ಷದಲ್ಲಿ ತುಮಕೂರು-ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ 220 ಕೋಟಿ ರೂ., ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ., ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ 210 ಕೋಟಿ ರೂ., ಮುನಿರಾಬಾದ್-ಗಿಣಿಗೇರಾ- ರಾಯಚೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ., ಗದಗ-ವಾಡಿ ರೈಲ್ವೆ ಮಾರ್ಗಕ್ಕೆ 200 ಕೋಟಿ ರೂ., ತುಮಕೂರು-ರಾಯದುರ್ಗ ರೈಲ್ವೆ ಮಾರ್ಗಕ್ಕೆ 225 ಕೋಟಿ ರೂ. ಒಳಗೊಂಡಂತೆ ಎಲ್ಲಾ ಹೊಸ ರೈಲ್ವೆ ಕಾಮಗಾರಿಗಳಿಗೆ ಒಟ್ಟಾರೆಯಾಗಿ 1,537 ಕೋಟಿ ರೂ. ಗಳನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದರು.

ಜೋಡಿ ಹಳಿಗಳ ನಿರ್ಮಾಣಕ್ಕೆ ಆದ್ಯತೆ
ಬಸವರಾಜ ಬೊಮ್ಮಾಯಿ ಡಬ್ಲಿಂಗ್ ಕಾಮಗಾರಿಗಳಿಗೂ ಸಹ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಬೈಯ್ಯಪ್ಪನಹಳ್ಳಿ-ಹೊಸೂರು 100 ಕೋಟಿ ರೂ., ಹುಬ್ಬಳ್ಳಿ-ಚಿಕ್ಕಜಾಜೂರು 150 ಕೋಟಿ ರೂ., ಹೊಸಪೇಟೆ- ಹುಬ್ಬಳ್ಳಿ-ಲೋಂಡಾ-ವಾಸ್ಕೋ-ಡ-ಗಾಮ 400 ಕೋಟಿ ರೂ., ಗದಗ-ಹೋಟಗಿ 170 ಕೋಟಿ ರೂ., ಕೆ. ಆರ್. ಪುರ-ವೈಟ್‌ಫೀಲ್ಡ್ ಒಳಗೊಂಡಂತೆ ಎಲ್ಲಾ ಜೋಡಿಹಳಿ ಕಾಮಗಾರಿಗಳಿಗೆ ಈ ವರ್ಷದಲ್ಲಿ 1,490 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯವಿರುವ ರಾಜ್ಯ ಸರ್ಕಾರದ ಪಾಲನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಬಜೆಟ್‌ನಲ್ಲಿ ಘೋಷಣೆ ಮಾಡಿದ ಅನುದಾನ
ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ತುಮಕೂರು-ರಾಯದುರ್ಗ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡಚಿ ಮತ್ತು ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗಗಳ ಮೂಲ ಅಂದಾಜು 2,880 ಕೋಟಿ ರೂ. ಗಳಿದ್ದು, ಕಳೆದ ವರ್ಷದಲ್ಲಿ ಇದನ್ನು 5,838 ಕೋಟಿ ರೂ. ಗಳಿಗೆ ಪರಿಷ್ಕರಿಸಲಾಗಿದ್ದು, ಇದಕ್ಕೆ 960 ಕೋಟಿ ರೂ. ಗಳ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದರು. ಬೆಳಗಾವಿ-ಕಿತ್ತೂರು- ಧಾರವಾಡ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನಕ್ಕಾಗಿ 150 ಕೋಟಿ ರೂ.ಗಳನ್ನು ಈ ವರ್ಷದಲ್ಲಿ ಒದಗಿಸಲಾಗುವುದು ಎಂದು ಘೋಷಣೆ ಮಾಡಿದರು.

ಬೆಂಗಳೂರು ಉಪನಗರ ರೈಲು ಯೋಜನೆ
ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯವು 15,767 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹಸಿರು ನಿಶಾನೆ ನೀಡಿವೆ.
ಈಗಾಗಲೇ ಮೊದಲನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, 2024-255 ವರ್ಷದಲ್ಲಿ ಯೋಜನೆಯ ಪೂರ್ಣಗೊಳಿಸಲಾಗುವುದು. ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 1,350 ಕೋಟಿ ರೂ. ಗಳು ಹಾಗೂ ರಾಜ್ಯ ಸರ್ಕಾರದಿಂದ 1,000 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು ಎಂದು ಘೋಷಣೆ ಮಾಡಿದರು.












Click it and Unblock the Notifications