ಕಲಬುರಗಿ: ರೈಲ್ವೆ ಹಳಿ ಮೇಲೆ ಬಿದ್ದ ಬೃಹತ್ ಬಂಡೆ, 2 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತ
ಕಲಬುರಗಿ, ಜೂನ್, 12: ಹಳಿಯ ಪಕ್ಕದಲ್ಲಿ ಬೃಹತ್ ಗಾತ್ರದ ಬಂಡೆ ಬಿದ್ದು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಕಮಲಾಪುರ ತಾಲೂಕಿನ ಮರಗುತ್ತಿ ಬಳಿ ನಡೆದಿದೆ.
ಭಾನುವಾರ (ಜೂನ್ 11) ಸಂಜೆ ಬೀದರ್-ಕಲಬುರಗಿ ಪ್ಯಾಸೆಂಜರ್ ರೈಲು ಕಮಲಾಪುರ ತಾಲೂಕಿನ ಮರಗುತ್ತಿ ಸುರಂಗ ಮಾರ್ಗದಲ್ಲಿ ಸಂಚರಿತ್ತಿದ್ದ ವೇಳೆ ಹಳಿಯ ಪಕ್ಕದಲ್ಲಿ ಬೃಹತ್ ಬಂಡೆ ಬಿದ್ದಿತ್ತು. ಬಳಿಕ ಎಚ್ಚೆತ್ತ ರೈಲ್ವೆ ಸಿಬ್ಬಂದಿ ರೈಲನ್ನು ತಡೆದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಇನ್ನು ಈ ವೇಳೆ ಸತತ ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ರೈಲು ಸುರಂಗ ಮಾರ್ಗದ ಮೂಲಕ ಹಾದು ಹೋಗುತ್ತಿದ್ದಾಗ ಪಕ್ಕದಲ್ಲೇ ಇರುವ ಹಳಿಯ ಬಳಿ ಬೃಹತ್ ಬಂಡೆಯೊಂದು ಸಡಿಲಗೊಂಡು ಬಿದ್ದಿದೆ. ಇದರಿಂದ ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ರೈಲ್ವೆ ಸಿಬ್ಬಂದಿ ಹಳಿ ಮೇಲಿದ್ದ ಬಂಡೆಯನ್ನು ತೆರವುಗೊಳಿಸಿದ್ದು, ನಂತರ ರೈಲು ಬೀದರ್‌ನಿಂದ ಕಲಬುರಗಿಗೆ ಪ್ರಯಾಣ ಬೆಳೆಸಿತು ಎಂದು ತಿಳಿದುಬಂದಿದೆ.
ಇನ್ನು ಇತ್ತೀಚೆಗಷ್ಟೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲು ತುಮಕೂರಿನ ಸಿದ್ಧಗಂಗಾ ಮಠದ ಬಳಿ ಏಕಾಏಕಿ ಕೆಟ್ಟು ನಿಂತಿತ್ತು. ಬೆಳಗ್ಗೆಯಿಂದ ಮಧ್ಯಾಹ್ನ ಆದರೂ ಕೂಡ ಈ ರೈಲು ನಿಂತಲ್ಲೇ ನಿಂತಿದ್ದು, ಇದರಿಂದ ಬೇಸತ್ತ ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರೈಲು ಸತತವಾಗಿ 3 ತಾಸುಗಳ ಕಾಲ ನಿಂತಲ್ಲೇ ನಿಂತಿದ್ದು, ಇದರಿಂದ ಕಾದು ನೀಮತ ಸಾವಿರಾರು ಪ್ರಯಾಣಿಕರು ಬೇಸತ್ತು ಹೋಗಿದ್ದರು. ಮತ್ತೊಂದೆಡೆ ಪ್ರಯಾಣಿಕರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಕೌಂಟರ್ನಿಂದ ಸಿಬ್ಬಂದಿ ತಪ್ಪಿಸಿಕೊಂಡು ಹೋದ ಘಟನೆಯೂ ನಡೆದಿತ್ತು.












Click it and Unblock the Notifications