ಚಾಮರಾಜನಗರದ ಕೆ.ಗುಡಿ..ಇದು ನಿಸರ್ಗ ಪ್ರೇಮಿಗಳಿಗೆ ಪ್ರಕೃತಿ ಧಾಮ!
ಚಾಮರಾಜನಗರ, ಮಾರ್ಚ್ 15: ನಿಸರ್ಗ ಸುಂದರ ಚಾಮರಾಜನಗರವು ಹತ್ತು ಹಲವು ಸುಂದರ ತಾಣಗಳನ್ನು ಹೊಂದಿದ್ದು ನಿಸರ್ಗ ಪ್ರೇಮಿಗಳಿಗೆ ರಸದೂಟ ಬಡಿಸುತ್ತಾ ಬರುತ್ತಿದೆ. ಇಲ್ಲಿರುವ ಪ್ರಾಕೃತಿಕ ಚೆಲುವಿನ ತಾಣಗಳಲ್ಲಿ ಕ್ಯಾತದೇವರ ಗುಡಿ ಅರ್ಥಾತ್ ಕೆ.ಗುಡಿಯು ಪ್ರಕೃತಿಧಾಮವಾಗಿ ಗಮನಸೆಳೆಯುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ನಿಸರ್ಗದ ನಡುವೆ ಬೆರೆತು ತಮ್ಮ ನಿತ್ಯದ ಜಂಜಾಟ ಮರೆತು ಹಗುರವಾಗುತ್ತಾರೆ. ಹೀಗಾಗಿಯೇ ಇಲ್ಲಿಗೆ ಪ್ರವಾಸಿಗರು ಆಗಾಗ್ಗೆ ಬರುತ್ತಲೇ ಇರುತ್ತಾರೆ.
ಕೆ.ಗುಡಿಯು ಬೆಟ್ಟಗುಡ್ಡ ಮತ್ತು ಹಸಿರು ಕಾಡು ಹೊಂದಿದ ಪ್ರದೇಶವಾಗಿದ್ದು, ಪಕ್ಷಗಳಿಗೆ ಆಶ್ರಯತಾಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಹಲವಾರು ಬಗೆಯ ಪಕ್ಷಿಗಳು ಪತ್ತೆಯಾಗಿದ್ದು, ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಇದು ಅಧ್ಯಯನ ಕೇಂದ್ರ ಎಂದರೂ ತಪ್ಪಾಗಲಾರದು. ಇಲ್ಲಿಗೆ ಭೇಟಿ ನೀಡಿದವರಿಗೆ ಆನೆ ಸಫಾರಿ, ವಾಹನ ಸಫಾರಿಯಿದ್ದು, ಆನೆ, ಹುಲಿ, ಜಿಂಕೆ, ಕಾಡೆಮ್ಮೆ, ಕರಡಿ ಹೀಗೆ ಹಲವು ಬಗೆಯ ವನ್ಯಪ್ರಾಣಿಗೂ ಆಶ್ರಯತಾಣವಾಗಿದೆ.

ಚಾಮರಾಜನಗರದ ಪೂರ್ವಕ್ಕಿರುವ ಕೆ.ಗುಡಿ ಸಮುದ್ರಮಟ್ಟದಿಂದ 1450 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ಬಹಳಷ್ಟು ಪಕ್ಷಿಗಳು ಇಲ್ಲಿ ಕಾಣಿಸಿಕೊಂಡು ಪಕ್ಷಿಪ್ರಿಯರನ್ನು ಸೆಳೆದಿವೆ. ಹೀಗಾಗಿಯೇ ಕೆ.ಗುಡಿಗೆ ಪ್ರಾಣಿ ಮತ್ತು ಪಕ್ಷಿಪ್ರಿಯರು ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗೆ ಬಂದವರು ಇಲ್ಲಿ ಅಡ್ಡಾಡಿ ವಿವಿಧ ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಮತ್ತು ಅವುಗಳ ವಿಶೇಷತೆಯನ್ನು ಅರಿತುಕೊಂಡು ಹೋಗುವುದು ಮಾಮೂಲಿಯಾಗಿದೆ. ಹೀಗಾಗಿಯೇ ಪ್ರಾಣಿ, ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಹೇಳಿ ಮಾಡಿಸಿದ ತಾಣವಾಗಿ ಗಮನಸೆಳೆಯುತ್ತಾ ಬಂದಿದೆ.
ಪಕ್ಷಿಗಳ ಆಶ್ರಯತಾಣವಾಗಿರುವ ಕೆ.ಗುಡಿ
ಹಾಗೆನೋಡಿದರೆ ಕೆ.ಗುಡಿ ಅರಣ್ಯವಲಯದಲ್ಲಿ ಹಲವು ಬಗೆಯ ಪಕ್ಷಿಗಳು ಇಲ್ಲಿದ್ದು, ತಮ್ಮ ಆವಾಸ ಸ್ಥಾನವನ್ನು ಇವು ಆಗಾಗ್ಗೆ ತಮ್ಮ ಇರುವಿಕೆಯನ್ನು ವೀಕ್ಷಕರ ಕ್ಯಾಮರಾಗಳಲ್ಲಿ ಸೆರೆಯಾಗುವ ಮೂಲಕ ಖಚಿತಪಡಿಸುವುದು ಕಂಡು ಬರುತ್ತಿದೆ. ಇದೆಲ್ಲದರ ನಡುವೆ ಕೆ.ಗುಡಿಯಲ್ಲಿರುವ ಅರಣ್ಯ ಇಲಾಖೆಯ ಕಟ್ಟಡಗಳು ವನ್ಯಪ್ರಾಣಿಗಳ ಚಿತ್ರಗಳಿಂದ ಆವೃತವಾಗಿ ಗಮನಸೆಳೆಯುತ್ತದೆ. ಇದು ಇಲ್ಲಿನ ಸಫಾರಿಗೆ ಬರುವ ಪ್ರಾಣಿಪ್ರಿಯರನ್ನು ಆಕರ್ಷಿಸುತ್ತದೆ. ಮೇಲ್ನೋಟಕ್ಕೆ ಬರೀ ಚಿತ್ರವಾಗಿ ಗೋಚರಿಸಿದರೂ ಇದರ ಹಿಂದೆ ಹಲವಾರು ವಿಶೇಷತೆ ಇರುವುದನ್ನು ನಾವು ಕಾಣಬಹುದಾಗಿದೆ.

ಈ ಚಿತ್ರಗಳು ಸಫಾರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವುದಷ್ಟೆ ಅಲ್ಲದೆ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಇಲ್ಲಿನ ಸಫಾರಿ ಕೌಂಟರ್ ಕಟ್ಟಡ, ವಿವಿಧ ಗೋಡೆಗಳು, ದಾರಿ ಮಧ್ಯೆ ಸಿಗುವ ಫಲಕಗಳಲ್ಲಿ ಬಿಆರ್ಟಿ ವ್ಯಾಪ್ತಿಯಲ್ಲಿ ಕಂಡು ಬರುವ ಹುಲಿ, ಆನೆ, ಚಿರತೆ, ಕಾಡೆಮ್ಮೆ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳಲ್ಲದೆ, ಬಿಆರ್ಟಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಈ ಚಿತ್ರಗಳನ್ನು ಬಿಡಿಸಿ ಮೂರ್ನಾಲ್ಕು ವರ್ಷಗಳೇ ಕಳೆದು ಹೋಗಿವೆ.
ಕಾಂಕ್ರಿಟ್ ಕಾಡುಗಳಿಂದ ಹಸಿರ ಕಾನನಕ್ಕೆ ಬನ್ನಿ
ಈ ಚಿತ್ರಗಳ ಬೆನ್ನತ್ತಿ ಹೋದರೆ ಇವುಗಳೆಲ್ಲವೂ ತೈಲ ವರ್ಣದ ಚಿತ್ರಗಳಾಗಿದ್ದು, ನೈಜ ಪ್ರಾಣಿಗಳೇ ನಮ್ಮೆದುರು ನಿಂತಂತೆ ಗೋಚರಿಸುತ್ತದೆ. ಇಂತಹ ಸುಂದರ ಚಿತ್ರಗಳನ್ನು ತಮ್ಮ ಕುಂಚದಿಂದ ಬರೆದಿರುವುದು ಚಿತ್ರದುರ್ಗದ ಕಲಾವಿದ ನಾಗರಾಜು ಎಂದು ಹೇಳಲಾಗಿದೆ. ಇದನ್ನು ನೋಡುತ್ತಿದ್ದರೆ ಅವರು ಬರೀ ಪ್ರಾಣಿ ಪಕ್ಷಿಗಳ ಚಿತ್ರವನ್ನಷ್ಟೆ ಬಿಡಿಸಿಲ್ಲ. ಅದಕ್ಕೊಂದು ಜೀವ ತುಂಬುವಲ್ಲಿಯೂ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಫಾರಿಗೆ ತೆರಳಿದವರಿಗೆ ಕೆಲವೊಮ್ಮೆ ಪ್ರಾಣಿಗಳು ನೋಡಲು ಸಿಕ್ಕಿಲ್ಲ ಎಂಬ ಕೊರಗನ್ನು ಈ ಚಿತ್ರಗಳು ದೂರ ಮಾಡಿದರೂ ಅಚ್ಚರಿಯಿಲ್ಲ.

ನಗರದ ಜೀವನ, ಕೆಲಸದ ಒತ್ತಡ ಹೀಗೆ ಸದಾ ಕಾಂಕ್ರಿಟ್ ಕಾಡುಗಳ ನಡುವೆ ಜೀವನ ಸಾಗಿಸುವವರು ಮೈಮನವನ್ನು ನಿಸರ್ಗಕ್ಕೆವೊಡ್ಡಿ ಹಗುರವಾಗಲು ಕೆ.ಗುಡಿ ಹೇಳಿ ಮಾಡಿಸಿದ ತಾಣಗಳಲ್ಲೊಂದು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗಾಗಿ ಸಮಯ ಸಿಕ್ಕರೆ ಎಲ್ಲಿಗೆ ಹೋಗುವುದಪ್ಪಾ ಎಂದು ಯೋಚಿಸುತ್ತಿದ್ದರೆ ಕೆ.ಗುಡಿಯತ್ತ ಪ್ರಯಾಣ ಬೆಳೆಸಿ. ನಿಜ ಹೇಳಬೇಕೆಂದರೆ ಚಾಮರಾಜನಗರದಲ್ಲಿ ನಿಸರ್ಗ ಸುಂದರ ಹಲವು ತಾಣಗಳಿರುವುದರಿಂದ ಎಲ್ಲ ತಾಣಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.












Click it and Unblock the Notifications