ಹಣಕೋಣ: ಕುಡುಕರ ಅಡ್ಡೆಯಾಗಿದ್ದ ಭೀಮಕೋಲ ಕೆರೆ ಪ್ರೇಕ್ಷಣೀಯ ಸ್ಥಳವಾಗಿದ್ದು ಹೇಗೆ?: ಇಲ್ಲಿದೆ ಮಾಹಿತಿ
ಕಾರವಾರ, ಮಾರ್ಚ್, 20: ಕಾರವಾರ ತಾಲೂಕಿನ ಹಣಕೋಣ ವ್ಯಾಪ್ತಿಯ ಭೀಮಕೋಲ ಕೆರೆಯು ಕೆಲ ವರ್ಷಗಳ ಹಿಂದೆ ಪಾಳುಬಿದ್ದಿತ್ತು. ಅಲ್ಲದೆ ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದು ಕುಡುಕರ ಪಾಲಿಗೆ ಇದು ಪ್ರಮುಖ ಅಡ್ಡವಾಗಿ ಮಾರ್ಪಟ್ಟಿತ್ತು. ಆದರೆ ಇದೀಗ ಇದು ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಯೋಜಿತ ಕೆಲಸದಿಂದಾಗಿ ಪ್ರವಾಸಿಗರ ಪಾಲಿಗೆ ನೆಚ್ಚಿನ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದೆ.
ಕಾರವಾರ ತಾಲೂಕಿನ ಹಣಕೋಣ ವ್ಯಾಪ್ತಿಯ ಭೀಮಕೋಲ ಕೆರೆ ಇಂತಹದೊಂದು ಆಕರ್ಷಣೆಯಿಂದಾಗಿ ನಿತ್ಯವೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಲ್ಲಿನ ಹಚ್ಚ ಹಸಿರಿನ ಪರಿಸರ, ವಿಶಾಲವಾದ ಕೆರೆ, ಹಾರಾಡುವ ಮೋಡಗಳ ಪ್ರಕೃತಿ ಸೌದರ್ಯದ ಜೊತೆಗೆ ಕೆರೆಯಂಚಿನ ದಡದಲ್ಲಿ ಚಿರೆಕಲ್ಲಿನ ಹಾಸು ನಿರ್ಮಿಸಿ ಮಧ್ಯದಲ್ಲಿ ಹುಲ್ಲಿನ ಹಾಸು ಬೆಳೆಸಲಾಗಿತ್ತು. ಅಲ್ಲದೆ ವಾಕಿಂಗ್ ಪಾತ್, ದಡದುದ್ದಕ್ಕೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು. ಇದರಿಂದ ಭೀಮಕೋಲ್ ಕೆರೆಯತ್ತ ಸಾಕಷ್ಟು ಪ್ರವಾಸಿಗರು ಕಿಕ್ಕಿರಿದು ಬರುತ್ತಲೇ ಇದ್ದಾರೆ.

ಆದರೆ ಇದೀಗ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗದಿಂದ ಇದೇ ಕೆರೆ ಬಳಿ ಪಂಚವಟಿ ವನ, ರಾಶಿ ವನ, ನವಗ್ರಹ ವನ, ಚಿಟ್ಟೆ ಉದ್ಯಾನವನ್ನು ಕೂಡ ನಿರ್ಮಿಸಲಾಗಿದೆ. ಅಲ್ಲದೆ ಕೆರೆ ಬಳಿ ತೆರಳಲು ಚೀರೆಕಲ್ಲಿನ ಹಾಸಿನ ಮೆಟ್ಟಿಲುಗಳನ್ನು ಮಾಡಲಾಗಿದೆ. ಜೊತೆಗೆ ಕೆರೆ ಪಕ್ಕದಲ್ಲಿಯೇ ಒಂದು ಕುಟೀರದ ರೀತಿಯಲ್ಲಿ ಇನ್ನೊಂದನ್ನು ಅಣಬೆ ಆಕಾರದಲ್ಲಿ ಗೋಪುರ ಮಾಡಿ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
14.5 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ
ಇನ್ನು ಭೀಮಕೋಲ ಕೆರೆ ಅಭಿವೃದ್ಧಿಗೆ ಈ ಹಿಂದಿನ ಜಿಲ್ಲಾಪಂಚಾಯಿತಿ ಸಿಇಓ ಪ್ರಿಯಾಂಕ ಎಂ ಅವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ನೀಡಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಬಳಿಕ ಸಾಕಷ್ಟು ಪ್ರವಾಸಿಗರು ತೆರಳುವುದರಿಂದ ಇದರ ಪಕ್ಕದ ಅರಣ್ಯ ಇಲಾಖೆ ಜಾಗದಲ್ಲಿಯೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ 14.5 ಲಕ್ಷ ಅನುದಾನದಲ್ಲಿ ಈ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಅದೇ ಹೆಸರಿನಲ್ಲಿ ಪಂಚ ಗಿಡಗಳನ್ನು ನೆಟ್ಟು ವನ ನಿರ್ಮಿಸಲಾಗಿದೆ. ಇದರೊಂದಿಗೆ ರಾಶಿ ವನ, ನವಗ್ರಹ ವನ, ಚಿಟ್ಟೆ ಉದ್ಯಾನವನ್ನು ಕೂಡ ನಿರ್ಮಾಣ ಮಾಡಲಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಓ ಮಂಜುನಾಥ ನಾವಿ ಮಾಹಿತಿ ನೀಡಿದರು.

ಯಾವೆಲ್ಲ ವ್ಯವಸ್ಥೆಗಳು ಇವೆ?
ಇನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿರುವ ಭೀಮಕೋಲ್ ಕೆರೆಗೆ ಎಲ್ಲೆಡೆಯಿಂದಲೂ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅಲ್ಲದೆ ದೇಶ ವಿದೇಶದಲ್ಲಿ ಕಾಣಸಿಗುವ ಪ್ರವಾಸಿ ತಾಣಗಳಂತೆ ಕಂಡುಬರುವ ಈ ತಾಣದಲ್ಲಿ ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಾರ್ಚ್ 17ರಂದು ಲೋಕಾರ್ಪಣೆ
ಹಿಂದಿನ ಸಿಇಓ ಅವರು ಮುತುವರ್ಜಿ ವಹಿಸಿ ಕೆಲಸ ಮಾಡಿಸಿದ ಕಾರಣದಿಂದ ಕೆರೆ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನಮ್ಮ ಸಾಮಾಜಿಕ ಅರಣ್ಯ ಸಮಿತಿಯಿಂದಲೂ ಪರಿಸರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪಂಚವಟಿ ವನ ಸೇರಿದಂತೆ ಇತರೆ ಅಭಿವೃದ್ಧಿ ಮಾಡಲಾಗಿದೆ. ಇದರ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿಗೆ ನೀಡುವ ಬಗ್ಗೆ ಮತ್ತು 10 ರೂ. ಶುಲ್ಕ ಪಡೆಯುವ ಬಗ್ಗೆ ಚರ್ಚಿಸಲಾಗಿದೆ. ಉದ್ಯಾನವನ್ನು ಮಾರ್ಚ್ 17ರಂದು ಲೋಕಾರ್ಪಣೆ ಮಾಡಲಾಗಿದ್ದು, ಇದೀಗ ಇದು ಹೆಚ್ಚು ಆಕರ್ಷಣೀಯವಾಗಿದೆ.












Click it and Unblock the Notifications