ಬೆಂಗಳೂರು ಜನರು ಗೋವಾ ಟ್ರಿಪ್ ರದ್ದು ಮಾಡುತ್ತಿರುವ ಕಾರಣ ಬಹಿರಂಗ!
ಬೆಂಗಳೂರು, ನವೆಂಬರ್ 23: ಬೆಂಗಳೂರು ನಗರದ ಜನರು ಕರಾವಳಿ ಭಾಗದ ಕಡೆ ಪ್ರವಾಸ ಹೋಗಲು ಹೆಚ್ಚು ಉತ್ಸಾಹ ತೋರಿಸುತ್ತಿದ್ದರು. ಗೋವಾ, ಗೋಕರ್ಣ ಮುಂತಾದ ಕಡೆ ಟ್ರಿಪ್ ಹೋಗುತ್ತಿದ್ದರು. ಆದರೆ ಈಗ ಉದ್ಯಾನ ನಗರಿಯ ಪ್ರವಾಸಿಗರು ಗೋವಾ ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಕೆಲವು ರಾಜ್ಯಗಳ ಕಡಲ ತೀರದ ಕಡೆ ಅವರು ಮುಖ ಮಾಡುತ್ತಿಲ್ಲ. ಇದಕ್ಕೆ ಕಾರಣ ಸಹ ಬಹಿರಂಗವಾಗಿದೆ.
ಹಣ ದುಬ್ಬರ ಹೆಚ್ಚಳವಾಗುತ್ತಿರುವ ಹೊತ್ತಿನಲ್ಲಿ ಬೆಂಗಳೂರು ನಗರದ ಜನರು ಕೈಗೆಟುವ ಬೆಲೆಯ ಹೋಟೆಲ್, ವಿಮಾನ ಪ್ರಯಾಣದ ಪ್ಯಾಕೇಜ್‌ಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಧ್ಯಮ ವರ್ಗದ ಜನರು ಹೋಟೆಲ್ ದರಗಳ ವಿಚಾರದಲ್ಲಿ ಹೆಚ್ಚು ಹೆಚ್ಚು ಆಯ್ಕೆಗಳನ್ನು ನೋಡಲು ಆರಂಭಿಸಲಿದ್ದು, ಪ್ರವಾಸ ಹೋಗುವ ಸ್ಥಳಗಳು ಬದಲಾಗುತ್ತಿವೆ.

ಭಾರತದ ಕರಾವಳಿ ತೀರದಲ್ಲಿ ಅದರಲ್ಲೂ ಪ್ರಮುಖವಾಗಿ ಗೋವಾದಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಭಾರೀ ಏರಿಕೆಯಾಗಿದೆ. ಆದ್ದರಿಂದ ಪ್ರವಾಸಿಗರು ಶ್ರೀಲಂಕಾ, ಥೈಲ್ಯಾಂಡ್, ವಿಯೆಟ್ನಾಂ ಮುಂತಾದ ಕಡೆ ಬೀಚ್‌ಗಳ ಪ್ರವಾಸವನ್ನು ಹೆಚ್ಚು ಹೆಚ್ಚು ಕೈಗೊಳ್ಳುತ್ತಿದ್ದಾರೆ. ಗೋವಾ ಕಡೆ ಮುಖ ಮಾಡುವುದನ್ನು ಕಡಿಮೆ ಮಾಡುತ್ತಿದ್ದಾರೆ.
ಪ್ರವಾಸಿಗರಿಗೆ ಹೊರೆ: ದರಗಳು ಹೆಚ್ಚಾಗುತ್ತಿರುವ ಕಾರಣ ಭಾರತದ ಬೀಚ್‌ಗಳಿಗೆ ಪ್ರಮುಖವಾಗಿ ಗೋವಾಕ್ಕೆ ಬೆಂಗಳೂರು ನಗರದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಟೂರಿಸ್ಟ್ ಪ್ಯಾಕೇಜ್ ಆಯೋಜಿಸುವ ಸಂಸ್ಥೆಗಳರು ಹೇಳುತ್ತಿದ್ದಾರೆ.
ಕರ್ನಾಟಕ ಟೂರಿಸಂ ಸೊಸೈಟಿಯ ಎಸ್. ಮಹಾಲಿಂಗಯ್ಯ ಮಾತನಾಡಿ, "ಹಣದುಬ್ಬರದ ಕಾರಣ ಪ್ರವಾಸಿಗರು ದಕ್ಷಿಣ ಏಷ್ಯಾದ ಪ್ರವಾಸಿತಾಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಭಾರತದ ಕರಾವಳಿಗಳಲ್ಲಿ ಅದರಲ್ಲೂ ಗೋವಾದಲ್ಲಿ ಹೋಟೆಲ್‌ಗಳ ದರಗಳು ಹೆಚ್ಚಾಗುತ್ತಿವೆ. ಇದಕ್ಕಿಂತ ವಿಮಾನದಲ್ಲಿ ಹೋಗಿ ಬರುವ ದಕ್ಷಿಣ ಏಷ್ಯಾದ ದೇಶಗಳಲ್ಲಿ ದರಗಳು ಕಡಿಮೆ ಇವೆ" ಎಂದು ಹೇಳಿದ್ದಾರೆ.
"ಗೋವಾದಿಂದ ಕೊಚ್ಚಿ ತನಕ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಪ್ರತಿ ದಿನಕ್ಕೆ 20 ರಿಂದ 25 ಸಾವಿರ ರೂ. ದರವಿದೆ. ಜೊತೆಗೆ ಜಿಎಸ್‌ಟಿ ಪಾವತಿಸಬೇಕು. ಪ್ರವಾಸಿಗರು ಹಣ ಉಳಿಸಲು ಇಷ್ಟ ಪಡುತ್ತಾರೆ. ಕಡಿಮೆ ದರದಲ್ಲಿ ವಿದೇಶದಲ್ಲಿ ಹೆಚ್ಚು ಸೌಲಭ್ಯವಿರುವ ಕಾರಣ ಆ ದೇಶಗಳ ಪ್ರವಾಸಕ್ಕೆ ಆದ್ಯತೆ ನೀಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
"ಬ್ಯಾಂಕಾಕ್, ಬಾಲಿ, ಪುಕೆಟ್, ಸಿಂಗಾಪುರ, ಕೌಲಾಲಂಪುರ, ಕೊಲಂಬೋ ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸುತ್ತಿವೆ. ಆದ್ದರಿಂದ ಹೆಚ್ಚಿನ ಪ್ರವಾಸಿಗರು ಈ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ವಿವರಣೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ದರಗಳು ಸಹ ಅಧಿಕವಾಗಿದೆ. ಆದ್ದರಿಂದ ಪ್ರವಾಸಿಗರು ತಮ್ಮ ಪ್ರಯಾಣದ ಸ್ಥಳಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಈಗ ಗೋಕರ್ಣದ ಕೆಲವು ಬೀಚ್‌ಗಳಲ್ಲಿ ಸಹ ದರಗಳು ಹೆಚ್ಚಿದೆ.
ಇದಕ್ಕಿಂತ ಕಡಿಮೆ ದರಕ್ಕೆ ಥೈಲ್ಯಾಂಡ್, ವಿಯೆಟ್ನಾಂ, ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಬಹುದು. ಅಲ್ಲದೇ ಇನ್ನೂ ಹೆಚ್ಚಿನ ಸೌಲಭ್ಯಗಳು ಅಲ್ಲಿ ಸಿಗುತ್ತವೆ. ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದರೆ ಬ್ಯಾಂಕಾಕ್‌ಗೆ ವಿಮಾನದಲ್ಲಿ 10 ಸಾವಿರ ರೂ.ಗಳನ್ನು ಸಂಚಾರ ನಡೆಸುವ ವ್ಯವಸ್ಥೆಯೂ ಇದೆ ಎಂದು ಟೂರಿಸ್ಟ್ ಪ್ಯಾಕೇಜ್ ಬುಕ್ ಮಾಡುವವರು ಹೇಳುತ್ತಿದ್ದಾರೆ.
ಕರ್ನಾಟಕ ಸರ್ಕಾರ ರಾಜ್ಯದ 320 ಕಿ. ಮೀ. ಕರಾವಳಿ ತೀರಕ್ಕೆ ಪ್ರವಾಸಿಗರನ್ನು ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಘೋಷಣೆ ಮಾಡಿದೆ. ಈ ವರ್ಷದ ಆರಂಭದಲ್ಲಿ ಕರಾವಳಿ ತೀರದಲ್ಲಿ 40 ಪ್ರವಾಸಿ ತಾಣಗಳನ್ನು ಮೂಲ ಸೌಕರ್ಯ ಅಭಿವೃದ್ಧಿಗಾಗಿ ಗುರುತಿಸಲಾಗಿದೆ.
ಅಂಕಿ ಸಂಖ್ಯೆಗಳ ಪ್ರಕಾರ 2023ರಲ್ಲಿ ಕರ್ನಾಟಕದ ಕರಾವಳಿ ಭಾಗಕ್ಕೆ ಪ್ರವಾಸ ಬಂದವರ ಸಂಖ್ಯೆ ಸುಮಾರು 8 ಕೋಟಿ. ರಾಜ್ಯ ಪ್ರವಾಸಿಗರ ಒಟ್ಟು ಸಂಖ್ಯೆಗೆ ಹೋಲಿಕೆ ಮಾಡಿದರೆ ಇದು ಶೇ 12 ರಿಂದ 15 ರಷ್ಟಿದೆ. ಪ್ರವಾಸಿಗರನ್ನು ಸೆಳೆಯಲು ಇಲಾಖೆ ವಿವಿಧ ಯೋಜನೆಗಳನ್ನು ರೂಪಿಸುತ್ತಲೂ ಇದೆ.












Click it and Unblock the Notifications