ಕಪ್ಪತ್ತಗುಡ್ಡ ಪ್ರವಾಸ; ಪ್ರವೇಶ, ಪಾರ್ಕಿಂಗ್ ಶುಲ್ಕದ ಮಾಹಿತಿ
ಗದಗ, ಆಗಸ್ಟ್ 06; ಗದಗ ಜಿಲ್ಲೆಯಲ್ಲಿರುವ ಕಪ್ಪತಗುಡ್ಡ ಏಷ್ಯಾ ಖಂಡದಲ್ಲಿಯೇ ಶುದ್ಧವಾದ ಗಾಳಿಗೆ ಹೆಸರುವಾಸಿ. ಮುಂಗಾರು ಅವಧಿಯಲ್ಲಿ ಕಪ್ಪತಗುಡ್ಡ ಇನ್ನಷ್ಟು ಆಕರ್ಷಕವಾಗಿ ಕಾಣಲಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ನೈಋತ್ಯ ಮುಂಗಾರು ಮಳೆ ಅವಧಿಯಲ್ಲಿ ಸಾವಿರಾರು ಜನರು ಕಪ್ಪತಗುಡ್ಡ ಪ್ರವಾಸಕ್ಕೆ ಹೋಗುತ್ತಾರೆ. ಕಪ್ಪತಗುಡ್ಡ ಚಾರಣಕ್ಕೆ ಹೋಗುವ ಮೊದಲು ಅಲ್ಲಿನ ಪ್ರವೇಶ ಶುಲ್ಕ, ವಾಹನಗಳ ಪಾರ್ಕಿಂಗ್ ಶುಲ್ಕ ಮುಂತಾದ ಮಾಹಿತಿಗಳನ್ನು ತಿಳಿಯುವುದು ಉತ್ತಮ.

ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿಯಾದ ಕಪ್ಪತ್ತಗುಡ್ಡ ಪ್ರಪಂಚದ ಎಲ್ಲಾ ಕಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ವಾಯು ವಿಹಾರ ಮತ್ತು ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದಂತಿದೆ ಕಪ್ಪತಗುಡ್ಡ ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹೇಳಿದೆ.
ಪ್ರವೇಶ ಶುಲ್ಕದ ವಿವರಗಳು; ಗಾಳಿಗುಂಡಿ ಬೆಟ್ಟ ಪ್ರವಾಸಿ ತಾಣ ಕಪ್ಪತ್ತ ಹಿಲ್ಸ್ ವಲಯ, ಮುಂಡರಗಿ ಟಿಕೆಟ್ ಕೌಂಟರ್ ಮಾಹಿತಿ ಪ್ರಕಾರ ಬೆಳಗ್ಗೆ 6 ರಿಂದ ಸಂಜೆ 5 ಗಂಟೆಯ ತನಕ ಪ್ರವಾಸಿಗರಿಗೆ ಅವಕಾಶವಿದೆ.
ವಯಸ್ಕರಿಗೆ ಪ್ರವೇಶ ಶುಲ್ಕ 25 ರೂ., ಮಕ್ಕಳಿಗೆ (7 ರಿಂದ 14 ವರ್ಷ) 10 ರೂ. ಪ್ರವೇಶ ಶುಲ್ಕವಿದೆ. ಸ್ಟಿಲ್ ಕ್ಯಾಮರಾ (200 ಎಂಎಂ ಲೆನ್ಸ್ ಬಿಲೋ) 100 ರೂ. ಶುಲ್ಕ. ಸ್ಟಿಲ್ ಕ್ಯಾಮರಾ (200 ಎಂಎಂ ಲೆನ್ಸ್ ಎಬೋ) 200 ರೂ. ಶುಲ್ಕವಿದೆ. ವಿಡಿಯೋ ಗ್ರಫಿಗೆ (ಮುಂಚಿತವಾಗಿ ಪರವಾನಿಗೆ ಪಡೆಯಬೇಕು) ಶುಲ್ಕ 500 ರೂ. ಆಗಿದೆ.
ಕಪ್ಪತಗುಡ್ಡಕ್ಕೆ ಆಗಮಿಸುವ ದ್ವಿಚಕ್ರ ವಾಹನ ಸವಾರರು 50 ರೂ. ಶುಲ್ಕ, ಲಘು ವಾಹನ (ಕಾರು, ಜೀಪ್) 100 ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಜುಲೈ ಅಂತ್ಯದಲ್ಲಿ ಅತಿಯಾಗಿ ಮಳೆಯಾಗುತ್ತಿರುವುದರಿಂದ ಕಪ್ಪತ್ತಗುಡ್ಡದಲ್ಲಿ ಮಣ್ಣು ಕುಸಿತ ಕಂಡುಬಂದಿರುತ್ತದೆ. ಆದ ಕಾರಣ ಡೋಣಿ ಮಾರ್ಗವಾಗಿ ಕಪ್ಪತ್ತಗುಡ್ಡದ ಗಾಳಿಗುಂಡಿಗೆ ಹೋಗುವ ರಸ್ತೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು. ಆದ್ದರಿಂದ ಚಾರಣ ಕೈಗೊಳ್ಳುವ ಮುನ್ನ ಸ್ಥಳೀಯರಿಂದ ಮಾಹಿತಿ ಪಡೆದು ಸಾಗುವುದು ಉತ್ತಮ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ತನ್ನ ಫೇಸ್‌ಬುಕ್‌ನಲ್ಲಿ ಕಪ್ಪತ್ತಗುಡ್ಡ ಹೇಗೆ ಕಾಣುತ್ತದೆ? ಎಂದು ವಿಡಿಯೋವೊಂದನ್ನು ಹಾಕಿದೆ. ದೇವರೆ ರುಜು ಮಾಡಿದ, ಪ್ರಕೃತಿಯ ಹಚ್ಚಹಸಿರ ಸೊಬಗಿನ ಸೆಳೆತದ ನಡುವೆ ಇನ್ನೇನು ಆಗಸಕ್ಕೆ ತಾಗಿಬಿಡುವೆ ಅಂತಿದೆ ಕಪ್ಪತಗುಡ್ಡದ ವೈಯ್ಯಾರ. ಪವನಶಕ್ತಿಗೆ ಬೀಸೋ ಫ್ಯಾನಿನ ರೆಕ್ಕೆಗಳು ನೋಡೊಕೆ ಒಂದು ಸೋಜಿಗ' ಎಂದು ಹೇಳಿದೆ.
ಬಯಲು ಸೀಮೆಯ ಸಹ್ಯಾದ್ರಿ ಎಂದು ಕರೆಯುವ ಕಪ್ಪತಗುಡ್ಡದ ಬೀಸುವ ತಂಗಾಳಿ, ಚದುರುವ ಶ್ವೇತ ಮೋಡಗಳು ಸೂಜಿಗಲ್ಲಿನಂತಹ ಸೆಳೆತ ಹೊಂದಿವೆ. ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿರುವ ಕಪ್ಪತಗುಡ್ಡ, ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿಯಾಗಿದ್ದು ಪ್ರಪಂಚದ ಎಲ್ಲಾ ಕಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ವಾಯು ವಿಹಾರ ಮತ್ತು ಟ್ರೆಕ್ಕಿಂಗ್ ಗೆ ಹೇಳಿ ಮಾಡಿಸಿದಂತಿದೆ ಕಪ್ಪತಗುಡ್ಡ ಎಂದು ವಿಡಿಯೋ ಸಮೇತ ಪೋಸ್ಟ್ ಹಾಕಿದೆ.
ಉತ್ತರ ಕರ್ನಾಟಕದಲ್ಲಿರುವ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಲಾಗಿದೆ. ಇಲ್ಲಿನ ಖನಿಜ ನಿಕ್ಷೇಪಗಳು ಸುರಕ್ಷಿತವಾಗಿವೆ. ಗುಡ್ಡದಲ್ಲಿರುವ ಔಷಧೀಯ ಸಸ್ಯ ಸಂಪತ್ತು ರಕ್ಷಣೆ ಮಾಡಲು ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ.
ಗದಗ ತಾಲೂಕಿನ ಬಿಂಕದಕಟ್ಟಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರು ತನಕ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 65 ಕಿ. ಮೀ. ಪ್ರದೇಶದಲ್ಲಿ ಕಪ್ಪತ್ತಗುಡ್ಡ ಹರಡಿಕೊಂಡಿದೆ. ಈಗ ಇಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಸಹ ವೃದ್ಧಿಸಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ ಬಳಿಕ ಮನುಷ್ಯನ ಹಸ್ತಕ್ಷೇಪ ತಡೆಯಲು ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ವಿಶೇಷ ಕ್ಯಾಂಪ್, ಗಸ್ತುಗಳ ಮೂಲಕ ಅರಣ್ಯ ಇಲಾಖೆ ಪ್ರಾಣಿಗಳ ಬೇಟೆಗೆ ತಡೆ ಹಾಕಿದೆ. ಬೇಸಿಗೆ ಸಮಯದಲ್ಲಿಯೂ ಪ್ರಾಣಿಗಳು ಗುಡ್ಡದ ಅಂಚಿಗೆ ಬರುವುದು ತಡೆಯಲು ಅಲ್ಲಲ್ಲಿ ಹೊಂಡಗಳನ್ನು ಮಾಡಿ, ನೀರಿನ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications