Vande Bharat Express: 4 ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಕರ್ನಾಟಕಕ್ಕೆ ಒಂದು ರೈಲು
ಬೆಂಗಳೂರು, ಅಕ್ಟೋಬರ್ 27: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ದೇಶದಲ್ಲಿ 55ಕ್ಕೂ ಅಧಿಕ ಮಾರ್ಗದಲ್ಲಿ ಈ ಮಾದರಿಯ ಬಿಳಿ ಮತ್ತು ಕೇಸರಿ ಬಣ್ಣದ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಇಳಿಕೆ ಮಾಡುವಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈಗ ರೈಲ್ವೆ ಇಲಾಖೆ 4 ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಲು ತಯಾರಿ ನಡೆಸುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗೂ ಮೊದಲು ಭಾರತೀಯ ರೈಲ್ವೆ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಆರಂಭಿಸಿತ್ತು. ಇದರಲ್ಲಿ ಕರ್ನಾಟಕಕ್ಕೆ ಹುಬ್ಬಳ್ಳಿ-ಪುಣೆ ನಡುವಿನ ರೈಲು ಸಿಕ್ಕಿತ್ತು. ಈಗ 4 ಹೊಸ ರೈಲು ಸೇವೆ ಆರಂಭವಾಗಲಿದ್ದು, ಕರ್ನಾಟಕಕ್ಕೂ ಒಂದು ರೈಲು ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತೀಯ ರೈಲ್ವೆ ನವೆಂಬರ್ 20ರ ಬಳಿಕ 4 ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಆರಂಭಿಸಲಿದೆ. ಇದಕ್ಕಾಗಿ ಅಗತ್ಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. 4 ಮಾರ್ಗದ ರೈಲುಗಳು ಮಹಾರಾಷ್ಟ್ರ ರಾಜ್ಯಕ್ಕೆ ಸಿಗಲಿವೆ ಎಂಬ ಮಾಹಿತಿ ಇದೆ. ಮಹಾರಾಷ್ಟ್ರದಿಂದ ದೇಶದ ವಿವಿಧ ನಗರಗಳಿಗೆ ರೈಲುಗಳು ಸಂಚಾರವನ್ನು ನಡೆಸಲಿವೆ.
4 ಹೊಸ ಮಾರ್ಗಗಳು: ಸದ್ಯದ ಮಾಹಿತಿ ಪ್ರಕಾರ 4 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪುಣೆ-ಶೆಗಾನ್, ಪುಣೆ-ವಡೋದರಾ, ಪುಣೆ-ಸಿಕಂದರಾಬಾದ್ ಮತ್ತು ಪುಣೆ-ಬೆಳಗಾವಿ ನಡುವೆ ಸಂಚಾರವನ್ನು ನಡೆಸಲಿದೆ. ಸದ್ಯ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ-2024ರ ನೀತಿ ಸಂಹಿತೆ ಜಾರಿಯಲ್ಲಿದೆ. ನವೆಂಬರ್ 25ಕ್ಕೆ ನೀತಿ ಸಂಹಿತೆ ಮುಕ್ತಾಯವಾಗಲಿದ್ದು, ಬಳಿಕ ರೈಲು ಸೇವೆ ಆರಂಭವಾಗುವ ನಿರೀಕ್ಷೆ ಇದೆ.
ಬೆಳಗಾವಿಗೆ ಈಗಾಗಲೇ ವಂದೇ ಭಾರತ್ ರೈಲು ಸಂಪರ್ಕವಿದೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ವಯಾ ಬೆಳಗಾವಿ ಸಂಚಾರವನ್ನು ನಡೆಸುತ್ತಿದೆ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿಗೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ರೈಲ್ವೆ ಇಲಾಖೆ ಒಪ್ಪಿಗೆ ನೀಡಿ, ಪ್ರಾಯೋಗಿಕ ಸಂಚಾರ ಮುಗಿದು 11 ತಿಂಗಳು ಕಳೆದರೂ ರೈಲು ಸೇವೆ ಇನ್ನು ಆರಂಭವಾಗಿಲ್ಲ.
ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. ಈ ಕುರಿತು ವಿವಿಧ ಜನಪ್ರತಿನಿಧಿಗಳು ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಈಗ ರೈಲ್ವೆ ಇಲಾಖೆ ಪುಣೆ-ಬೆಳಗಾವಿ ನಡವೆ ವಂದೇ ಭಾರತ್ ರೈಲು ಓಡಿಸಲು ತೀರ್ಮಾನಿಸಿದೆ ಎಂಬ ಮಾಹಿತಿ ಇದೆ.
ಹುಬ್ಬಳ್ಳಿ-ಪುಣೆ ನಡುವಿನ ರೈಲು ಮೊದಲು ವಾರದಲ್ಲಿ 6 ದಿನ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅದನ್ನು 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಈ ರೈಲು ಹುಬ್ಬಳ್ಳಿಯಿಂದ ಹೊರಟು ಬೆಳಗಾವಿ ಮೂಲಕ ಪುಣೆಯನ್ನು ತಲುಪುತ್ತದೆ. ಈ ರೈಲನ್ನು ಕೊಲ್ಹಾಪುರ ಮಾರ್ಗವಾಗಿ ಓಡಿಸಲು ರೈಲ್ವೆ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೆ ಆಕ್ಷೇಪವೂ ವ್ಯಕ್ತವಾಗಿತ್ತು.
ಹುಬ್ಬಳ್ಳಿ-ಪುಣೆ ಮಾರ್ಗವನ್ನು ವಂದೇ ಭಾರತ್ ರೈಲು 8 ಗಂಟೆ 30 ನಿಮಿಷದಲ್ಲಿ ಕ್ರಮಿಸುತ್ತದೆ. ಆದರೆ ಕೊಲ್ಹಾಪುರ ಮಾರ್ಗದಲ್ಲಿ ಓಡಿಸಿದರೆ ಇನ್ನೂ ಎರಡೂವರೆ ಗಂಟೆ ಪ್ರಯಾಣದ ಅವಧಿ ಹೆಚ್ಚಾಗಲಿದೆ. ಆದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಬಹುದು ಎಂಬ ಕಾರಣಕ್ಕೆ ಈ ಪ್ರಸ್ತಾವನೆ ಕೈಬಿಡಲಾಗಿತ್ತು.
ಈ ಹಿನ್ನಲೆಯಲ್ಲಿ ಭಾರತೀಯ ರೈಲ್ವೆ ವಾರದಲ್ಲಿ ಮೂರು ಹುಬ್ಬಳ್ಳಿ-ಪುಣೆ ವಯಾ ಬೆಳಗಾವಿ. ವಾರದಲ್ಲಿ ಮೂರು ದಿನ ಪುಣೆ-ಕೊಲ್ಹಾಪುರ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ತೀರ್ಮಾನಿಸಿದೆ. ಆದ್ದರಿಂದ ಹುಬ್ಬಳ್ಳಿ-ಪುಣೆ ನಡುವಿನ ರೈಲು 3 ದಿನಕ್ಕೆ ಸೀಮಿತವಾಗಿದೆ.
ಈಗ ಬೆಳಗಾವಿ-ಪುಣೆ ನಡುವೆ ಹೊಸ ರೈಲು ಪ್ರಸ್ತಾಪಿಸಲಾಗಿದೆ. ಉಭಯ ನಗರಗಳ ನಡುವೆ ಪ್ರತಿದಿನ ನೂರಾರು ಜನರು ವ್ಯಾಪಾರ ಸೇರಿದಂತೆ ವಿವಿಧ ಕಾರಣಕ್ಕೆ ಸಂಚಾರವನ್ನು ನಡೆಸುತ್ತಾರೆ. ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಅವರಿಗೆ ಅನುಕೂಲವಾಗಲಿದೆ. ಯಾವಾಗ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.











Click it and Unblock the Notifications