ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು ನಡುವೆ 4 ಪಥದ ರೈಲು ಮಾರ್ಗ
ಬೆಂಗಳೂರು, ಜೂನ್ 24: ನೈಋತ್ಯ ರೈಲ್ವೆ ಬೆಂಗಳೂರು ನಗರ ಸಂಪರ್ಕಿಸುವ ಎರಡು ಪ್ರಮುಖ ನಗರಗಳ ನಡುವೆ 4 ಪಥದ ರೈಲು ಮಾರ್ಗ ನಿರ್ಮಾಣ ಮಾಡಲು ಮುಂದಾಗಿದೆ. ಈ ಯೋಜನೆ ಕುರಿತು ಈಗಾಗಲೇ ರೈಲ್ವೆ ಮಂಡಳಿಗೆ ವರದಿ ಸಲ್ಲಿಕೆಯಾಗಿದ್ದು, ಬಜೆಟ್‌ನಲ್ಲಿ ಘೋಷಣೆಯಾಗಲಿದೆಯೇ? ಕಾದು ನೋಡಬೇಕಿದೆ.
ಹೆಚ್ಚುತ್ತಿರುವ ರೈಲುಗಳ ಸಂಖ್ಯೆ, ರೈಲುಗಳ ಸುಗಮ ಸಂಚಾರ, ರೈಲಿನ ವೇಗ ಹೆಚ್ಚಳ ಮಾಡುವುದು ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. 4 ಪಥದ ರೈಲು ಯೋಜನೆಗೆ ಪ್ರಾಥಮಿಕ ಸಮೀಕ್ಷೆಯೂ ಪೂರ್ಣಗೊಂಡಿದೆ.

ಸದ್ಯ ಬೆಂಗಳೂರು ನಗರಕ್ಕೆ ಈ ಎರಡು ನಗರಗಳಿಂದ ಜೋಡಿ ಮಾರ್ಗವಿದೆ. ಆದರೆ ದಿನದಿಂದ ದಿನಕ್ಕೆ ರೈಲುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ನಾಲ್ಕು ಪಥದ ಮಾರ್ಗದ ಪ್ರಸ್ತಾವನೆ ತಯಾರಿಸಲಾಗಿದೆ. ರೈಲ್ವೆ ಇಲಾಖೆ ಮೊದಲು ಯೋಜನೆಗೆ ಒಪ್ಪಿಗೆ ನೀಡಬೇಕಿದೆ.
ಯಾವ-ಯಾವ ನಗರ: ಬೆಂಗಳೂರು-ಮೈಸೂರು ನಡುವೆ 137 ಕಿ. ಮೀ. ಮತ್ತು ಬೆಂಗಳೂರು-ತುಮಕೂರು ನಡುವೆ 70 ಕಿ. ಮೀ. 4 ಪಥದ ರೈಲು ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗ ನಿರ್ಮಾಣದಿಂದ ರೈಲುಗಳ ಸಂಚಾರಕ್ಕೆ ಅನುಕೂಲವಾಗುವ ಜೊತೆಗೆ ಆದಾಯವೂ ಹೆಚ್ಚಳವಾಗಲಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದ್ದು, ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಲಾಗಿದೆ.
ನಾಲ್ಕು ಪಥದ ಮಾರ್ಗ ನಿರ್ಮಾಣಕ್ಕೆ ಆಗುವ ಅಂದಾಜು ವೆಚ್ಚ, ಯೋಜನೆಗೆ ಬೇಕಾದ ಜಮೀನು, ರೈಲುಗಳ ವೇಗ ಎಷ್ಟು ಹೆಚ್ಚಿಸಬಹುದು, ಆರ್ಥಿಕ ಲಾಭಗಳು ಮುಂತಾದ ಅಂಶಗಳನ್ನು ಸೇರಿಸಿ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ಈ ಕುರಿತು ಅಂತಿಮ ಹಂತದ ಸ್ಥಳ ಸಮೀಕ್ಷೆ ನಡೆಯಲಿದೆ. ಬಳಿಕ ಯೋಜನೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಬೆಂಗಳೂರು ನಗರ ಹೊರತುಪಡಿಸಿ ಇತರ ನಗರಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಸರ್ಕಾರ ಮೊದಲು ರಾಜಧಾನಿಯಿಂದ ಹತ್ತಿರದ ನಗರಗಳಿಗೆ ಸಾರಿಗೆ ಸೇವೆ ಉತ್ತಮಗೊಳಿಸಲು ಪ್ರಯತ್ನ ನಡೆಸುತ್ತಿದೆ. ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಸೇರಿ ಅನೇಕ ರೈಲುಗಳ ಸಂಚಾರವಿದೆ.
ಬೆಂಗಳೂರು-ತುಮಕೂರು ಮಾರ್ಗ ಉತ್ತರ ಕರ್ನಾಟಕ, ಮಲೆನಾಡು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ತುಮಕೂರು ಕೈಗಾರಿಕಾ ಹಬ್ ಆಗಿ ಬದಲಾಗುತ್ತಿದೆ. ಈಗಿರುವ ಹೆದ್ದಾರಿ, ಜೋಡಿ ರೈಲ್ವೆ ಹಳಿ ಮೇಲೆ ಒತ್ತಡ ಸಾಕಷ್ಟಿದೆ. ಆದ್ದರಿಂದ ನಾಲ್ಕು ಪಥದ ಮಾರ್ಗ ನಿರ್ಮಾಣ ಮಾಡಿ, ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಲಾಗಿದೆ.
ಬೆಂಗಳೂರು-ಮೈಸೂರು ಮಾರ್ಗದಲ್ಲಿ ತಿರುವುಗಳು ಹೆಚ್ಚಿವೆ. ವಂದೇ ಭಾರತ್ ಸೇರಿ ಅನೇಕ ರೈಲುಗಳು ಸಂಚಾರ ನಡೆಸುತ್ತಿದ್ದರೂ ಸಹ ಪ್ರಯಾಣದ ಅವಧಿ ಹೆಚ್ಚಿದೆ. ಆದ್ದರಿಂದ ನಾಲ್ಕು ಪಥ ನಿರ್ಮಾಣ ಮಾಡಿ ಸಂಚಾರ ವ್ಯವಸ್ಥೆ ಸುಗಮವಾಗಿಸುವುದು ರೈಲ್ವೆ ಇಲಾಖೆಯ ಉದ್ದೇಶವಾಗಿದೆ.
ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ. ಕಳೆದ ವಾರ ಅವರು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಆದ್ದರಿಂದ ರಾಜಧಾನಿ ಮೇಲಿನ ಒತ್ತಡ ಕಡಿಮೆ ಮಾಡುವ, ಸಂಚಾರ ಸುಲಭವಾಗಿಸುವ ಈ ನಾಲ್ಕು ಪಥದ ಯೋಜನೆಗೆ ಒಪ್ಪಿಗೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಅನ್ನು ಜುಲೈನಲ್ಲಿ ಮಂಡಿಸಲಿದ್ದಾರೆ. ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಮಂಡನೆಯಾಗುತ್ತದೆ. ಆದ್ದರಿಂದ ಈ ಚತುಷ್ಪಥ ರೈಲು ಯೋಜನೆ ಘೋಷಣೆಯಾಗಲಿದೆಯೇ? ಕಾದು ನೋಡಬೇಕು.











Click it and Unblock the Notifications